- ಓರ್ವ ಸಂಸದ ಲಘುವಾಗಿ ಲಂಗು-ಲಗಾಮಿಲ್ಲದೆ ಏನೇನೊ ಮಾತಾಡ್ತಾರೆ: ವಾಗ್ದಾಳಿ
- ಲಘುವಾಗಿ ಮಾತನಾಡಿದ್ದರಿಂದ ಅವರ ಪಕ್ಷದ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯ ಕಂಡಿದೆ
ಓರ್ವ ಸಂಸದ ಲಘುವಾಗಿ ಲಂಗು-ಲಗಾಮಿಲ್ಲದೆ ಏನೇನೊ ಮಾತನಾಡುತ್ತಿದ್ದಾರೆ. ಸ್ವಪಕ್ಷ-ವಿಪಕ್ಷದವರಿಗೂ ಬೇಕಾಬಿಟ್ಟಿ ಮಾತನಾಡಿಕೊಂಡು ದಿನ ಕಳೆಯುವುದೇ ಇವರ ದಿನಚರಿಯಾಗಿದೆ ಎಂದು ಸಚಿವ ಎಂ ಬಿ ಪಾಟೀಲ ಅವರು ಪರೋಕ್ಷವಾಗಿ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಇವರು ಹಾಗೂ 2-3 ಭಾಷಣಕಾರರ ಮಂಡಳಿಯ ಸದಸ್ಯರು ತಮ್ಮದೇ ಪಕ್ಷದ ನಾಯಕರಾದ ಯಡಿಯೂರಪ್ಪನವರು ಏನು ಮಾಡಿದ್ದಾರೆ? ಅವರ ಕೊಡುಗೆ ಏನು? ಎಂದು ಪ್ರಶ್ನಿಸುವ ದಾಟಿಯಲ್ಲಿ ಮಾತನಾಡಿ, ಅವರನ್ನು ಅಧಿಕಾರದಿಂದಲೂ ಇಳಿಸಿದರು. ಲಘುವಾಗಿ ಮಾತನಾಡಿ ಅವರ ಪಕ್ಷದ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯ ಕಂಡಿದೆ” ಎಂದು ಕುಟುಕಿದ್ದಾರೆ.
“ನಾನು ಸುಮಾರು 20 ವರ್ಷಗಳ ಹಿಂದೆ ನನ್ನ 33ನೇ ವಯಸ್ಸಿಗೆ ಸಂಸದನಾದವನು. ನಾನು ಗಾಳಿಯಲ್ಲಿ ಗೆದ್ದು ಸಂಸದನಾದವನಲ್ಲ, ವಾಜಪೇಯಿ ಅಲೆಯಲ್ಲಿಯೂ ಸಹ ಗೆದ್ದ ಉತ್ತರಕರ್ನಾಟಕ ಭಾಗದ ಏಕೈಕ ಕಾಂಗ್ರೆಸ್ ಸಂಸದ” ಎಂದು ತಮ್ಮ ರಾಜಕೀಯ ಶಕ್ತಿ ಬಗ್ಗೆ ಎಂ ಬಿ ಪಾಟೀಲ ತಿಳಿಸಿದ್ದಾರೆ.
“ತಮ್ಮ ಸ್ಥಾನ ಶಾಶ್ವತ ಎಂದು ತಿಳಿದಂತಿದೆ ಹಾಗೂ ಕೇವಲ ಇನ್ನು 10 ತಿಂಗಳುಗಳಲ್ಲಿ ಚುನಾವಣೆ ಬರಲಿದ್ದು ಜನರ ಮುಂದೆ ಹೋಗಲಿದ್ದಾರೆ ಎಂಬುದನ್ನು ಮರೆತಿರಬಹುದು. ನೆನಪಿರಲಿ Every day is not a Sunday!” ಎಂದು ಲೇವಡಿ ಮಾಡಿದ್ದಾರೆ.