ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರು ಎಲೆ-ಅಡಿಕೆ ಜಗಿದು ಉಗಿದಿದ್ದನ್ನು ಪ್ರಶ್ನಿಸಿದ ಕಂಡಕ್ಟರ್ ಮೇಲೆ ಪ್ರಯಾಣಿಕರು ಹಲ್ಲೆ ನಡೆಸಿರುವ ಘಠನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ನಡೆದಿದೆ.
ಪಾವಗಡದಿಂದ ತುಮಕೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಘಟನೆ ನಡೆದಿದೆ. ಬಸ್‌ನ ಕಂಡಕ್ಟರ್ ಅನಿಲ್ ಕುಮಾರ್ ಮೇಲೆ ಪ್ರಯಾಣಿಕರು ಹಲ್ಲೆ ಮಾಡಿದ್ದಾರೆ. ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ಆರು ಮಂದಿ ತುಮಕೂರಿಗೆ ಹೊರಟಿದ್ದ ಬಸ್ ಹತ್ತಿದ್ದಾರೆ. ಬಸ್ ಬೆಂಗಳೂರಿಗೆ ಹೋಗುವುದಿಲ್ಲ. ಬೇರೊಂದು ಬಸ್‌ನಲ್ಲಿ ಹೋಗಿರಿ ಎಂದು ಕಂಡಕ್ಟರ್ ಅವರನ್ನು ಬಸ್‌ನಿಂದ ಇಳಿಸಿದ್ದಾರೆ. ಈ ವೇಳೆ, ಆರು ಮಂದಿಯಲ್ಲಿದ್ದ ಓರ್ವ ಮಹಿಳೆ ಬಸ್‌ನಲ್ಲಿಯೇ ಎಲೆ-ಅಡಿಕೆಯ ಎಂಜಲು ಉಗಿದಿದ್ದಾರೆ ಎಂದು ಹೇಳಲಾಗಿದೆ.
ಮಹಿಳೆ ಎಂಜಲು ಉಗಿದಿದ್ದನ್ನು ಕಂಡಕ್ಟರ್ ಪ್ರಶ್ನಿಸಿದ್ದು, ಆಕೆಗೆ ಬೈದಿದ್ದಾರೆ. ಉಗಿದಿದ್ದ ಎಂಜಲನ್ನು ಸ್ವಚ್ಛಗೊಳಿಸುವಂತೆ ಮಹಿಳೆಗೆ ಸೂಚಿಸಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳೆಯ ಜೊತೆಗಿದ್ದವರು ಕಂಡಕ್ಟರ್ ಜೊತೆ ಜಗಳಕ್ಕಿಳಿದಿದ್ದಾರೆ. ಗಲಾಟೆಗೆ ವಿಕೋಪಕ್ಕೆ ತಿರುಗಿದ್ದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಕಂಡಕ್ಟರ್ ಅನಿಲ್ ಕುಮಾರ್ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.