1981ರಲ್ಲಿ 24 ಮಂದಿ ದಲಿತರನ್ನು ಗುಂಡಿಟ್ಟು ಕೊಲ್ಲಲಾಯಿತು. ಈ ನರಮೇಧ ಜರುಗಿ 44 ವರ್ಷಗಳು ಉರುಳಿವೆ. ಮೈನ್ಪುರಿಯ ಡಕಾಯಿತಿ ವಿಶೇಷ ನ್ಯಾಯಾಲಯವೊಂದು ಮೂವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಮೂವರೂ 70 ದಾಟಿದ ವಯಸ್ಸಿನವರು. ಶಿಕ್ಷೆಯ ಪ್ರಮಾಣವನ್ನು ಇದೇ ತಿಂಗಳ 18ರಂದು ಸೂಚಿಸುವುದಾಗಿ ಹೇಳಿದೆ ನ್ಯಾಯಾಲಯ.
24 ದಲಿತರನ್ನು ಕೊಂದ ಮೂವರಿಗೆ ಶಿಕ್ಷೆ- 13 ಮಂದಿ ಆರೋಪಿಗಳು ಬದುಕಿಲ್ಲ, ಒಬ್ಬ ಪರಾರಿ!
ವಿಳಂಬವಾಗಿ ಸಲ್ಲುವ ನ್ಯಾಯವು ಅಸಲಿಗೆ ನ್ಯಾಯವೇ ಅಲ್ಲ. ಅದು ನ್ಯಾಯದ ನಿರಾಕರಣೆಗೆ ಸಮ ಎಂಬ ಮಾತೊಂದಿದೆ. ಅದು ಭಾರತ ದೇಶದ ದಲಿತರು-ಮುಸಲ್ಮಾನರು-ಮಹಿಳೆಯರ ಪಾಲಿನ ನಿತ್ಯಸತ್ಯ. ನ್ಯಾಯಕ್ಕಾಗಿ ಎದುರು ನೋಡಿದ ದೀನರು ಆ ನಿರೀಕ್ಷೆಯಲ್ಲೇ ಕಡೆಯ ಉಸಿರಳೆಯುತ್ತಾರೆ….ಬದುಕಿದವರ ಕಣ್ಣೀರೂ ಬತ್ತಿ ಹೋಗುತ್ತದೆ ಎಂದೆಂದಿಗೂ.
ಸ್ವತಂತ್ರ ಭಾರತ ಸಾಕ್ಷಿಯಾಗಿರುವ ದಲಿತರ ಮೇಲಿನ ಅತೀವ ಬರ್ಬರ ಹತ್ಯಾಕಾಂಡಗಳ ಸಾಲಿಗೆ ಸೇರುತ್ತದೆ ದಿಹುಲೀ ನರಮೇಧ. ಡಕಾಯಿತರು- ಪಾತಕಿಗಳಿಂದ ಗ್ರಸ್ತವಾಗಿದ್ದ ಪಶ್ಚಿಮೀ ಉತ್ತರಪ್ರದೇಶದ ಹನ್ನೆರಡು ಜಿಲ್ಲೆಗಳನ್ನು ಆಳಿದ್ದ ಅರಾಜಕತೆ ಮತ್ತು ಭೂಸುಧಾರಣೆಯ ಬೂಟಾಟಿಕೆ- ಜಾತಿ- ವರ್ಗಗಳ ಹಿತಾಸಕ್ತ ಅಧಿಕಾರ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿತ್ತು ಎನ್ನಲಾಗಿದೆ ಈ ಹತ್ಯಾಕಾಂಡ. ಆ ಹೊತ್ತಿಗೆ ಬಲಿಷ್ಠ ಜಾತಿಗಳ ಹತ್ತಾರು ಅತ್ಯಾಚಾರಗಳಿಗೆ ತುತ್ತಾಗಿದ್ದ ಫೂಲನ್ ದೇವಿ ಜಾಲೋನ್ ಜಿಲ್ಲೆಯ ಬೆಹಮಾಯಿ ಗ್ರಾಮದ 20 ಮಂದಿ ಠಾಕೂರರನ್ನು ಕೊಂದು ಒಂಬತ್ತು ತಿಂಗಳುಗಳು ಉರುಳಿದ್ದವು.
