ಔರಾದ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿದ್ದು, ಕೂಡಲೇ ಉಪನ್ಯಾಸಕರನ್ನು ನೇಮಿಸಬೇಕೆಂದು ಔರಾದ್ ಶಾಸಕ ಪ್ರಭು ಬಿ.ಚವ್ಹಾಣ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರಿಗೆ ಒತ್ತಾಯಿಸಿದರು.
ಬೆಂಗಳೂರಿನ ವಿಧಾನಸಭೆಯಲ್ಲಿ ಬುಧವಾರ ಸಚಿವರನ್ನು ಭೇಟಿ ಮಾಡಿದ ಅವರು, ʼಡಾ.ನಂಜುಂಡಪ್ಪ ವರದಿಯನ್ವಯ ಔರಾದ(ಬಿ) ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಔರಾದ್ ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನಡೆಯುತ್ತಿದ್ದು, ಉಪನ್ಯಾಸಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆʼ ಎಂದರು.
ʼಕಾಲೇಜಿನಲ್ಲಿ ಒಟ್ಟು 27 ಅಧ್ಯಾಪಕರ ಪೈಕಿ ಒಬ್ಬರು ಮಾತ್ರ ಖಾಯಂ ಸೇವೆ ಸಲ್ಲಿಸುತ್ತಿದ್ದು, 26 ಹುದ್ದೆಗಳು ಖಾಲಿಯಿವೆ. ಇರುವ ಒಬ್ಬ ಪ್ರಾಧ್ಯಾಪಕರು ವರ್ಗಾವಣೆಯಾದರೆ ಪಾಲಿಟೆಕ್ನಿಕ್ ಕಾಲೇಜು ಅನಾಥವಾಗಲಿದೆ. ಉಪನ್ಯಾಸಕರ ಕೊರತೆಯ ಕಾರಣ ಕ್ಷೇತ್ರದ ಮಕ್ಕಳು ಕಾಲೇಜು ಇದ್ದರೂ ಕೂಡ ಡಿಪ್ಲೋಮಾ ಕೋರ್ಸ್‌ಗಳ ಪ್ರವೇಶ ಪಡೆಯಲು ನಿರಾಸಕ್ತಿ ವಹಿಸಿ ದೂರದ ಬೀದರ ಹಾಗೂ ಇತರೆ ಕಡೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆʼ ಎಂದು ವಿವರಿಸಿದರು.
ʼಹಿಂದುಳಿದ ಪ್ರದೇಶವಾಗಿರುವ ಈ ಭಾಗದಲ್ಲಿ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಒದಗಿಸಿ ಉದ್ಯೋಗಾವಕಾಶ ಕಲ್ಪಿಸಲು ಅನುಕೂಲ ಆಗಬೇಕೆಂಬ ಮಹತ್ವದ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಕಾಲೇಜನ್ನು ಮಂಜೂರು ಮಾಡಿಸಿದ್ದೇನೆ. ಸುಸಜ್ಜಿತ ಕಟ್ಟಡ ನಿರ್ಮಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇನೆ. ಮಕ್ಕಳ ಸಂಖ್ಯೆಯೂ ಉತ್ತಮ ರೀತಿಯಲ್ಲಿದೆ. ಆದರೆ ಖಾಯಂ ಶಿಕ್ಷಕರಿಲ್ಲದೇ ಅತಿಥಿ ಶಿಕ್ಷಕರಿಂದ ಬೋಧನೆ ಮಾಡಿಸಲಾಗುತ್ತಿದೆʼ ಎಂದು ತಿಳಿಸಿದರು.
ʼಇದೇ ಪರಿಸ್ಥಿತಿ ಮುಂದುವರೆದರೆ ಕಾಲೇಜು ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ. ನನ್ನ ಮತಕ್ಷೇತ್ರದ ಬಡ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಖಾಯಂ ಬೋಧಕರನ್ನು ಒದಗಿಸಬೇಕುʼ ಎಂದು ಶಾಸಕರು ಕೋರಿದರು.
ʼಔರಾದ(ಬಿ) ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಕಳೆದೊಂದು ವರ್ಷದಿಂದ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗವನ್ನು ತೆರೆಯಲಾಗಿದೆ. ಈ ವಿಭಾಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಹೊಸ ಹುದ್ದೆಗಳನ್ನು ಮಂಜೂರು ಮಾಡಿ ಖಾಯಂ ಸಿಬ್ಬಂದಿ ಒದಗಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆʼ ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹುಡುಕಾಟ | ರಾಜಕೀಯ ಎಂದರೇನು? ಸರಳೀಕರಿಸುವ ಒಂದು ಪ್ರಯತ್ನ
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದೆಲ್ಲೆಡೆ ಬೋಧಕ ಸಿಬ್ಬಂದಿಯ ಕೊರತೆಯಿದೆ. ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುತ್ತದೆ. ಹಾಗೆಯೇ ಕಮರ್ಷಿಯಲ್ ಪ್ರಾಕ್ಟೀಸ್ ವಿಭಾಗಕ್ಕೆ ಹುದ್ದೆಗಳ ಮಂಜೂರಾತಿಗೂ ಅಗತ್ಯ ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ ಅವರು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.