ಅದು 2000ದ ಮಾರ್ಚ್ 11, ಅಂದು ಕೋಲಾರ ಜಿಲ್ಲೆಯ (ಈಗ ಚಿಕ್ಕಬಳ್ಳಾಪುರ ಜಿಲ್ಲೆ) ಕಂಬಾಲಪಲ್ಲಿಯಲ್ಲಿ ಏಳು ಮಂದಿ ದಲಿತರನ್ನು ಪ್ರಬಲ ರೆಡ್ಡಿ ಸಮುದಾಯದವರು ಜೀವಂತವಾಗಿ ಸುಟ್ಟು ಕೊಂದ ದಿನ. ಆ ಘಟನೆ ನಡೆದ ಮೊನ್ನೆಗೆ (ಮಾರ್ಚ್ 11) 25 ವರ್ಷಗಳು ಕಳೆದಿವೆ. ಆದರೆ, ಕೊಂದವರು ಯಾರು? ಅಪರಾಧಿಗಳು ಯಾರು? ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಕೊಳೆಯುತ್ತಿದೆ. ಆದರೆ, ವಿಚಾರಣೆಯೇ ನಡೆದಿಲ್ಲ. ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮನಸ್ಸು ಮಾಡುತ್ತಿಲ್ಲ.
2000ದ ಮಾರ್ಚ್ 10ರಂದು ಬೈಕ್‌ಗೆ ದಾರಿ ಬಿಡುವ ಕ್ಷುಲ್ಲಕ ಕಾರಣಕ್ಕೆ ದಲಿತ ಶ್ರೀರಾಮಪ್ಪ ಜೊತೆ ವೆಂಕಟರೆಡ್ಡಿ ಎಂಬಾತ ಜಗಳ ಮಾಡಿದ್ದ. ಗಲಾಟೆಯಲ್ಲಿ ಶ್ರೀರಾಮಪ್ಪ ಮೇಲೆ ವೆಂಕಟರೆಡ್ಡಿ ಮತ್ತು ಪ್ರಬಲ ಜಾತಿಯ ಇತರರು ಹಲ್ಲೆಗೈದಿದ್ದರು. ಘಟನೆ ಬಗ್ಗೆ ತಿಳಿದ ಪೊಲೀಸರು ಕಂಬಾಲಪಲ್ಲಿಗೆ ಮೀಸಲು ಪಡೆಯನ್ನು ಕಳಿಸಿದರು. ಮಾರನೆ ದಿನ, ಮಾರ್ಚ್ 12ರಂದು ಹಲ್ಲೆಗೈದವರ ವಿರುದ್ಧ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಶ್ರೀರಾಮಪ್ಪ ಮತ್ತು ದಲಿತ ಸಂಗಡಿಗರು ಪ್ರಕರಣ ದಾಖಲಿಸಿ, ಊರಿಗೆ ಮರಳಿದರು. ಅವರ ಮರಳುವಿಕೆಗಾಗಿಯೇ ಕಾದಿದ್ದ ರೆಡ್ಡಿ ಸಮುದಾಯವರು ದಲಿತರದ ಮೇಲೆ ಮುಗಿಬಿದ್ದು, ದೌರ್ಜನ್ಯ ಎಸಗಿದರು. ಘಟನೆಯಲ್ಲಿ ಕೃಷ್ಣಾರೆಡ್ಡಿ ಎಂಬ ನೀರುಗಂಟೆ ಸಾವನ್ನಪ್ಪಿದರು. ಅವರನ್ನು ದಲಿತರೇ ಕೊಂದರೆಂದು ದಲಿತರ ತಲೆಗೆ ಕಟ್ಟಲಾಯಿತು. ಅದೇ ದಿನ ಮೀಸಲು ಪಡೆ ಕಂಬಾಲಪಲ್ಲಿಯಿಂದ ವಾಪಸ್ ಹೋಗಿತ್ತು. ಬಹುಶಃ ಅಂದು ಮೀಸಲು ಪಡೆ ಕಂಬಾಲಪಲ್ಲಿಯಲ್ಲಿ ಇದ್ದಿದ್ದರೆ, ದಲಿತರ ಮಾರಣಹೋಮ ನಡೆಯುತ್ತಿರಲಿಲ್ಲ.
ಅಂದಿನ ರಾತ್ರಿ, ರೆಡ್ಡಿ ಸಮುದಾಯದ 200ಕ್ಕೂ ಹೆಚ್ಚು ಮಂದಿ ದಲಿತ ಕೇರಿಗೆ ನುಗ್ಗಿದರು. ಶ್ರೀರಾಮಪ್ಪ ಅವರ ಮನೆಗೆ ಹೊರಗಿನಿಂದ ಬೀಗ ಹಾಕಿ, ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು. ಭೀಕರ ಘಟನೆಯಲ್ಲಿ ಮನೆಯಲ್ಲಿದ್ದ ಶ್ರೀರಾಮಪ್ಪ, ಅವರ ಸಹೋದರ ಅಂಜಿನಪ್ಪ, ರಾಮಕ್ಕ, ಸುಬ್ಬಕ್ಕ, ಪಾಪಮ್ಮ, ನರಸಿಂಹಯ್ಯ, ಚಿಕ್ಕಪಾಪಣ್ಣ ಎಂಬ ಮಂದಿ ಜೀವಂತವಾಗಿ ಸುಟ್ಟುಹೋದರು. ಗ್ರಾಮದ ಉಳಿದ ದಲಿತರು ಜೀವ ಉಳಿಸಿಕೊಳ್ಳಲು ರಾತ್ರೋ ರಾತ್ರಿ ಓಡಿ ಹೋದರು. ಪರಿಣಾಮ, ಶ್ರೀರಾಮಪ್ಪ ಅವರ ಕುಟುಂಬದಲ್ಲಿ ಬದುಕುಳಿದವರು ಅವರ ತಂದೆ ವೆಂಕಟರಾಯಪ್ಪ ಮಾತ್ರ.