ಈ ಹತ್ಯಾಕಾಂಡದ ಒಟ್ಟು ಆರೋಪಿಗಳು 17 ಮಂದಿ. ಇವರ ಪೈಕಿ 13 ಮಂದಿ ಈಗಾಗಲೆ ತೀರಿ ಹೋಗಿದ್ದಾರೆ. ಅಧಿಕಾಂಶ ಆರೋಪಿಗಳು ಬಲಿಷ್ಠ ಜಾತಿಗಳವರು. ಸಂತೋಷ್ ಸಿಂಗ್ ಮತ್ತು ರಾಧೇಶ್ಯಾಮ್ ಸಿಂಗ್ ಎಂಬ ಡಕಾಯಿತರ ನೇತೃತ್ವದಲ್ಲಿ ನಡೆದಿದ್ದ ನರಮೇಧವಿದು. ತೀರಿ ಹೋಗಿರುವವರ ಪೈಕಿ ಸಂತೋಷ್ ಮತ್ತು ರಾಧೇ ಕೂಡ ಸೇರಿದ್ದಾರೆ. ಬದುಕಿರುವವರ ಪೈಕಿ ಕಪ್ತಾನ್ ಸಿಂಗ್, ರಾಮಸೇವಕ್ ಹಾಗೂ ರಾಮ್ ಪಾಲ್ ವಿಚಾರಣೆ ಎದುರಿಸಿದ್ದಾರೆ. ಜ್ಞಾನಚಂದ್ರ ಎಂಬ ನಾಲ್ಕನೆಯ ಆರೋಪಿ ಪರಾರಿಯಾಗಿದ್ದಾನೆ.
1981ರಲ್ಲಿ 24 ಮಂದಿ ದಲಿತರನ್ನು ಗುಂಡಿಟ್ಟು ಕೊಲ್ಲಲಾಯಿತು. ಈ ನರಮೇಧ ಜರುಗಿ 44 ವರ್ಷಗಳು ಉರುಳಿವೆ. ಮೈನ್ಪುರಿಯ ಡಕಾಯಿತಿ ವಿಶೇಷ ನ್ಯಾಯಾಲಯವೊಂದು ಮೂವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಮೂವರೂ 70 ದಾಟಿದ ವಯಸ್ಸಿನವರು. ಶಿಕ್ಷೆಯ ಪ್ರಮಾಣವನ್ನು ಇದೇ ತಿಂಗಳ 18ರಂದು ಸೂಚಿಸುವುದಾಗಿ ಹೇಳಿದೆ ನ್ಯಾಯಾಲಯ.
ಭತ್ತ, ಸಾಸಿವೆ, ಆಲೂಗೆಡ್ಡೆ ಬೆಳೆಗಳ ಗದ್ದೆಗಳಿಂದ ಸುತ್ತುವರೆದ ಹಳ್ಳಿ ದಿಹುಲೀ. ಉತ್ತರಪ್ರದೇಶದ ಫಿರೋಜಾಬಾದ್ ಜಿಲ್ಲಾ ಕೇಂದ್ರದಿಂದ ಮೂವತ್ತು ಕಿಲೋಮೀಟರು ದೂರ. ಬಲಿಷ್ಠ ಜಾತಿಯ ಠಾಕೂರ್ (ರಜಪೂತ) ಮತ್ತು ದಲಿತ ಜಾಟವರ ನಡುವೆ ಬಿಗುವಿನ ವಾತಾವರಣಕ್ಕೆ ಕಾರಣ ಆದದ್ದು ಭೂಸುಧಾರಣೆಗಳ ಜಾರಿ. 1973ರಲ್ಲಿ ಹಳ್ಳಿಯ ಸುಮಾರು ಆರೂಕಾಲು ಎಕರೆಯಷ್ಟು ಖರಾಬು ಜಮೀನನ್ನು ದಲಿತರಿಗೆ ಹಂಚಿಕೆ ಮಾಡಲಾಗಿತ್ತು. ಈ ಜಮೀನಿನ ಹದ್ದುಬಸ್ತು ಮಾಡಿಕೊಳ್ಳಲು ದಲಿತರಿಗೆ ಅವಕಾಶ ನೀಡಿರಲಿಲ್ಲ ಠಾಕೂರ್ ಗಳು. ಇವರ ಜಮೀನುಗಳಲ್ಲಿ ಅಗ್ಗದ ಕೂಲಿಗೆ ಗೇಯಬೇಕಿತ್ತು ದಲಿತರು. ದಲಿತ ಜಾಟವ (ಚಮ್ಮಾರರು) ರಂಗಿಯಾ (ಚರ್ಮ ಹದ ಮಾಡುವವರು) ಜಾತಿಗಳ 24 ಹುಲ್ಲು ಹೊದಿಸಿದ ಮಣ್ಣಿನ ಗೋಡೆಗಳ ಗೂಡುಗಳಿದ್ದರೆ, ಠಾಕೂರರ 40 ಮನೆಗಳಿದ್ದವು.
