ದುಬೈನಿಂದ ಬರುವ ಮಗಳಿಗೆ ಪ್ರೊಟೋಕಾಲ್ ಯಾಕೆ ನೀಡಬೇಕು? ಎಲ್ಲರಂತೆ ತಪಾಸಣೆಗೆ ಒಳಗಾದರೆ ಅದೇನು ಅವಮಾನವೇ? ಅಂದರೆ, ಮಗಳ ಸ್ಮಗ್ಲಿಂಗ್ ವ್ಯವಹಾರದ ಬಗ್ಗೆ ತಂದೆಗೆ ಗೊತ್ತಿತ್ತೇ ಅಥವಾ ತಮ್ಮ ಮಗಳು ಎಂಬ ಪ್ರೀತಿಯಿಂದ ಪ್ರೊಟೋಕಾಲ್ ಕೊಡುತ್ತಿದ್ದರೇ ಎಂಬುದು ತಿಳಿಯಬೇಕು. ಕಾರಣ ಯಾವುದೇ ಇದ್ದರೂ ಇಲ್ಲಿ ಅಧಿಕಾರದ ದುರುಪಯೋಗವಾಗಿದೆ.
ಮಾರ್ಚ್ 3ರಂದು ದುಬೈನಿಂದ ಬರುತ್ತಿದ್ದ ನಟಿ ರನ್ಯಾ ರಾವ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆ ಜಿ. ಚಿನ್ನ ಕಳ್ಳಸಾಗಾಟದಲ್ಲಿ ಸಿಕ್ಕಿ ಬೀಳುತ್ತಿದ್ದಂತೆ ರಾಜಕಾರಣಿಗಳು, ಸ್ವಾಮೀಜಿಗಳು, ಜ್ಯೋತಿಷಿಗಳು, ಪೊಲೀಸ್ ಅಧಿಕಾರಿಗಳ ಹೆಸರುಗಳು ಹರಿದಾಡಲು ಶುರುವಾಗಿದೆ. ಇದೇನು ಅಚ್ಚರಿಪಡುವ ಸಂಗತಿಯಲ್ಲ. ಮತ್ತು ಇದೇ ಮೊದಲೂ ಅಲ್ಲ ಕೊನೆಯದೂ ಆಗಲಾರದು. ಅಕ್ರಮ ಕಳ್ಳಸಾಗಣಿಕೆದಾರರ ಪೋಷಣೆಯಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ದೊಡ್ಡ ಪಾತ್ರವಿದೆ. ನೇರವಾಗಿ ಹೇಳಬೇಕೆಂದರೆ ಅವರೆಲ್ಲ ವ್ಯವಹಾರದ ಪಾಲುದಾರರು.
ಅಕ್ರಮ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರನ್ಯಾ ರಾವ್ ತಂದೆ ಡಿಜಿಪಿ ರಾಮಚಂದ್ರರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಗಳಿಗೆ ತಪಾಸಣೆಗೆ ಒಳಗಾಗುವುದನ್ನು ತಪ್ಪಿಸಲು ಶಿಷ್ಟಾಚಾರ ಸೌಲಭ್ಯ (ಪ್ರೊಟೋಕಾಲ್) ನೀಡುವಂತೆ ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಸೂಚಿಸುತ್ತಿದ್ದಂತೆ. ಇಬ್ಬರು ಕಾನ್‌ಸ್ಟೆಬಲ್‌ಗಳು ಈ ಹಿಂದೆ ಮೂರು ಬಾರಿ ರನ್ಯಾ ರಾವ್‌ಗೆ ಪ್ರೊಟೋಕಾಲ್ ನೀಡಿರುವ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.
