ಖಾಲಿ ನಿವೇಶನದ ವಿಚಾರವಾಗಿ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ, ಹೊಡೆದಾಟ ನಡೆದಿದ್ದು, ಇಬ್ಬರು ಮಹಿಳೆಯರೂ ಸೇರಿ ಮೂವರು ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ನಡೆದಿದೆ.
ಹಾಲಪ್ಪ ವಣ್ಣೂರೆ, ಸತ್ಯವ್ವ ವಣ್ಣೂರೆ ಹಾಗೂ ನಿಂಗವ್ವ ಗಾಯಗೊಂಡಿರುವವರು. ಡಿಸಿಪಿ ರೋಹನ್ ಜಗದೀಶ್ ಹಾಗೂ ತಂಡ ಸ್ಥಳಕ್ಕಾಗಮಿಸಿ ಪರಿಸ್ಥಿತಿ ಹತೋಟಿಗೆ ತಂದಿದೆ. ಇತ್ತ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಣ್ಣೂರೆ ಹಾಗೂ ಹುಳಿಕಾರ್ ಮನೆತನಗಳು ಮನೆಯ ಪಕ್ಕದ ಖಾಲಿ ಜಾಗಕ್ಕೆ ಕಿತ್ತಾಡಿಕೊಂಡಿದ್ದಾರೆ. ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಲು ವಣ್ಣೂರೆ ಕುಟುಂಬಸ್ಥರು ಮುಂದಾಗಿದ್ದಾರೆ. ಈ ವೇಳೆ ಜಾಗ ತಮಗೆ ಸೇರಿದ್ದು ಎಂದು ಹುಳಿಕಾರ್ ಕುಟುಂಬಸ್ಥರು ಜಗಳ ತೆಗೆದಿದ್ದಾರೆ. ವಾದ ವಿವಾದ ತಾರಕಕ್ಕೇರಿ ಎರಡೂ ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.
ಇದನ್ನೂ ಓದಿ: ಬೆಳಗಾವಿ | ಮರಾಠಿಯಲ್ಲಿ ಮಾತನಾಡಿಲ್ಲವೆಂದು ‘ಪಿಡಿಒ’ಗೆ ಬೆದರಿಕೆ
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಪ್ರತಿಕ್ರಿಯಿಸಿ, ಇದು ಎರಡು ಕುಟುಂಬಗಳ ನಡುವಿನ ಜಗಳ.. ಹೆಚ್ಚೇನು ತೊಂದರೆಯಾಗಿಲ್ಲ. ಸ್ಥಳದಲ್ಲಿ ಭದ್ರತೆ ನೀಡಲಾಗಿದೆ ಎಂದಿದ್ದಾರೆ.
