ಸರ್ಕಾರವು ಸಾರ್ವಜನಿಕ ಆರೋಗ್ಯ ಸೇವೆಯ ಬಗ್ಗೆ ಮಾತನಾಡುತ್ತಿದ್ದರೂ ಅದರ ನೀತಿಗಳು ಮತ್ತು ಯೋಜನೆಗಳು ಮಾತ್ರ ಕೆಲವು ವರ್ಗದ ಜನತೆಗೆ ಮಾತ್ರ ದಕ್ಕುವ ರೀತಿಯ ಧೋರಣೆಯನ್ನು ಹೊಂದಿವೆ. ಇದರಿಂದಾಗಿ ಬಹಳಷ್ಟು ಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ.
ರಾಜ್ಯದ ಜನರ ಆರೋಗ್ಯ ಕಾಪಾಡುವ ಹೊಣೆ ಹೊತ್ತ ಆರೋಗ್ಯ ಇಲಾಖೆಯ ‘ಆರೋಗ್ಯ’ ಹೇಗಿದೆ ಎನ್ನುವುದರ ಬಗ್ಗೆ ಚರ್ಚೆಯಾಗುತ್ತಿದೆ. ಮೂರು ಹಂತಗಳಲ್ಲಿ ಆರೋಗ್ಯ ಇಲಾಖೆಯನ್ನು ಬಲವರ್ಧನೆಗೊಳಿಸಲು 1,118.59 ಕೋಟಿ ರೂ. ಮೊತ್ತದ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಸ್ತಾವನೆ ಸಲ್ಲಿಸಿದೆ. ಇದೇ ಜುಲೈನಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಲಿರುವ ಪರಿಷ್ಕೃತ ಆಯವ್ಯಯದ ಕುರಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಸಕ್ತ ಸಾಲಿನ ಆರ್ಥಿಕ ವರ್ಷಕ್ಕೆ ಅವಶ್ಯವಿರುವ ಮತ್ತು ಹೆಚ್ಚುವರಿ ಅನುದಾನದ ವಿವರವನ್ನು ನೀಡಿದೆ.
ಕಳೆದ ಫೆಬ್ರವರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15,151 ಕೋಟಿ ರೂ. ಅನುದಾನ ನೀಡಿದ್ದರು. ಕೋವಿಡ್ ಕಾಲದ ಸಾವು-ನೋವುಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು. ಆದರೂ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತರಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೊಸ ಸರ್ಕಾರ ಬಂದಿದೆ. ಹಿಂದಿನ ಸರ್ಕಾರ ಮಂಡಿಸಿದ ಬಜೆಟ್ ಅನ್ನು ಪಕ್ಕಕ್ಕಿಟ್ಟು ಸಿದ್ದರಾಮಯ್ಯ ಪರಿಷ್ಕೃತ ಬಜೆಟ್ ಮಂಡಿಸುವ ಉತ್ಸಾಹದಲ್ಲಿದ್ದಾರೆ. ಸಹಜವಾಗಿಯೇ ಆರೋಗ್ಯ ಇಲಾಖೆ ಕೂಡ, ತನ್ನ ಬಲವರ್ಧನೆಗೆ 1,118.59 ಕೋಟಿಗಳ ಹೆಚ್ಚುವರಿ ಅನುದಾನ ಕೇಳಿದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಇಲಾಖೆಯಲ್ಲಿ ಬದಲಾವಣೆ ತರುವ, ಸೇವೆಯನ್ನು ಉತ್ತಮಗೊಳಿಸುವ, ಜನಸ್ನೇಹಿಯಾಗುವ ಮಾತುಗಳನ್ನು ಆಡುತ್ತಿದ್ದಾರೆ. ಕಳೆದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಡಾ. ಸುಧಾಕರ್ ಕೂಡ ಆರಂಭದಲ್ಲಿ ಇದೇ ರೀತಿಯ ಮಾತುಗಳನ್ನು ಆಡಿದ್ದರು ಎಂಬುದನ್ನೂ ಗಮನಿಸಬೇಕಾಗಿದೆ.
ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಒಂದು ವರ್ಷಕ್ಕೆ ಸುಮಾರು 15 ಸಾವಿರ ಕೋಟಿಗಳಷ್ಟು ಅನುದಾನ ಎತ್ತಿಟ್ಟರೂ; ಅದು ಆಸ್ಪತ್ರೆ, ವೈದ್ಯರು, ಔಷಧಿಗಳಿಗಾಗಿ ವಿನಿಯೋಗವಾದರೂ, ಕೊರೊನಾದಂತಹ ಧುತ್ತನೆ ಎದುರಾದ ರೋಗಗಳನ್ನು ಸಮರ್ಥವಾಗಿ ನಿಭಾಯಿಸಲಾಗದೆ ಸಾವು-ನೋವುಗಳಿಗೆ ಜನ ತುತ್ತಾಗಬೇಕಾಯಿತು. ಕಳೆದ ಬಿಜೆಪಿ ಸರ್ಕಾರಕ್ಕೆ ಕೋವಿಡ್ ಕೂಡ ವರದಾನವಾಗಿ ಪರಿಣಮಿಸಿತು. ಅಂದರೆ, ಸರ್ಕಾರಗಳು ಜನರ ಮೂಲಭೂತ ಹಕ್ಕಾದ ಆರೋಗ್ಯದಂತಹ ಕ್ಷೇತ್ರವನ್ನೂ ಕೂಡ ವ್ಯಾವಹಾರಿಕವಾಗಿ ನೋಡಿದ ಪರಿಣಾಮವಾಗಿ ಜನಸೇವೆ, ಜನಸ್ನೇಹಿ ಎನ್ನುವುದು ನಗೆಪಾಟಲಿಗೀಡಾಯಿತು.
ರಾಜ್ಯದಲ್ಲಿ 50ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಪ್ರತಿವರ್ಷ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ದೇಶದಲ್ಲೇ ರಾಜ್ಯ ಮೂರನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಘಟನೆಯ ಮಾನದಂಡದ ಪ್ರಕಾರ 1,000 ಜನರಿಗೆ ಒಬ್ಬರು ವೈದ್ಯರು ಇರಬೇಕು. ಆದರೆ, ರಾಜ್ಯದ ಕೆಲವು ಕಡೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರಿಗೆ ಒಬ್ಬ ವೈದ್ಯರಿದ್ದಾರೆ. ಲಕ್ಷ-ಕೋಟಿಗಳಲ್ಲಿ ಶುಲ್ಕ ಪಾವತಿಸಿ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ವೈದ್ಯರಿಂದ ಗ್ರಾಮೀಣ ಪ್ರದೇಶದಲ್ಲಿ ಸೇವೆ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ಸರ್ಕಾರದ ಮುಂದಿದೆ. ಶಾಸಕ-ಸಚಿವರೇ ಕ್ಯಾಪಿಟೇಷನ್ ಕಾಲೇಜುಗಳ ಪಾಲುದಾರರಾಗಿರುವಾಗ, ಕಠಿಣ ಕ್ರಮ ಎನ್ನುವುದು ಹಾಸ್ಯಾಸ್ಪದ ವಸ್ತುವಾಗಿದೆ.