ದುಬೈನಿಂದ ಬರುವ ಮಗಳಿಗೆ ಪ್ರೊಟೋಕಾಲ್ ಯಾಕೆ ನೀಡಬೇಕು? ಎಲ್ಲರಂತೆ ತಪಾಸಣೆಗೆ ಒಳಗಾದರೆ ಅದೇನು ಅವಮಾನವೇ? ಅಂದ್ರೆ, ಮಗಳ ಸ್ಮಗ್ಲಿಂಗ್ ವ್ಯವಹಾರದ ಬಗ್ಗೆ ತಂದೆಗೆ ಗೊತ್ತಿತ್ತೇ ಅಥವಾ ತಮ್ಮ ಮಗಳು ಎಂಬ ಪ್ರೀತಿಯಿಂದ ಪ್ರೊಟೋಕಾಲ್ ಕೊಡುತ್ತಿದ್ದರೇ ಎಂಬುದು ತಿಳಿಯಬೇಕು. ಅದು ಯಾವುದೇ ಕಾರಣವಿದ್ದರೂ ಇಲ್ಲಿ ಅಧಿಕಾರದ ದುರುಪಯೋಗವಾಗಿದೆ. ಪ್ರೊಟೋಕಾಲ್ ದುರ್ಬಳಕೆಯ ಬಗ್ಗೆ ತನಿಖೆ ನಡೆಸಲು ಐಎಎಸ್ ಅಧಿಕಾರಿ ಗೌರವ್ ಗುಪ್ತ ಡಿಐಜಿ ವಂಶಿಕೃಷ್ಣ ಅವರನ್ನು ನೇಮಿಸಿದೆ. ಇದೇ ತರ ಬೇರೆ ಯಾವ್ಯಾವ ವ್ಯಕ್ತಿಗಳಿಗೆ ಹೀಗೆ ಪ್ರೊಟೋಕಾಲ್ ದುರುಪಯೋಗ ಮಾಡಲಾಗಿದೆ ಎಂಬ ಇತಿಹಾಸ ಕೆದಕುವ ಅಗತ್ಯವಿದೆ.
ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ಒಂದರ ಟರ್ಮಿನಲ್ ಮೂರರ ಮೂಲಕ ಒಳಹೋಗಿ ಒಳಗಡೆಯೇ ಇರುವ ಹೋಟೇಲೊಂದರಲ್ಲಿ ವ್ಯಕ್ತಿಯೊಬ್ಬ ಕೊಟ್ಟ ಪ್ಯಾಕೆಟ್‌ಗಳಲ್ಲಿ ತುಂಬಿದ ಚಿನ್ನದ ತುಂಡುಗಳನ್ನು ಶೌಚಾಲಯದೊಳಗೆ ಹೋಗಿ ಟೇಪ್ ಸಹಾಯದಿಂದ ಹೊಟ್ಟೆ, ತೊಡೆ, ಸೊಂಟದ ಭಾಗಗಳಲ್ಲಿ ಭದ್ರವಾಗಿರಿಸಿ ವಿಮಾನ ಏರುತ್ತಿದ್ದಳಂತೆ. ಇದು ಆಕೆಯೇ ನೀಡಿದ ಹೇಳಿಕೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಬೆಂಗಳೂರಿನಲ್ಲಿ ಬಂದಿಳಿಯುವಾಗ ತಪಾಸಣೆಯಿಂದ ತಪ್ಪಿಸಲು ಅಪ್ಪನೇ ಪ್ರೊಟೋಕಾಲ್ ವ್ಯವಸ್ಥೆ ಮಾಡಿರುತ್ತಿದ್ದರು. ಹೀಗಾಗಿ ಆಕೆ ಸಲೀಸಾಗಿ ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದಳು. ನಟಿಯರ ಬಗ್ಗೆ ಜನರಿಗೆ ಇರುವ ಒಂದು ಬಗೆಯ ಆಕರ್ಷಣೆ, ಸಾರ್ವಜನಿಕ ಜಾಗಗಳಲ್ಲಿ ಸಿಗುವ ಗೌರವದ ದುರುಪಯೋಗ ಇದು. ಸೆಲೆಬ್ರಿಟಿಗಳನ್ನು ತಪಾಸಣೆ ನಡೆಸದಿರುವುದು, ವಿಶೇಷ ಅನುಕೂಲ ಮಾಡಿಕೊಡುವುದರಲ್ಲಿ ಅಧಿಕಾರಿಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರುವುದು ಭಾರತದಲ್ಲಿ ಸಾಮಾನ್ಯ. ರನ್ಯಾ ಪ್ರಕರಣದಲ್ಲಿ ಡಿಐಜಿ ಮಗಳು ಎಂಬ ಕಾರಣದಿಂದ ಸುಲಭವಾಗಿ ಪ್ರೊಟೋಕಾಲ್ ದುರ್ಬಳಕೆಯಾಗಿದೆ. ಈ ಕಾರಣದಿಂದ ಡಿಐಜಿ ರಾಮಚಂದ್ರ ರಾವ್ ತನಿಖೆ ಎದುರಿಸಲಿದ್ದಾರೆ. ಮಗಳ ಕಳ್ಳಸಾಗಾಣಿಕೆ ತಂದೆಗೆ ಗೊತ್ತಿತ್ತೇ, ಇಲ್ಲವೇ ಎಂಬುದು ಸಿಬಿಐ ತನಿಖೆಯಿಂದ ಹೊರಬರಲಿದೆ.