ದಿಹೂಲಿ ಅಂದಿನ ಮೈನ್ಪುರಿ ಜಿಲ್ಲೆಗೆ ಸೇರಿತ್ತು. ಜಿಲ್ಲೆಯಲ್ಲಿ 15 ಸಾವಿರ ಬಂದೂಕು ಲೈಸೆನ್ಸ್ ಗಳನ್ನು ನೀಡಲಾಗಿತ್ತು. ಅಕ್ರಮ ಬಂದೂಕುಗಳು, ಪಿಸ್ತೂಲುಗಳಿಗೆ ಲೆಕ್ಕವೇ ಇರಲಿಲ್ಲ ಪಿಡುಗಿನಂತೆ ಹಬ್ಬಿದ್ದವು ಹಿಂಸಾಚಾರ ಮತ್ತು ಡಕಾಯಿತಿಗಳು. ದಲಿತರು ಪೊಲೀಸರನ್ನು ನಂಬುತ್ತಿರಲಿಲ್ಲ. ಅಧಿಕಾಂಶ ಪೊಲೀಸರು ಬಲಿಷ್ಠ ಜಾತಿಗಳಿಗೆ ಸೇರಿದವರೇ ಆಗಿರುತ್ತಿದ್ದರು.
ಮೇಲ್ಜಾತಿಯ ಅಪರಾಧಿಗಳ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ್ದ ದಲಿತರ ಮೇಲೆ ಹಗೆ ತೀರಿಸಿಕೊಳ್ಳಲು ನಡೆದಿದ್ದ ನರಮೇಧವಿದು. ಆರು ತಿಂಗಳ ಹಸುಗೂಸು, ಎರಡು ವರ್ಷದ ಮಗು ಹಾಗೂ ಮಹಿಳೆಯರೂ ಸೇರಿದಂತೆ 24 ಮಂದಿ ದಲಿತ ಜೀವಗಳನ್ನು ಬೇಟೆಯಾಡಲಾಗಿತ್ತು. ಎರಡೂವರೆ ತಾಸುಗಳ ಕಾಲ ಜರುಗಿದ್ದ ರಕ್ತದೋಕುಳಿಯಿದು. ಬಂದೂಕುಗಳು ಮತ್ತು ನಾಡಪಿಸ್ತೂಲುಗಳಿಂದ ದಲಿತರ ಕತ್ತು ಮತ್ತು ಎದೆಗಳಿಗೆ ಗುಂಡಿಟ್ಟಿದ್ದರು ಹಂತಕರು.

ಸತ್ತ ಆಕೆಯ ಬಸಿರಿನಲ್ಲಿದ್ದವು ಅವಳಿ ಜವಳಿ ಕಂದಮ್ಮಗಳು!
