ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ ‘ಸಾಮಾನ್ಯ ಪ್ರವೇಶ ಪರೀಕ್ಷೆ’ಯ (ಸಿಇಟಿ) ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 18ಕ್ಕೆ ನಿಗದಿ ಮಾಡಲಾಗಿತ್ತು. ಅಂದು ಗುಡ್ ಫ್ರೈಡೆ ಆಗಿರುವ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು ಬದಲಿಸಲಾಗಿದೆ. ಅಂದು ನಡೆಯಬೇಕಿದ್ದ ಪರೀಕ್ಷೆಯನ್ನು ಏಪ್ರಿಲ್ 15ರಂದು ನಡೆಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಎಂಎಲ್‌ಸಿ ಐವನ್ ಡಿಸೋಜ ಅವರು ಶೂನ್ಯ ವೇಳೆಯಲ್ಲಿ ಎತ್ತಿರುವ ಪ್ರಶ್ನೆಗೆ ಸುಧಾಕರ್ ಉತ್ತರಿಸಿದ್ದಾರೆ. “ರಾಜ್ಯದಲ್ಲಿ ಏಪ್ರಿಲ್ 16, 17 ಮತ್ತು 18 ರಂದು ಸಿಇಟಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಏಪ್ರಿಲ್ 18ರಂದು ಗುಡ್ ಫ್ರೈಡೆ ಇರುವುದರಿಂದ, ಅಂದು ಬರೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆಯನ್ನು ಏಪ್ರಿಲ್ 15ರಂದೇ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.
ಆದಾಗ್ಯೂ, ಸರ್ಕಾರದ ಗಮನ ಸೆಳೆದ ಡಿಸೋಜ, “ಗುಡ್ ಫ್ರೈಡೆ ಇರುವ ವಾರವು ಕ್ರೈಸ್ತ ಸಮುದಾಯಕ್ಕೆ ಅತ್ಯಂತ ಪ್ರಮುಖ ವಾರವಾಗಿದೆ. ಆ ವಾರವನ್ನು ‘ಹೋಲಿ ವೀಕ್’ ಎಂದು ಕರೆಯಲಾಗುತ್ತದೆ. ಸೋಮವಾರದಿಂದ ಭಾನುವಾರದವರೆಗೆ ಕ್ರೈಸ್ತರು ಉಪವಾಸ ಮಾಡುತ್ತಾರೆ ಮತ್ತು ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಿಂದೆ ಎಲ್ಲ ಸಿಇಟಿ ಪರೀಕ್ಷೆಗಳನ್ನು ಶನಿವಾರ ಮತ್ತು ಭಾನುವಾರ ಮಾತ್ರವೇ ನಡೆಸಲಾಗುತ್ತಿತ್ತು” ಎಂದು ತಿಳಿಸಿದ್ದಾರೆ.
ಕನ್ನಡ ಭಾಷಾ ಪರೀಕ್ಷೆ ಬರೆಯಲು ರಾಜ್ಯಾದ್ಯಂತ 2,537 ಮಂದಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ಅಭ್ಯರ್ಥಿಗಳು ಏಪ್ರಿಲ್ 15ರಂದೇ ಪರೀಕ್ಷೆ ಬರೆಯಬೇಕಿದೆ. ಏಪ್ರಿಲ್ 16ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ, ಏಪ್ರಿಲ್ 17ರಂದು ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.