ರಾಜ್ಯದಲ್ಲಿ ಹಿಂದೆಯೂ ಡ್ರಗ್ಸ್ ಅಕ್ರಮ ಮಾರಾಟ, ಬಳಕೆಯ ಪ್ರಕರಣಗಳಲ್ಲಿಯೂ ಸಿನಿಮಾ ನಟ ನಟಿಯರು, ರಾಜಕಾರಣಿಗಳು, ಪೊಲೀಸರು ಭಾಗಿಯಾಗಿರುವ ಆರೋಪ ಬಂದಿತ್ತು. ಕೆಲವು ಪೊಲೀಸರು ತನಿಖೆಯನ್ನೂ ಎದುರಿಸಿದ್ದರು. 2015ರಲ್ಲಿ ಸಿಂಗಲ್ ನಂಬರ್ ಲಾಟರಿ ಪ್ರಕರಣದ ಕಿಂಗ್‌ಪಿನ್ ಪಾರಿರಾಜನ್ ಜೊತೆ ನಂಟಿನ ಆರೋಪದಲ್ಲಿ ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್ ತನಿಖೆ ಎದುರಿಸಿದ್ದರು. 2020ರಲ್ಲಿ ರಾಜ್ಯದ ಬೆಳಕಿಗೆ ಬಂದ ಬಿಟ್ ಕಾಯಿನ್ ಹಗರಣ ದೇಶಾದ್ಯಂತ ಸುದ್ದಿ ಮಾಡಿತ್ತು. ಹಲವು ಪೊಲೀಸರು ಮತ್ತು ರಾಜಕಾರಣಿಗಳ ಮೇಲೆ ಆರೋಪ ಬಂದಿತ್ತು. ಆಗಿನ ಗೃಹಸಚಿವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ವಶಕ್ಕೆ ಪಡೆಯಲಾದ ಬಿಟ್ ಕಾಯಿನ್‌ಗಳು ನಾಪತ್ತೆಯಾಗಿದ್ದವು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಮಾರಾಟ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪವನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ. ಪೂಜಾರ್ ಎದುರಿಸುತ್ತಿದ್ದಾರೆ.
2020ರಲ್ಲಿ ಅಕ್ರಮ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಕನ್ನಡದ ಇಬ್ಬರು ನಟಿಯರು ತಿಂಗಳುಗಳ ಕಾಲ ಬಂಧನಕ್ಕೊಳಗಾಗಿದ್ದರು. ಕೊರೋನಾ ಸಮಯದಲ್ಲಿ ಲಾಕ್‌ಡೌನ್ ಇದ್ದರೂ ಬೆಂಗಳೂರು ಹೊರವಲಯದ ರೆಸಾರ್ಟ್‌ಗಳಲ್ಲಿ ರೇವ್ ಪಾರ್ಟಿಗಳನ್ನು ನಡೆಸಲಾಗುತ್ತಿತ್ತು. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳು ಮಾರಾಟವಾಗುತ್ತಿತ್ತು. ಅದಕ್ಕಾಗಿ ನಟಿಯರನ್ನು ಮಧ್ಯಮರ್ತಿಗಳನ್ನಾಗಿ ಬಳಕೆ ಮಾಡಲಾಗುತ್ತಿತ್ತು. ಇವೆಲ್ಲ ಪೊಲೀಸ್ ಅಧಿಕಾರಿಗಳ ಸಹಕಾರದಿಂದಲೇ ನಡೆಯುತ್ತವೆ ಎಂಬುದು ಮುಚ್ಚಿಟ್ಟ ಸತ್ಯವೇನಲ್ಲ. ಹಲವು ಪ್ರಕರಣಗಳಲ್ಲಿ ಇದು ಬಟಾಬಯಲಾಗಿದೆ.
ದುರಂತವೆಂದರೆ ಈ ಎಲ್ಲಾ ಪ್ರಕರಣಗಳು ಒಂದೆರಡು ತಿಂಗಳು ಸುದ್ದಿಯಾಗುತ್ತವೆ. ಆರೋಪಿಗಳ ಬಂಧನ, ಚಾರ್ಜ್‌ಶೀಟ್ ಸಲ್ಲಿಕೆಯ ನಂತರ ಕೋರ್ಟಿನಲ್ಲಿ ವರ್ಷಾನುಗಟ್ಟಲೆ ಕೊಳೆಯುತ್ತಿರುತ್ತದೆ. ಜಾಮೀನಿನ ಮೇಲೆ ಹೊರಬಂದ ಆರೋಪಿಗಳು ಸಹಜ ಸ್ವಾಭಾವಿಕ ಎಂಬಂತೆ ಮುಖ್ಯವಾಹಿನಿಯಲ್ಲಿ ಬೆರೆತು ಹೋಗುತ್ತಾರೆ.