ತಾಯಿಯೊಬ್ಬಳು ತನ್ನ ಮಗನನ್ನು ಕಪಾಟಿನಲ್ಲಿ ಅವಿತಿರಿಸಿದ್ದಳು. ಮತ್ತೊಬ್ಬ ತಾಯಿ ಬದುಕುಳಿದಾವು ಎಂಬ ಆಸೆಯಿಂದ ತನ್ನ ಇಬ್ಬರು ಹಸುಳೆಗಳನ್ನು ಹುಲ್ಲು ಹೊದಿಸಿದ ಮಾಳಿಗೆಯ ಮೇಲಕ್ಕೆ ಒಗೆದಿದ್ದಳು. ಮತ್ತಿಬ್ಬರು ಹುಡುಗರು ಹುಲ್ಲಿನ ಬಣವೆಯ ಆಳಕ್ಕೆ ತೂರಿಕೊಂಡು ಅಡಗಿಕೊಂಡರು. ಹಂತಕರಿಗೆ ಎದುರಾಗಿದ್ದ 20ರ ಹರೆಯದ ಮತ್ತೊಬ್ಬ ತಾಯಿ ತನ್ನ ಕಂದ ರಾಜೇಶನನ್ನು ಎದೆಗೆ ಅಪ್ಪಿ ಹಿಡಿದಿದ್ದಳು. ರಾಜೇಶನ ಕುತ್ತಿಗೆಯನ್ನು ಸೀಳಿದ ಗುಂಡು ಆಕೆಯ ಎದೆಯನ್ನು ಸವರಿಕೊಂಡು ಹೋಗಿತ್ತು. ಮೈನ್ಪುರಿಯ ಶವಾಗಾರದಿಂದ ಬಂದಿದ್ದ ಮತ್ತೊಂದು ಸುದ್ದಿ ಹೃದಯ ಕಲಕಿತ್ತು. ಗುಂಡಿಗೆ ಬಲಿಯಾಗಿದ್ದ ಶಾಂತಿದೇವಿಯ ಬಸಿರಿನಲ್ಲಿ ಅವಳಿ ಜವಳಿ ಕೂಸುಗಳಿದ್ದವು. ಒಂದು ಹೆಣ್ಣು ಮತ್ತೊಂದು ಗಂಡು.
ದಾಳಿ ನಡೆದಾಗ ಹೊಲದಲ್ಲಿ ಕೆಲಸ ಮಾಡುತ್ತಿದ್ದ ತಂದೆ ಮಗನ ಜೋಡಿಯೊಂದು ಸನಿಹದಲ್ಲೇ ಅಡಗಿಕೊಂಡು ರಾತ್ರಿಯೆಲ್ಲ ಕಳೆದಿತ್ತು. ಹಂತಕರು ಚೆನ್ನಾಗಿ ತಿಂದುಂಡು ಬೆಳಕು ಹರಿಯುವ ತನಕ ಗ್ರಾಮದ ರಾಧಾಕೃಷ್ಣ ಮಂದಿರದಲ್ಲಿ ಕಳೆದರು. ಏಳು ಮಂದಿ ಗಾಯಾಳುಗಳನ್ನು ಸಮೀಪದ ಶಿಕೋಹಾಬಾದ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಈ ಪೈಕಿ ಕೈಗೆ ಗುಂಡು ತಗುಲಿದ್ದ ಮುಸಲ್ಮಾನ ಹುಡುಗನೊಬ್ಬನಿದ್ದ. ದಲಿತನಲ್ಲ ಎಂದು ತಿಳಿದ ನಂತರ ಅವನನ್ನು ಜೀವಸಹಿತ ಬಿಡಲಾಗಿತ್ತು. ಎಂಟು ತಿಂಗಳ ಕೂಸು ಮುನ್ನಿ ಮತ್ತು ಒಂದೂವರೆ ವರ್ಷದ ಹೆಣ್ಣುಮಗು ನೀಲಂಳನ್ನು ಬ್ಯಾಂಡೇಜುಗಳ ಉಂಡೆಯಲ್ಲಿ ಸುತ್ತಲಾಗಿತ್ತು. ಬ್ಯಾಂಡೇಜುಗಳನ್ನು ತೋಯಿಸಿದ್ದ ರಕ್ತವನ್ನು ಮೆತ್ತಿ ಮುತ್ತಿತ್ತು ನೊಣಗಳ ಹಿಂಡು. ಕಾಡತೂಸುಗಳು ಮೈ ಹೊಕ್ಕು ನಾಲ್ಕು ದಿನಗಳ ನಂತರವೂ ಅವುಗಳನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ ಎಂದು ಅಂದಿನ ಇಂಡಿಯಾ ಟುಡೇ ಬಾತ್ಮೀದಾರ ಚೈತನ್ಯ ಕಲಬಾಗ್ ಅವರ ವರದಿ ಹೃದಯವಿದ್ರಾವಕ.