ದಲಿತರ ಹತ್ಯೆ ವಿರುದ್ಧ ಪ್ರಕರಣ ದಾಖಲಾಯಿತು. ಆದರೆ, ವಿಚಾರಣೆ ಮಾತ್ರ ಸರಿಯಾಗಿ ನಡೆಯಲಿಲ್ಲ ಎನ್ನುತ್ತಾರೆ ಪ್ರಕರಣದಲ್ಲಿ ವಾದಿಸಿದ್ದ ವಕೀಲ ಬಿ.ಟಿ ವೆಂಕಟೇಶ್. ಪ್ರಕರಣದ ವಿಚಾರಣೆ ವೇಳೆ, ಘಟನೆ ನಡೆದ ದಿನ ಕಂಬಾಲಪಲ್ಲಿಯಲ್ಲಿದ್ದ ಪೊಲೀಸ್ ಪೇದೆಗಳನ್ನು ವಿಚಾರಣೆ ಮಾಡಿಲ್ಲ. ವೈದ್ಯಾಧಿಕಾರಿಗಳನ್ನು ವಿಚಾರಿಸಲಾಗಿಲ್ಲ. ಸಾಕ್ಷಿಗಳು ಪೊಲೀಸರ ಎದುರು ನೀಡಿದ್ದ ಹೇಳಿಕೆಗಳನ್ನು ಕೋರ್ಟ್‌ನಲ್ಲಿ ನೀಡಲಿಲ್ಲ. ಈ ಬಗ್ಗೆಯೂ ವಿಚಾರಣೆ ಮಾಡಲಿಲ್ಲ. ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮುಖ್ಯ ಸಾಕ್ಷಿ ವೆಂಕಟರಾಯಪ್ಪನವರು ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರಿಂದ, ಅವರ ಹೇಳಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸಲು ಸರಿಯಾದ ಭಾಷಾಂತರಕಾರರನ್ನು ನೇಮಿಸಲಿಲ್ಲ. ತನಿಖೆ ವೇಳೆ ಯಾವುದೇ ಮಾರಕಾಸ್ತ್ರ, ವಸ್ತುಗಳ ಮಹಜರು ಮಾಡಲಿಲ್ಲ! ಇಂತಹ ಹಲವಾರು ಲೋಪದೋಷಗಳು ತನಿಖೆಯಲ್ಲಿದ್ದವು.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ಮರಕುಂಬಿ ಬೆಳಕಿನಲ್ಲಿ ಕಂಬಾಲಪಲ್ಲಿಯ ಕತ್ತಲು
ಆದಾಗ್ಯೂ, ಪ್ರಕರಣದ ವಿಚಾರಣೆ ನಡೆಸಿದ ಕೋಲಾರ ಸೆಷನ್ಸ್ ಕೋರ್ಟ್ 2006ರಲ್ಲಿ ಸಾಕ್ಷಾಧಾರಗಳ ಕೊರತೆಯಿಂದಾಗಿ ಎಲ್ಲ 46 ಆರೋಪಿಗಳನ್ನೂ ಖುಲಾಸೆ ಮಾಡಿತು. ಬಳಿಕ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು. 2013ರಲ್ಲಿ ಹೈಕೋರ್ಟ್ ಕೂಡ ಅದೇ ಸಾಕ್ಷಾಧಾರಗಳ ಕೊರತೆಯನ್ನು ಗಮನಿಸಿ, ಆರೋಪಿಗಳನ್ನು ಖುಲಾಸೆಗೊಳಿಸಿತು. 2014ರಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು.
ಅಂದಿನಿಂದ ಇಂದಿನವರೆಗೆ 12 ವರ್ಷಗಳಾಗಿವೆ. ಆದರೆ, ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿಲ್ಲ. ಈ ನಡುವೆ, 2019ರಲ್ಲಿ ವೆಂಕಟರಾಯಪ್ಪ ಕೂಡ ಕೊನೆಯುಸಿರೆಳೆದರು. ಈಗ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಲು ಆ ದಲಿತ ಕುಟುಂಬದಲ್ಲಿ ಒಬ್ಬರೂ ಉಳಿದಿಲ್ಲ. ರಾಜ್ಯದಲ್ಲಿ ನಡೆದ ಭೀಕರ ಹತ್ಯಾಕಾಂಡದಲ್ಲಿ ಈವರೆಗೆ ನ್ಯಾಯ ದೊರೆತಿಲ್ಲ. ಈಗಲೂ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಕೊಳೆಯುತ್ತಿದೆ. ವಿಚಾರಣೆ ಕೋರಿ, ಕೋರ್ಟ್‌ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸುವವರೂ ದಿಕ್ಕಿಲ್ಲದಂತಾಗಿದೆ. ನ್ಯಾಯ ಮರೀಚಿಕೆಯಾಗಿದೆ.