ಪರಿಶಿಷ್ಟ ಜಾತಿಗಳಿಗೆ ಸಂಬಂಧಿಸಿದಂತೆ ಒಳ ಮೀಸಲಾತಿ (ಉಪ ವರ್ಗೀಕರಣ)ಜಾರಿ ಕುರಿತು ಹೋರಾಟ ಆರಂಭವಾಗಿ ಸುಮಾರು ಐದು ದಶಕಗಳೇ ಸಂದಿವೆ. ಆದರೂ ಒಳಮೀಸಲಾತಿ ಇನ್ನೂ ಜಾರಿಯಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ರಾಜ್ಯದಲ್ಲೂ ಒಳಮೀಸಲಾತಿ ವಿಚಾರ ತಾರ್ಕಿಕ ಅಂತ್ಯದ ಕಡೆ ಸಾಗುವಂತೆ ಕಾಣುತ್ತಿದೆ.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ವರ್ಗೀಕರಣ ಜಾರಿಗಾಗಿ ವಿಳಂಬ ದೋರಣೆಯನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಮಾದಿಗ ದಂಡೋರ ಸಮಿತಿ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಅನಿರ್ದಿಷ್ಟಾವಧಿಗೆ ಧರಣಿ ಕುಳಿತಿದೆ. ಇನ್ನೊಂದೆಡೆ ಮಾ.4ರಿಂದ ಬಿ ಆರ್ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ‘ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಕಾಲಿ ಮಾಡಿ’ ಎಂದು ಘೋಷ ವ್ಯಾಖ್ಯದಡಿ ಹರಿಹರದ ಪ್ರೊ. ಬಿ ಕೃಷ್ಣಪ್ಪ ಸಮಾಧಿ ಸತಳದಿಂದ ಬೆಂಗಳೂರುವರೆಗೂ ಪಾದಯಾತ್ರೆ ಸಾಗಿ ಬರುತ್ತಿದೆ.
ಈ ಬೆಳವಣಿಗೆ ಮಧ್ಯೆ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿ ವಿಳಂಬ ಆಗುತ್ತಿದ್ದು, ಈ ವಿಚಾರದಲ್ಲಿ ಎಡಗೈ-ಬಲಗೈ ಎಂಬ ಅಪಸ್ವರ ಎತ್ತದೆ ಎಲ್ಲರೂ ಒಕ್ಕೊರಲಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲು ಪರಿಶಿಷ್ಟ ಸಮುದಾಯದ ಸಚಿವರು, ಶಾಸಕರು ನಿರ್ಧರಿಸಿದ್ದಾರೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ನಿವಾಸದಲ್ಲಿ ಪರಿಶಿಷ್ಟ ಸಮುದಾಯದ ಸಚಿವರು, ಶಾಸಕರು ಹಾಗೂ ಕೆಲವು ಮುಖಂಡರು ಗುರುವಾರ ದೀರ್ಘ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ.
ಗೃಹ ಸಚಿವ ಜಿ. ಪರಮೇಶ್ವರ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ದರ್ಶನ್ ಧ್ರುವನಾರಾಯಣ, ಎನ್. ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯ ಎಚ್.ಪಿ. ಸುಧಾಮ್ ದಾಸ್, ಡಾ.ಡಿ. ತಿಮ್ಮಯ್ಯ ಮುಂತಾದವರು ಸಭೆಯಲ್ಲಿ ಇದ್ದಿದ್ದು ಗಮನಾರ್ಹ.

ಆಯೋಗ ರಚನೆ
ಪರಿಶಿಷ್ಟ ಜಾತಿ(ಎಸ್‌ಸಿ)ಗಳಿಗೆ ಒಳಮೀಸಲಾತಿ ಜಾರಿಗೊಳಿಸಲು ಮತ್ತು ಈ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚಿಸಲು 2024 ಅಕ್ಟೋಬರ್ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲೇ ತೀರ್ಮಾನಿಸಲಾಗಿದೆ. ಎಸ್‌ಸಿಗಳಿಗೆ ಒಳ ಮೀಸಲಾತಿ ಜಾರಿ ಮಾಡುವ ನಿಟ್ಟಿನಲ್ಲಿ ನಂಬಲರ್ಹ ದಾಖಲೆಗಳು ಹಾಗೂ ದತ್ತಾಂಶ ಸಂಗ್ರಹಿಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ, ಮೂರು ತಿಂಗಳಲ್ಲಿ ಆಯೋಗ ವರದಿ ನೀಡಲಿದೆ ಎಂದು ಕಾನೂನು ಸಚಿಚ ಎಚ್ ಕೆ ಪಾಟೀಲ್ ತಿಳಿಸಿದ್ದರು.
ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗವನ್ನು ನವೆಂಬರ್ ತಿಂಗಳಿನಲ್ಲಿಯೇ ರಚಿಸಲಾಯಿತು. ಡಿಸೆಂಬರ್ ಮೊದಲ ವಾರದಲ್ಲಿ ಆಯೋಗಕ್ಕೆ ಹೊಣೆ ನಿಗದಿಪಡಿಸಲಾಗಿತ್ತು. ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ದ ಒಳ ಮೀಸಲಾತಿ ನೀಡುವ ಕುರಿತು ಪರಿಶೀಲಿಸಿ ಆಯೋಗ ವರದಿ ನೀಡಬೇಕಿದೆ.
ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಫೆ.13ರಂದು ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅವರಿಗೆ ಮನವಿ ಸಲ್ಲಿಸಿ, ವರದಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ನೀಡಲು ಆಗ್ರಹಿಸಿತು. ‘ಒಳ ಮೀಸಲಾತಿಯಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ. ಒಳ ಮೀಸಲಾತಿ ಹಂಚಿಕೆ ಕುರಿತು ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಲಾಗುತ್ತದೆ” ಎಂದು ಪರಿಶಿಷ್ಟ ಜಾತಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ಎಚ್.ಎನ್. ನಾಗಮೋಹನ್‌ದಾಸ್ ತಿಳಿಸಿದ್ದರು.
ನೇರ ನೇಮಕಾತಿಗೆ ತಡೆ
“ರಾಜ್ಯದಲ್ಲಿ ಒಳ ಮೀಸಲಾತಿ ಕುರಿತು 3 ದಶಕಗಳ ನಿರಂತರ ಬೇಡಿಕೆ, ಒತ್ತಾಯಗಳ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟವು ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ 101 ಒಳ ಪಂಗಡಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
“ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಮಿಷನ್ ಆಫ್ ಇನ್‌ಕ್ವೈರಿ ಆ್ಯಕ್ಟ್ 1952ರ ಅನ್ವಯ ಆಯೋಗವನ್ನು ರಚಿಸಲು ನಿರ್ಧರಿಸಲಾಗಿದೆ. ಸದರಿ ಆಯೋಗವು 3 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಷರತ್ತು ವಿಧಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಂದಿನ ತೀರ್ಮಾನದವರೆಗೆ ರಾಜ್ಯ ಸರ್ಕಾರದ ಅಧೀನದ ಸಿವಿಲ್ ಸೇವೆಗಳಲ್ಲಿನ ಹಾಗೂ ಮೀಸಲಾತಿ ಅನ್ವಯವಾಗುವ ವೃಂದಗಳ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸದಿರುವ ನಿರ್ಧಾರವನ್ನು ಸಹ ಕೈಗೊಳ್ಳಲಾಗಿದೆ” ಎಂದಿದ್ದರು.