ಲತೂರಿ ಪ್ರಸಾದ್ ಎಂಬ ದಲಿತನ ಕುಟುಂಬದ ಎಂಟು ಮಂದಿ ಗುಂಡಿಗೆ ಬಲಿಯಾಗಿದ್ದರು. ಗ್ರಾಮದಲ್ಲಿ ಚೂರುಚಾರು ಕೃಷಿಯೋಗ್ಯ ಜಮೀನು ಹೊಂದಿದ್ದ ಏಕೈಕ ದಲಿತನೀತ. ಈತನ ಕುಟುಂಬ ಹಂತಕರ ಮುಖ್ಯ ಗುರಿ ಆಗಿತ್ತು. ಆಸ್ಪತ್ರೆಗೆ ಬಂದವರೆಲ್ಲರ ಕಾಲಿಗೆ ಬಿದ್ದು ಆತ ಅಂಗಲಾಚುತ್ತಿದ್ದ- ಸ್ವಾಮೀ, ಏನಾದರೂ ಮಾಡಿ ನನ್ನ ಕುಟುಂಬದ ಅಳಿದುಳಿದವರನ್ನು ಕಾಪಾಡಿ ಎಂದು. ಆಸ್ಪತ್ರೆಯ ನೈರ್ಮಲ್ಯ ಸ್ಥಿತಿ ಆಘಾತಕಾರಿಯಾಗಿತ್ತು. ವೈದ್ಯರು ಈ ನರಮೇಧದ ಕುರಿತು ಪತ್ರಿಕಾವರದಿಗಳನ್ನು ಓದುವುದರಲ್ಲಿ ತಲ್ಲೀನರಾಗಿದ್ದರು. ನರಮೇಧದ ನಂತರ ಎಂಟು ದಲಿತ ಕುಟುಂಬಗಳಿಗೆ ಬಂದೂಕಿನ ಲೈಸೆನ್ಸ್ ಗಳನ್ನು ನೀಡಿತ್ತು ನ್ಯಾಯಾಲಯ.
ಹಂತಕರು ಲತೂರಿ ಪ್ರಸಾದನ ಕುಟುಂಬ ಮತ್ತು ಬಂಧುಗಳನ್ನೇ ಯಾಕೆ ಬೇಟೆಯಾಡಿದರು?
ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಕೆಲ ವರ್ಷಗಳಷ್ಟು ಹಿಂದಕ್ಕೆ ಸಾಗಬೇಕು. ಲತೂರಿಪ್ರಸಾದನ ಸೋದರ ಚುನ್ನೀಲಾಲ್. ಈತನ ಮಗ ಕುಂವರ್ ಪಾಲ್. ಡಕಾಯಿತರ ಗುಂಪೊಂದರ ಮುಖಂಡನಾಗಿದ್ದ ಕುಂವರ್ ಪಾಲ್. ರಾಧೇ ಶ್ಯಾಮ್ ಸಿಂಗ್ ಈತನ ಅನುಚರನಾಗಿದ್ದ. ಕೆಲ ವರ್ಷಗಳ ನಂತರ ಕುಂವರ್ ಪಾಲ್ ಮತ್ತು ರಾಧೇಶ್ಯಾಮನ ಗೆಳೆಯ ಸಂತೋಷ್ ನಡುವೆ ಮನಸ್ತಾಪ ಉಂಟಾಯಿತು. ಠಾಕೂರ್ ಹೆಣ್ಣುಮಗಳ ಮೇಲೆ ಕೈಹಾಕಿದ್ದನೆಂಬ ಆರೋಪ ಕುಂವರ್ ಪಾಲ್ ಮೇಲಿತ್ತು. ಕುಂವರ್ ಪಾಲನ ರುಂಡವಿಲ್ಲದ ಮುಂಡ ದಿಹುಲೀ ಗ್ರಾಮದ ಪಕ್ಕದ ಘೋಗ್ನೀಪುರ ಶಾಖಾ ಕಾಲುವೆಯಲ್ಲಿ ತೇಲಿತ್ತು. ಈ ಕುರಿತು ಯಾರೂ ಪೊಲೀಸರಿಗೆ ವರ್ತಮಾನ ನೀಡಲಿಲ್ಲ. ರಾಧೇ ಮತ್ತು ಸಂತೋಷ್ ಡಕಾಯಿತ ಜೋಡಿ ಸುತ್ತಮುತ್ತಲ ಹಳ್ಳಿಗಾಡಿನಲ್ಲಿ ಪ್ರಯಾಣಿಕರನ್ನು ಸುಲಿಯುತ್ತ, ಆಗಾಗ ಕೊಲೆಗಳನ್ನೂ ಮಾಡುತ್ತಿತ್ತು. ದಿಹುಲೀ ನರಮೇಧದ ನಡೆಯುವ ತನಕ ಇವರಿಬ್ಬರ ವಿರುದ್ಧ ಪೊಲೀಸರ ಬಳಿ ಒಂದೇ ಒಂದು ಕಾಗದದ ತುಂಡಿನ ಮಾಹಿತಿಯೂ ಇರಲಿಲ್ಲ. ಪೊಲೀಸರ ಕಣ್ಣು ತಪ್ಪಿಸಿ ತಿರುಗುತ್ತಿದ್ದರು. ಠಾಕೂರ ಭೂಮಾಲೀಕರು ಇವರ ರಕ್ಷಣೆಗೆ ನಿಂತಿದ್ದರು. ನರಮೇಧಕ್ಕೆ 18 ತಿಂಗಳ ಮೊದಲು ಒಂದು ದಿನ ದಿಹುಲೀಯ ಜಾಟವ ಗ್ರಾಮಸ್ಥನೊಬ್ಬ ಪೊಲೀಸರಿಗೆ ನೀಡಿದ ಸುಳಿವಿನ ಮೇರೆಗೆ ಈ ಜೋಡಿಯ ದಸ್ತಗಿರಿಯಾಗಿತ್ತು.

ನಾಲ್ವರು ಜಾಟವರನ್ನು ಸಾಕ್ಷಿಗಳನ್ನಾಗಿ ಪಟ್ಟಿ ಮಾಡಿದ್ದರು ಪೊಲೀಸರು. ಆಗಲೇ ಈ ಠಾಕೂರ ಡಕಾಯಿತ ಜೋಡಿ, ದಲಿತ ಜಾಟವರ ವಿರುದ್ಧ ಹಗೆ ತೊಟ್ಟಿತ್ತು. ದಿಹೂಲಿ ಗ್ರಾಮದ ಠಾಕೂರರು ತಮ್ಮದೇ ನೆರೆಹೊರೆಯ ದಲಿತರ ಮೇಲಿನ ಈ ಪ್ರತೀಕಾರಕ್ಕಾಗಿ ವಂತಿಗೆ ನೀಡಿ ಮದ್ದು ಗುಂಡು ಖರೀದಿಗೆ ನೆರವಾಗಿದ್ದರು.
ಸಂತೋಷ್-ರಾಧೇ ಡಕಾಯಿತ ಗುಂಪಿನ 14 ಮಂದಿ ಪೊಲೀಸ್ ಸಮವಸ್ತ್ರ ಧರಿಸಿ ದಿಹುಲೀ ಮೇಲೆ ದಾಳಿ ನಡೆಸಿ ತಾಸುಗಟ್ಟಲೆ ಮನಬಂದಂತೆ ಗುಂಡು ಹಾರಿಸಿದ್ದರು. ಪೊಲೀಸರು ಬರುವ ಹೊತ್ತಿಗೆ ಪರಾರಿಯಾಗಿದ್ದರು. ಮರುದಿನ ಮೃತರ ಶವಗಳನ್ನು ಟ್ರ್ಯಾಕ್ಟರ್ ನಲ್ಲಿ ಮೈನ್ಪುರಿಗೆ ಸಾಗಿಸಲಾಗಿತ್ತು. ಆರು ಮಂದಿ ವೈದ್ಯರು ಸತತವಾಗಿ ಎರಡು ದಿನಗಳ ಮರಣೋತ್ತರ ಪರೀಕ್ಷೆ ನಡೆಸಿದ್ದರು.
