ಬೀದರ್ ಜಿಲ್ಲೆಯಲ್ಲಿ ರೈತರು ಬೆಳೆದ ಸೋಯಾಬಿನ್ ಸಂಪೂರ್ಣ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಅಡಿ ಖರೀದಿಸಿ ಎಲ್ಲ ರೈತರಿಗೆ ಬೆಂಬಲ ಬೆಲೆ ಲಾಭ ಸಿಗುವಂತೆ ಕ್ರಮಕೈಗೊಳ್ಳಬೇಕೆಂದು ಸಂಸದ ಸಾಗರ್ ಖಂಡ್ರೆ ಅವರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಲೋಕಸಭೆಯಲ್ಲಿ ಬುಧವಾರ ಗಮನ ಸೆಳೆದ ಅವರು, ʼಬೀದರ್ ಕ್ಷೇತ್ರದಲ್ಲಿ ವಾರ್ಷಿಕ 20 ಲಕ್ಷ ಕ್ವಿಂಟಲ್ ಸೋಯಾಬೀನ್ ಬೆಳೆ ಬೆಳೆಯಲಾಗುತ್ತಾದರೂ ಬೆಂಬಲ ಬೆಲೆ ಅಡಿಯಲ್ಲಿ ಕೇವಲ 2 ಲಕ್ಷ ಕ್ವಿಂಟಲ್‌ಗಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಖರೀದಿ ನಡೆಯುತ್ತಿದೆʼ ಎಂದರು.
ʼಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಮುಗಿದಿರುವ ಕಾರಣಕ್ಕೆ ರೈತರಿಗೆ ಹೆಚ್ಚಿನ ಲಾಭ ಆಗಿಲ್ಲ. ಈ ಬೆಳೆ ಬೆಳೆದ ಶೇ 90ರಷ್ಟು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಲಾಭ ಸಿಕ್ಕಿಲ್ಲ. ಹೀಗಾಗಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ಸರ್ಕಾರ ಧಾವಿಸಬೇಕುʼ ಎಂದು ಆಗ್ರಹಿಸಿದರು.
ʼಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಎಕರೆಗೆ ಕೇವಲ 5 ಕ್ವಿಂಟಲ್‌ನಂತೆ ಒಟ್ಟು 20 ಕ್ವಿಂಟಲ್ ಮಾತ್ರ ಖರೀದಿ ಮಾಡಲಾಗುತ್ತಿರುವುದರಿಂದ ಹೆಚ್ಚಿನ ರೈತರು ಬೆಂಬಲ ಬೆಲೆ ಲಾಭದಿಂದ ವಂಚಿತರಾಗುತ್ತಿದ್ದಾರೆ. ಕ್ಷೇತ್ರದ ರೈತರ ಬಾಕಿ ಉಳಿದ ಸಂಪೂರ್ಣ ಸೋಯಾಬಿನ್ ಎಂಎಸ್‌ಪಿ ಅಡಿಯಲ್ಲಿ ಖರೀದಿಸಬೇಕು. ಇದರೊಂದಿಗೆ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.