ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 2025-26ನೇ ಆರ್ಥಿಕ ವರ್ಷದ ಬಜೆಟ್ ಮಂಡಿಸಿವೆ. ಕೇಂದ್ರ ಸರ್ಕಾರವು 50.65 ಲಕ್ಷ ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದೆ. ರಾಜ್ಯವು 4.09 ಲಕ್ಷ ಕೋಟಿ ರೂ. ಮೊತ್ತದ ಆಯವ್ಯಯ ಮಂಡಿಸಿದೆ. ಎರಡೂ ಸರ್ಕಾರಗಳು ವಿತ್ತೀಯ ಕೊರತೆಯನ್ನು ನೀಗಿದಲು ಸಾಲದ ಮೊರೆಹೋಗಿವೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬರೋಬ್ಬರಿ 14.82 ಲಕ್ಷ ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಅಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 1.16 ಲಕ್ಷ ಕೋಟಿ ರೂ. ಸಾಲ ಪಡೆಯುವುದು ಘೋಷಿಸಿದೆ.
2025-26ನೇ ಸಾಲಿನಲ್ಲಿ ಪಡೆಯುವ ಸಾಲವು ಸೇರಿ ಕೇಂದ್ರ ಸರ್ಕಾರದ ಒಟ್ಟು ಸಾಲ ಬರೋಬ್ಬರಿ 200 ಲಕ್ಷ ಕೋಟಿ ರೂ. ಆಗಲಿದೆ. ಅಂತೆಯೇ, ರಾಜ್ಯ ಸರ್ಕಾರದ ಒಟ್ಟು ಸಾಲ 7.81 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.
ಕೇಂದ್ರ ಸರ್ಕಾರದ 200 ಲಕ್ಷ ಕೋಟಿ ರೂ. ಸಾಲವನ್ನು ದೇಶದ ಜನಸಂಖ್ಯೆಗೆ (140 ಕೋಟಿ) ತಾಳೆ ಹಾಕಿನೋಡಿದರೆ, ಎಲ್ಲ ಭಾರತೀಯರ ಮೇಲೆ ತಲಾ ಸರಾಸರಿ 1,42,857 ರೂ. ಸಾಲ ಇದೆ. ಅಂದರೆ, ಭಾರತೀಯ ತಲಾ ಸಾಲ ₹1,42,857 ರೂ.ಗಳು. ರಾಜ್ಯ ಸರ್ಕಾರದ 7.81 ಲಕ್ಷ ಕೋಟಿ ರೂ. ಸಾಲವನ್ನು ಕರ್ನಾಟಕದ ಜನಸಂಖ್ಯೆಗೆ (7 ಕೋಟಿ) ತಾಳೆ ಹಾಕಿದರೆ, ಕನ್ನಡಿಗರ ತಲಾ ಸಾಲ 1,11,571 ರೂ.ಗಳು. ಕೇಂದ್ರ ಮತ್ತು ರಾಜ್ಯದ ತಲಾ ಸಾಲವನ್ನು ಕೂಡಿಸಿದರೆ, ಕರ್ನಾಟಕದಲ್ಲಿರುವ ಪ್ರತಿಯೊಬ್ಬರ ತಲಾ ಸಾಲವು ಒಟ್ಟು 2,54,428 ರೂ. ಆಗಿದೆ.
ನಮ್ಮನ್ನು ಆಳುತ್ತಿರುವ ಸರ್ಕಾರಗಳು ರಾಜ್ಯದ ಪ್ರತಿಯೊಬ್ಬರ ಮೇಲೆ ಹೇರಿರುವ ಸಾಲದ ಹೊರೆ 2,54,428 ರೂ.ಗಳು. ಕರ್ನಾಟಕದಲ್ಲಿ ಹುಟ್ಟುವ ಪ್ರತಿಯೊಂದು ಮಗುವೂ ಹುಟ್ಟುತ್ತಲೇ ಕೇಂದ್ರ ಮತ್ತು ರಾಜ್ಯದಿಂದ 2,54,428 ರೂ. ಹೊತ್ತುಕೊಂಡು ಹುಟ್ಟುತ್ತಿವೆ.