ಪ್ರಕರಣದ ನಂತರ ದಲಿತರು ದಿಹುಲೀ ಗ್ರಾಮ ತೊರೆಯತೊಡಗಿದರು. ಸರ್ಕಾರದ ಆದೇಶದ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿಗಳು ಗ್ರಾಮದಲ್ಲೇ ಠಿಕಾಣಿ ಹೂಡಿದರು. ಹೈಕೋರ್ಟಿನ ಆದೇಶದ ಮೇರೆಗೆ ಈ ಕೇಸನ್ನು 1984ರಲ್ಲಿ ಅಲಹಾಬಾದ್ ಸೆಷನ್ ಕೋರ್ಟಿಗೆ ವರ್ಗಾಯಿಸಲಾಯಿತು. 1984ರಿಂದ 2024ರ ತನಕ ನಲವತ್ತು ವರ್ಷಗಳ ಕಾಲ ವಿಚಾರಣೆ ನಡೆಯಿತು. ಕೇಸನ್ನು ಪುನಃ ಮೈನ್ಪುರಿ ಡಕಾಯಿತಿ ಕೋರ್ಟ್ ಗೆ ವರ್ಗಾಯಿಸಲಾಯಿತು. ಮೈನ್ಪುರಿ ನ್ಯಾಯಾಲಯ ಇದೀಗ ತೀರ್ಪು ನೀಡಿದೆ.
ಕಳೆದು ಹೋಗಿವೆ ಲಕ್ಷ ಲಕ್ಷಾಂತರ ದಲಿತ ನೆರಳುಗಳು
ನ್ಯಾಯ ಬಹಳ ತಡವಾಗಿ ಸಿಕ್ಕಿದೆ. ಅಳಿದುಳಿದ ಆರೋಪಿಗಳೂ ತಮ್ಮ ಬಾಳನ್ನು ಮುಗಿಸಿ ಅಂತ್ಯದ ಅಂಚಿನಲ್ಲಿದ್ದಾರೆ. ತೀರ್ಪು ಮೊದಲೇ ಬರಬೇಕಿತ್ತು ಎಂಬುದು ಹತ್ಯೆಗೀಡಾದವರ ಸಂಬಂಧಿಕರ ಅಳಲು.
ಪ್ರಮುಖ ಆರೋಪಿಗಳಲ್ಲೊಬ್ಬನಾದ ಸಂತೋಷ ಸಿಂಗನಿಗೆ ಆಗ ರಾಜಕೀಯ ಆಶ್ರಯ ದೊರೆತಿತ್ತು. 80ರ ದಶಕದಿಂದ ಇಪ್ಪತ್ತು ವರ್ಷಗಳ ಕಾಲ ಸಿಂಗ್ ವಿರುದ್ಧ ಉಸಿರೆತ್ತುವವರು ಒಬ್ಬರೂ ಇರಲಿಲ್ಲ. ಸಿಂಗ್ ನ ಪತ್ನಿ ಎರಡು ಸಲ ಬ್ಲಾಕ್ ಪ್ರಮುಖಳಾಗಿ ಆಯ್ಕೆಯಾಗಿದ್ದಳು.