ಸರ್ಕಾರವು ಸಾರ್ವಜನಿಕ ಆರೋಗ್ಯ ಸೇವೆಯ ಬಗ್ಗೆ ಮಾತನಾಡುತ್ತಿದ್ದರೂ ಅದರ ನೀತಿಗಳು ಮತ್ತು ಯೋಜನೆಗಳು ಮಾತ್ರ ಕೆಲವು ವರ್ಗದ ಜನತೆಗೆ ಮಾತ್ರ ದಕ್ಕುವ ರೀತಿಯ ಧೋರಣೆಯನ್ನು ಹೊಂದಿವೆ. ಇದರಿಂದಾಗಿ ಬಹಳಷ್ಟು ಜನರು ಆರೋಗ್ಯ ಸೇವೆಯಿಂದ ವಂಚಿತರಾಗುತ್ತಿದ್ದಾರೆ. ದುಬಾರಿ ಹಣ ತೆತ್ತು ಖಾಸಗಿ ಆಸ್ಪತ್ರೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಹಣ ಮತ್ತು ಜೀವ- ಎರಡನ್ನೂ ಕಳೆದುಕೊಂಡು ಹೈರಾಣಾಗುತ್ತಿದ್ದಾರೆ. ಇದು ಬದಲಾಗಬೇಕೆಂದರೆ ಆರೋಗ್ಯ ಸೇವೆಯನ್ನು ಮಾರುಕಟ್ಟೆಯ ಹಂಗಿನಿಂದ ಮುಕ್ತಗೊಳಿಸಿ ಸರ್ಕಾರದ ಜವಾಬ್ದಾರಿಯನ್ನಾಗಿ ಮಾಡಬೇಕಿದೆ. ಸರ್ಕಾರಿ ಸೇವೆಯಲ್ಲಿರುವ ವೈದ್ಯರ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವತ್ತ ಹೆಜ್ಜೆ ಇಡಬೇಕಾಗಿದೆ. ರಾಜ್ಯದ ಕೆಲವು ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಸುಪರ್ದಿಗೆ ವಹಿಸಲು ಬಿಜೆಪಿ ಸರ್ಕಾರ ಮುಂದಾಗಿತ್ತು. ಅಂಥ ಪ್ರವೃತ್ತಿಗಳಿಗೆ ಕಾಂಗ್ರೆಸ್ ಸರ್ಕಾರ ಕಡಿವಾಣ ಹಾಕಬೇಕಿದೆ. ಆರೋಗ್ಯ ಸೇವೆಯನ್ನು ಜನರಿಗೆ ಸುಲಭವಾಗಿ, ಸಮರ್ಪಕವಾಗಿ ಸಿಗುವಂತೆ ನೋಡಿಕೊಳ್ಳಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ; ಸರ್ಕಾರಕ್ಕೆ ಇರಲಿ ಎಚ್ಚರ
ಮೊದಲಿಗೆ ಸರಕಾರಿ ಆಸ್ಪತ್ರೆಗಳ ವೇಳಾಪಟ್ಟಿಯನ್ನು ಬದಲಿಸಬೇಕು. ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಅಥವಾ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಸೇವಾವಧಿಯನ್ನು ಕಡ್ಡಾಯಗೊಳಿಸಬೇಕು. ಹೀಗೆ ಮಾಡುವುದರಿಂದ ವೈದ್ಯರು ಮತ್ತು ಸಿಬ್ಬಂದಿ ಊಟ-ತಿಂಡಿ-ಕಾಫಿ ಎಂದು ಹೊರಗೆ ಹೋಗುವುದು ಮತ್ತು ಸಮಯ ಕೊಲ್ಲುವುದು ತಪ್ಪುತ್ತದೆ. ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಬರುವ ಜನರಿಗೆ ಸಮಯ ಉಳಿಯುತ್ತದೆ. ಚಿಕಿತ್ಸೆಗೆ ಅನುಕೂಲವಾಗುತ್ತದೆ.
