ಹಿಂದಿ ಹೇರಿಕೆ ವಿಚಾರದಲ್ಲಿ ಡಿಎಂಕೆ ಮತ್ತು ಬಿಜೆಪಿ ನಡುವಿನ ವಾಕ್ಸಮರ ಮುಂದುವರೆದಿದೆ. ತಮಿಳುನಾಡು ಬಜೆಟ್ ಭಾಷಣದಲ್ಲಿಯೂ ಹಿಂದಿ ಹೇರಿಕೆ ಮತ್ತು ಕೇಂದ್ರ ಸರ್ಕಾರದ ಬೆದರಿಕೆಯ ಬಗ್ಗೆ ಉಲ್ಲೇಖಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ತಮಿಳುನಾಡು ಹಣಕಾಸು ಸಚಿವ ಡಾ ತಂಗಮ್ ತೆನ್ನರಸು 2025-26ನೇ ಸಾಲಿನ ಬಜೆಟ್ ಅನ್ನು ಮಂಡಿಸಿದರು. ಈ ವೇಳೆ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ ತಮಿಳುನಾಡಿಗೆ ನೀಡಬೇಕಾದ 2,150 ಕೋಟಿ ರೂಪಾಯಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೀಡದೆ ರಾಜ್ಯಕ್ಕೆ ವಂಚನೆ ಮಾಡಿದೆ ಎಂದು ತಂಗಮ್ ಬಜೆಟ್ ಭಾಷಣದಲ್ಲಿ ಆರೋಪಿಸಿದ್ದಾರೆ. ಹಾಗೆಯೇ ಪ್ರಸ್ತುತ ಜಾರಿಯಲ್ಲಿರುವ ದ್ವಿಭಾಷಾ ನೀತಿಯ ಯಶಸ್ವಿಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ | ಭಾಷಾ ಯುದ್ಧಕ್ಕೆ ತಮಿಳುನಾಡು ಸಿದ್ಧ: ಉದಯನಿಧಿ ಸ್ಟ್ಯಾಲಿನ್ ಘೋಷಣೆ
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಮಿಳುನಾಡಿನಲ್ಲಿ ಜಾರಿ ಮಾಡದಿದ್ದರೆ ಸಮಗ್ರ ಶಿಕ್ಷಣ ಯೋಜನೆಯಡಿ ಕೇಂದ್ರ ಸರ್ಕಾರ ನೀಡಬೇಕಾದ ಬಾಕಿ ಮೊತ್ತವನ್ನು ನೀಡುವುದಿಲ್ಲ ಎಂಬ ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ಅವರ ಬೆದರಿಕೆಯನ್ನು ಕೂಡಾ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಲಾಗಿದೆ. ಹಾಗೆಯೇ ಕೇಂದ್ರದ ಬೆದರಿಕೆಗೆ ನಾವು ಹೆದರಲಾರೆವು ತಮಿಳುನಾಡು ಸರ್ಕಾರವೇ ಹಣದ ಕೊರತೆಯನ್ನು ನಿಭಾಯಿಸುತ್ತದೆ ಎಂದು ತಂಗಮ್ ಹೇಳಿದ್ದಾರೆ.
ಈ ಸಂದರ್ಭದಲ್ಲೇ ದ್ವಿಭಾಷಾ ನೀತಿಯ ಯಶಸ್ವಿಯನ್ನು ವಿವರಿಸಿದ ತಮಿಳುನಾಡು ಹಣಕಾಸು ಸಚಿವರು, “ದ್ವಿಭಾಷಾ ನೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಮಾತೃ ಭಾಷೆ (ತಮಿಳು) ಮತ್ತು ಇಂಗ್ಲೀಷ್ ಅನ್ನು ಕಲಿತಿದ್ದಾರೆ. ಇದರಿಂದಾಗಿ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ತಮಿಳಿಗರು ಸಾಧನೆ ಮಾಡಿದ್ದಾರೆ” ಎಂದು ಹೇಳಿದ್ದಾರೆ.
