ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಒಣಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ವಾರ್ಷಿಕ 2.50 ಲಕ್ಷ ಟನ್ ಉತ್ಪಾದನೆ ಆಗುತ್ತದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 1.96 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ಸರ್ಕಾರವು ಆಯಾ ಜಿಲ್ಲೆಯಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಆಗ್ರಹಿಸಿದರು.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಅವರು, “ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಲ್ಗೆ ₹40 ಸಾವಿರದಿಂದ ₹50 ಸಾವಿರದವರೆಗೆ ಮಾರಾಟವಾಗಿತ್ತು. ಈ ವರ್ಷ ದರ ಕನಿಷ್ಠ ₹6 ಸಾವಿರಕ್ಕೆ ಕುಸಿದಿದೆ. ರೈತರ ಸಮಸ್ಯೆಗೆ ಸ್ಪಂದಿಸುವಂತೆ ಆಂಧ್ರಪ್ರದೇಶ ಸರ್ಕಾರವು ಕೇಂದ್ರಕ್ಕೆ ಮನವಿ ಮಾಡಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಬೆಲೆ ಕೊರತೆ ಪಾವತಿ ಯೋಜನೆ ಜಾರಿಗೊಳಿಸಲು ಶ್ರಮಿಸಿತ್ತು. ಅದರಂತೆ ಕೇಂದ್ರ ಸರ್ಕಾರವು ರೂ 11,781 ಕನಿಷ್ಠ ಮಧ್ಯಂತರ ಬೆಲೆ ನಿಗದಿಪಡಿಸಿದೆ. ಇದಕ್ಕೆ ಪೂರಕವಾಗುವಂತೆ ಕರ್ನಾಟಕವೂ ಒಣಮೆಣಸಿನಕಾಯಿ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಸಹಾಯ ಮಾಡಬೇಕು” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ; ಮಸಣ ಕಾರ್ಮಿಕರು, ದೇವದಾಸಿಯರ ಪ್ರತಿಭಟನೆ
“ಕರ್ನಾಟಕಕ್ಕೂ ಪಿಡಿಪಿ ಯೋಜನೆ ವಿಸ್ತರಿಸಬೇಕು. ಕೇಂದ್ರ ಸರ್ಕಾರವು ರಾಜ್ಯದ ಮೆಣಸಿನಕಾಯಿ ದರವನ್ನು ಕ್ವಿಂಟಲ್ಗೆ ₹13,500 ನಿಗದಿ ಮಾಡಬೇಕು” ಎಂದು ಅಗ್ರಹಿಸಿದರು.
