ಉನ್ನತ ಶಿಕ್ಷಣ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಪದವಿ ಕಾಲೇಜುಗಳ ಪ್ರಾಂಶುಪಾಲರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ದಾಖಲೆಗಳ ಪರಿಶೀಲನೆಯ ಹಂತದಲ್ಲಿದ್ದು ಶೀಘ್ರವಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲು ಕ್ರಮ ವಹಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವಿಜಯಪುರ ನಗರ ವಿಧಾನಸಭಾ ಸದಸ್ಯ ಬಸನಗೌಡ ಆರ್ ಪಾಟೀಲ್ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ರಾಜ್ಯದಲ್ಲಿರುವ ಕಾಲೇಜು ಶಿಕ್ಷಣ ಇಲಾಖಾ ವ್ಯಾಪ್ತಿಗೆ ಬರುವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿದೆ. ಸರ್ಕಾರಕ್ಕೆ ಸಲ್ಲಿಸಿರುವ ಅಂತಿಮ ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ (ವಿಶೇಷ) ನಿಯಮಗಳು 2020ರ ನಿಯಮ 4ರನ್ವಯ ಕಾಲೇಜು ಶಿಕ್ಷಣ ಆಯುಕ್ತರ ಅಧ್ಯಕ್ಷತೆಯಲ್ಲಿನ ಆಯ್ಕೆ ಪ್ರಾಧಿಕಾರವು ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳ ಶೈಕ್ಷಣಿಕ/ಮೀಸಲಾತಿ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿದೆ” ಎಂದರು.
“ಮೆರಿಟ್ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅರ್ಜಿಯಲ್ಲಿ ದಾಖಲಿಸಿದ್ದ ಮಾಹಿತಿಗಳಿಗನುಗುಣವಾಗಿ ವಿದ್ಯಾರ್ಹತೆ, ಮೀಸಲಾತಿ ಮತ್ತಿತರೆ ಅಗತ್ಯ ದೃಢೀಕೃತ ಪ್ರತಿಗಳನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಅದರಂತೆ ಅಭ್ಯರ್ಥಿಗಳಿಂದ ಸ್ವೀಕೃತಗೊಂಡ ದಾಖಲೆಗಳ ಪರಿಶೀಲನೆಯ ಹಂತದಲ್ಲಿದ್ದು ಶೀಘ್ರವಾಗಿ ತಾತ್ಕಾಲಿಕ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು” ಎಂದು ಉತ್ತರಿಸಿದರು.
“ಪ್ರಸ್ತುತ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಆಯಾ ಕಾಲೇಜುಗಳ ಉಪನ್ಯಾಸಕರು ಸೇವಾ ಜೇಷ್ಟತೆಯಲ್ಲಿ ಹಿರಿಯರಾದವರನ್ನು ಪ್ರಾಂಶುಪಾಲರ ಪ್ರಭಾರದಲ್ಲಿ ಇರಿಸಲು ಕ್ರಮ ವಹಿಸಲಾಗಿದೆ. ಕಾಲೇಜಿನ ದೈನಂದಿನ ಆಡಳಿತ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಿರುವುದಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ಷೇತ್ರ ಪುನರ್ವಿಂಗಡಣೆ ಎಂಬ ಅನ್ಯಾಯ; ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳಿ
ಬೋಧಕ-ಬೋಧಕೇತರ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ
“ರಾಜ್ಯದ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳಲ್ಲಿ 2000 ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗುವುದು” ಎಂದು ಹೇಳಿದರು.
ಕೊಪ್ಪಳ ವಿಧಾನಸಭಾ ಕ್ಷೇತ್ರದ ರಾಘವೇಂದ್ರ ಬಸವರಾಜ್ ಹಿಟ್ನಾಳ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ರಾಜ್ಯದ ಹಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಹುದ್ದೆಗಳ ಕೊರತೆ ಇದೆ. ಕಾಲಾಜು ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಒಟ್ಟು 2000 ಹುದ್ದೆಗಳ ಭರ್ತಿಗೆ ಆಯವ್ಯಯದಲ್ಲಿ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಒಟ್ಟು 18 ಹೊಸ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಮಂಜೂರಾಗಿರುತ್ತವೆ. ಅದರಲ್ಲಿ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡು ಶೈಕ್ಷಣಿಕ ಚಟುವಟಿಕೆ ಪ್ರಾರಂಭಗೊಂಡಿದೆ. ಅರಸೀಕೆರೆ ಮತ್ತು ದೇವದುರ್ಗ ಇಂಜಿನಿಯರಿಂಗ್ ಕಾಲೇಜುಗಳ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ಹೊಸ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸಲು 11-07-2024ರಲ್ಲಿ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ವರದಿಯನುಸಾರ ಮುಂದಿನ ಕ್ರಮ ವಹಿಸಲಾಗುವುದು ಎಂದರು. ಪ್ರಸ್ತುತ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ಹಾಗೂ ಗಂಗಾವತಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ತಳಕಲ್ ನಲ್ಲಿ ವಿಟಿಯು ನೊಂದಿಗೆ ಒಪ್ಪಂದ ಮಾಡಿಕೊಂಡು ದೊಡ್ಡಮಟ್ಟದ ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ” ಎಂದು ವಿವರಿಸಿದರು.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರುಗಳ ಹುದ್ದೆ ಭರ್ತಿಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.
ವಿಧಾನಸಭಾ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಕಾಶಪ್ಪನವರ ವಿಜಯಾನಂದ ಶಿವಶಂಕರಪ್ಪ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಇಲಾಖೆಯಲ್ಲಿ ಖಾಲಿ ಇರುವ 120 ತಜ್ಞ ವೈದ್ಯರು ಹಾಗೂ 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿದ್ದು, ಸದರಿ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿಯಡಿ ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇಲಾಖೆಯಲ್ಲಿ ಕಾಲಕಾಲಕ್ಕೆ ಖಾಲಿಯಾಗುವ ಹುದ್ದೆಗಳನ್ನು ನಿಯಮಾನುಸಾರ ನೇರ ನೇಮಕಾತಿ, ಮುಂಬಡ್ತಿ, ಗುತ್ತಿಗೆ ಆಧಾರದಡಿ, ವರ್ಗಾವಣೆ ಮೂಲಕ ಭರ್ತಿ ಮಾಡುವ ಮೂಲಕ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಉತ್ತಮ ಸೇವೆ ನೀಡಲಾಗುತ್ತಿದೆ” ಎಂದರು.
“2017-18 ಮತ್ತು 2019-20ನೇ ಸಾಲಿನಲ್ಲಿ ರಾಜ್ಯದಲ್ಲಿ 62 ಹೊಸ ತಾಲ್ಲೂಕುಗಳನ್ನು ರಚಿಸಲಾಗಿದ್ದು, ಇದರಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕು ಸಹ ಒಳಗೊಂಡಿರುತ್ತದೆ. ಹೊಸದಾಗಿ ರಚಿಸಲಾದ 62 ತಾಲ್ಲೂಕುಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಹುದ್ದೆಗಳನ್ನು ಸೃಜಿಸುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದ್ದು ಆರ್ಥಿಕ ಇಲಾಖೆ ಸಹಮತಿ ಸ್ವೀಕೃತವಾದ ಕೂಡಲೇ ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ಹೊಸ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಗೆ ಹುದ್ದೆ ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.