ಭ್ರಷ್ಟಾಚಾರ ಎಂಬುದು ರಾಜಕಾರಣಿಗಳು, ಅಧಿಕಾರಿಗಳ ಹುಟ್ಟುಗುಣವೇನೋ ಅನಿಸುವಷ್ಟು ಸಾಂಕ್ರಾಮಿಕ ಆಗಿ ಹೋಗಿದೆ. ದೇಶದ ಸಂಪತ್ತು, ಜನರ ತೆರಿಗೆ ಹಣ ಲೂಟಿ ಮಾಡುವುದು ತಮ್ಮ ಹಕ್ಕು ಎಂದುಕೊಂಡಂತೆ ವರ್ತಿಸುತ್ತಾರೆ. ಸಿನಿಮಾ ಮತ್ತು ಮಾಡೆಲಿಂಗ್ ಜಗತ್ತಿನ ಜೊತೆಗೆ ಉದ್ಯಮಿಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಅವಿನಾಭಾವ ಸಂಬಂಧ. ಇತ್ತೀಚೆಗೆ ಈ ಸಾಲಿಗೆ ಸ್ವಾಮೀಜಿಗಳೂ ಸೇರಿದ್ದಾರೆ. ಸೆಲಬ್ರಿಟಿಗಳನ್ನು ಅಕ್ರಮ ವ್ಯವಹಾರಗಳಿಗೆ ಬಳಸಿಕೊಳ್ಳುವುದು ಹೊಸತೇನಲ್ಲ. ನಟಿ ರನ್ಯಾ ರಾವ್‌ಗೆ ಹೋಟೆಲ್ ಉದ್ಯಮಿ ತರುಣ್ ರಾಜ್ ಜೊತೆಗೆ ಆತ್ಮೀಯತೆ ಬೆಳೆದಿದೆ. ಆತ ಅಂತಾರಾಷ್ಟ್ರೀಯ ಗೋಲ್ಡ್ ಸ್ಮಗ್ಲಿಂಗ್ ಸಿಂಡಿಕೇಟ್‌ಗೆ ಈಕೆಯನ್ನು ಪರಿಚಯಿಸಿದ್ದಾನೆ. ಐಷಾರಾಮಿ ಜೀವನ, ಹಣ, ದುಬಾರಿ ವಸ್ತುಗಳ ಆಸೆಗೆ ಬೀಳುವ ದುರ್ಬಲ ಮನಸ್ಸಿನ ನಟಿಯರು ಇಂತಹ ಕಳ್ಳರ ಜಾಲದೊಳಗೆ ಬಹಳ ಬೇಗ ಪ್ರವೇಶ ಪಡೆಯುತ್ತಾರೆ.
ವಿದೇಶದಿಂದ ಚಿನ್ನ, ಡ್ರಗ್ಸ್, ಕರೆನ್ಸಿ ಕಳ್ಳಸಾಗಣೆಯಂತೆ ರಾಜ್ಯದೊಳಗೆ ಮರಳು, ಗಣಿ, ಮರ, ಕಳ್ಳಭಟ್ಟಿ ಮದ್ಯ, ಅನ್ನಭಾಗ್ಯ ಅಕ್ಕಿ… ಇನ್ನೂ ಏನೇನೋ ಕಳ್ಳಸಾಗಣೆ ನಡೆಯುತ್ತಿರುತ್ತದೆ. ಬಹುತೇಕ ಕಳ್ಳ ವ್ಯವಹಾರಗಳು ರಾಜಕಾರಣಿ, ಅಧಿಕಾರಿ, ಕಳ್ಳರ ಸಹಯೋಗದಲ್ಲಿಯೇ ನಡೆಯುತ್ತಿರುತ್ತದೆ. ವ್ಯವಸ್ಥೆಯನ್ನು ಬದಲಿಸಬೇಕಿದ್ದವರೇ ಹಾಳುಗೆಡಹುವ ಕೆಲಸದಲ್ಲಿ ಮಗ್ನರಾದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವವರು ಯಾರು?