ಹಾಗೆಯೇ ಸರ್ಕಾರಿ ವೈದ್ಯರು ಯಾವುದೇ ಕಾರಣಕ್ಕೂ ಹೊರಗೆ ಸೇವೆ ಸಲ್ಲಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಸಂಬಳ ಪಡೆದು, ಅದೇ ಸಮಯದಲ್ಲಿ ಹೊರಗೆ ಸೇವೆ ಸಲ್ಲಿಸುವ ವೈದ್ಯರಿಗೆ ದಂಡ ಹಾಕುವ, ಕೆಲಸದಿಂದ ಅಮಾನತು ಮಾಡುವ ಬಗ್ಗೆ ಕಾಯ್ದೆ ಜಾರಿಗೆ ತರಬೇಕು. ಇವೆರಡು ಕ್ರಮಗಳು ದೇಶದ ಇತರ ರಾಜ್ಯಗಳಾದ ಕೇರಳ, ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಜಾರಿಯಲ್ಲಿದೆ. ಆಂಧ್ರಪ್ರದೇಶದಲ್ಲಿ ಹೊಸಬರಿಗೆ 5 ವರ್ಷಗಳವರೆಗೆ ವರ್ಗಾವಣೆ ಇಲ್ಲ ಎಂಬ ಕಾನೂನನ್ನೇ ಮಾಡಲಾಗಿದೆ. ಇದು ಜನರಿಗೂ ಹಾಗೂ ವೈದ್ಯಕೀಯ ಸಿಬ್ಬಂದಿಗೂ ಅನುಕೂಲಕರವಾಗಿದೆ. ಸೇವೆ ಸರಾಗವಾಗಿದೆ. ಸರ್ಕಾರಿ ಆಸ್ಪತ್ರೆಗಳತ್ತ ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಸಾರ್ವಜನಿಕ ಹಣ ಸದುಪಯೋಗವಾಗುತ್ತಿದೆ.
ಇದೇ ರೀತಿಯ ಮತ್ತೊಂದು ಕ್ರಮವೆಂದರೆ, ಔಷಧಿ, ಉಪಕರಣ ಖರೀದಿಯನ್ನು ಕೇಂದ್ರೀಕೃತ ವ್ಯವಸ್ಥೆಗೆ ಒಳಪಡಿಸಬೇಕಿದೆ. ಅಂದರೆ ಉತ್ಪಾದಕರಿಂದ ನೇರವಾಗಿ ಆಸ್ಪತ್ರೆಗೆ ಬಂದು ಬೀಳುವಂತೆ ಮಾಡುವುದು. ದಲ್ಲಾಳಿಗಳ ಹಸ್ತಕ್ಷೇಪವನ್ನು ತಪ್ಪಿಸುವುದು. ಭ್ರಷ್ಟಾಚಾರವನ್ನು ತಡೆಗಟ್ಟುವುದು. ಇದು ಪಕ್ಕದ ತಮಿಳುನಾಡಿನಲ್ಲಿ ಜಾರಿಯಲ್ಲಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತದೆ, ಜನರಿಗೆ ಗುಣಮಟ್ಟದ ಔಷಧಿ ದೊರಕುತ್ತದೆ. ಈ ಪಾರದರ್ಶಕ ವ್ಯವಸ್ಥೆಯಿಂದ ಸರ್ಕಾರಕ್ಕೆ ಒಳ್ಳೆಯ ಹೆಸರೂ ಬರುತ್ತದೆ.
ಹೊಸ ಸರ್ಕಾರ ರಚನೆಯಾದಾಗ ಈ ರೀತಿಯ ಚರ್ಚೆಗಳು ಚಾಲ್ತಿಗೆ ಬರುವುದು ಸಹಜ. ಆದರೆ ಅವು ಜನಸ್ನೇಹಿ ಕಾರ್ಯಕ್ರಮಗಳಾಗಿದ್ದರೆ, ಸರ್ಕಾರದ ಉದ್ದೇಶವೂ ಜನಪರವಾಗಿದ್ದರೆ, ಜಾರಿಗೆ ತರಬಾರದೇಕೆ? ಕಳೆದ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದಿದ್ದೇ ಆರೋಗ್ಯ ಇಲಾಖೆ. ಅದು ಈ ಹೊಸ ಸರ್ಕಾರದ ಗಮನದಲ್ಲಿರಬೇಕಲ್ಲವೇ?