ಉತ್ತರಪ್ರದೇಶದ ಅಂದಿನ ಮುಖ್ಯಮಂತ್ರಿ ವಿ.ಪಿ.ಸಿಂಗ್ ನೈತಿಕ ಹೊಣೆ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ಪತ್ರ ಬರೆದರು. ಸ್ಥಾನ ತ್ಯಜಿಸಿದ್ದು ಹಲವಾರು ತಿಂಗಳುಗಳ ನಂತರ 1982ರ ಜೂನ್ ನಲ್ಲಿ. ಕೇವಲ ಇಬ್ಬರು ಡಕಾಯಿತರು ನನ್ನ ಸರ್ಕಾರವನ್ನು ಕಿತ್ತೊಗೆಂದರೆಂದು ಇತಿಹಾಸದಲ್ಲಿ ದಾಖಲಾಗುವುದು ನನಗೆ ಇಷ್ಟವಿಲ್ಲ ಎಂದಿದ್ದರು.
ಹತ್ಯಾಕಾಂಡದ ನಂತರ ಅಂದಿನ ಪ್ರಧಾನಿ ಇಂದಿರಾಗಾಂಧೀ, ಪ್ರತಿಪಕ್ಷದ ನಾಯಕ ಜಗಜೀವನರಾಮ್ ಅವರು ದಿಹುಲೀ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಟಲಬಿಹಾರಿ ವಾಜಪೇಯಿ ಮೃತರ ಕುಟುಂಬಗಳಿಗೆ ಸಹಾನುಭೂತಿ ಸೂಚಿಸಿ ದಿಹುಲೀಯಿಂದ ಸಾದುಪುರದ ತನಕ ಪಾದಯಾತ್ರೆ ಕೈಗೊಂಡಿದ್ದರು. ದಿಹುಲೀ ಗ್ರಾಮಕ್ಕೆ ಹೆಲಿಕಾಪ್ಟರುಗಳು ಬಂದಿಳಿದು ಧೂಳಿನ ಮೋಡಗಳನ್ನೇ ಎಬ್ಬಿಸಿದ್ದವು.
ಇಂತಹ ನೂರಾರು ಸಾವಿರಾರು ಮೋಡಗಳಲ್ಲಿ ಕಳೆದು ಹೋಗಿವೆ ಲಕ್ಷ ಲಕ್ಷಾಂತರ ದಲಿತ ನೆರಳುಗಳು!

ಡಿ ಉಮಾಪತಿ
ಹಿರಿಯ ಪತ್ರಕರ್ತರು
ದಲಿತರ ಪ್ರಾಣ, ಮಾನ ಎಲ್ಲವೂ ಅಗ್ಗ…ಈಗೀಗ ಮುಸಲ್ಮಾನರ ಬದುಕು, ಅವರ ಮೇಲಿನ ದೌರ್ಜನ್ಯ ಕೂಡಾ ಇದೇ ಜಾಡಿನಲ್ಲಿ ಸಾಗುತ್ತಿದೆ. ಭಾರತೀಯ ನ್ಯಾಯಾಂಗದ ವೈಫಲ್ಯತೆ ಜಾಹೀರಾಗಿದೆ.
ಹಾಗೆಯೇ ಭಾರತದ ಆತ್ಮ ಎಷ್ಟು ಜೀವ ಪರವಾಗಿದೆ ಎಂಬುದೂ ಕೂಡ!
ಈ ಹಿನ್ನೆಲೆಯಲ್ಲಿ, ‘ಕಾಸ್ಟ್ ಪ್ರೈಡ್ ‘ (Caste Pride) ಪುಸ್ತಕದಲ್ಲಿ, ಲೇಖಕ ಮನೋಜ್ ಮಿತ್ತ ಭಾರತೀಯ ಸಮಾಜದಲ್ಲಿ ನಡೆದ ದಲಿತರ ಹತ್ಯಾಕಾಂಡ, ಅತ್ಯಾಚಾರ , ಜಾತಿಗಳ ಸ್ವಯಂ ಪದೋನ್ನತಿ, ಮೇಲ್ಚಲನೆಗಳನ್ನು ವಿವರವಾಗಿ ಸೆರೆಹಿಡಿದಿದ್ದಾರೆ. ಭಾರತದ ದಲಿತ್ ಫೈಲ್ಸ್ ಎಂಬ ಸಿನೆಮಾ ಏನಾದರೂ ತೆರೆಗೆ ಬಂದರೆ, ಅದರ ಮೂಲ ಈ ಪುಸ್ತಕವೇ ಆಗಬಹುದು.