ಈ ವರದಿ ಓದಿದ್ದೀರಾ?: ‘ರಾಜ್ಯಕ್ಕೆ ತೆರಿಗೆ ಪಾಲನ್ನೂ ನೀಡದೆ, ಸೆಸ್-ಸರ್ಚಾರ್ಜ್‌ಗಳನ್ನೂ ಹೆಚ್ಚಿಸಿಕೊಂಡು ನುಂಗುತ್ತಿದೆ ಮೋದಿ ಸರ್ಕಾರ’
ಅಂದಹಾಗೆ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಕೇಂದ್ರ ಸರ್ಕಾರದ ಸಾಲ ಒಟ್ಟು 55.87 ಲಕ್ಷ ಕೋಟಿ ರೂ. ಇತ್ತು. ಇದೀಗ, 200 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ, ಮೋದಿ ಸರ್ಕಾರ ಕಳೆದ 11 ವರ್ಷಗಳಲ್ಲಿ ಬರೋಬ್ಬರಿ 145 ಲಕ್ಷ ಕೋಟಿ ರೂ. ಸಾಲ ಮಾಡಿದೆ.
ಮೋದಿ ಅವರ ಅಚ್ಛೇ ದಿನ್, ಸಬ್ ಕಾ ಸಾತ್ – ಸಬ್ ಕಾ ವಿಕಾಸ್ ಘೋಷಣೆಯಲ್ಲಿ ದೇಶದ ಸಾಲ ಬರೋಬ್ಬರಿ ಸರಾಸರಿ ಮೂರು ಪಟ್ಟು ಹೆಚ್ಚಾಗಿದೆ. ಆದರೆ, ಯಾರ ಅಭಿವೃದ್ಧಿಯೂ ಆಗಿಲ್ಲ. ಪ್ರಸ್ತುತ ಭಾರತದಲ್ಲಿ 100 ಕೋಟಿಗೂ ಅಧಿಕ ಜನರು ಇಂದಿಗೂ ಕೊಳ್ಳುವ ಸಾಮರ್ಥ್ಯವಿಲ್ಲದೆ ಒದ್ದಾಡುತ್ತಿದ್ದಾರೆ. ಬದುಕು ದೂಡಲು ಹರಸಾಹಸ ಪಡುತ್ತಿದ್ದಾರೆ. ಆದರೂ, ಅವರ ತಲೆಯ ಮೇಲೆ ಬೃಹತ್ ಸಾಲದ ಹೊರೆಯನ್ನು ಸರ್ಕಾರಗಳು ಹೇರಿವೆ.
ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಯೋಜನೆಗಳಿಗೆ ಸಾಲ ಮಾಡಿ ದೇಶವನ್ನು 2047 ಕುಕ್ಕೆ ಬೇಕಾದ ದೂರದೃಷ್ಟಿಯಿಂದ ಕಾರ್ಯಕ್ರಮ ನಿರೂಪಿಸುತ್ತಾರೆ ಆದರೆ ಸಿದ್ದರಾಮಯ್ಯನ ರೀತಿ ಅತ್ತೆ ಸಾಮಾನನ್ನು ಅಳಿಯ ದಾನ ಮಾಡಿದ ರೀತಿ ಬಿಟ್ಟಿ ಭಾಗ್ಯಗಳಿಗಾಗಿ ಹಾಳುಮಾಡುತ್ತಿದೆ. ಇದನ್ನು ಅರಿತವರು ಸಿದ್ದರಾಮಯ್ಯನಿಗೆ ಹಿಂಡಿ ಹಿಂಡಿ ಶಾಪ ಹಾಕುತ್ತಿದ್ದಾರೆ.