ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಮಾಡಬೇಕು. ಇಲ್ಲದಿದ್ದರೆ, ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ಹೋರಾಟ ನಡೆಸಿದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಾಶ್ವತ ಹೋರಾಟ ಮಾಡಬೇಕಾಗುತ್ತದೆ ಎಂದು 42 ಸಂಘಟನೆಗಳನ್ನೊಳಗೊಂಡ ‘ಸಂಯುಕ್ತ ಹೋರಾಟ-ಕರ್ನಾಟಕ’ ಎಚ್ಚರಿಕೆ ನೀಡಿದೆ.
ಶುಕ್ರವಾರ, ಬೆಂಗಳೂರಿನ ಶಾಸಕರ ಭವನದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಮುಖಂಡ ಬಸವರಾಜ್, “ಹಿಂದಿನ ದಿನಗಳಲ್ಲಿ ಬಜೆಟ್ ಮಂಡನೆ ಆಗುತ್ತದೆ ಎಂದರೆ, ನಾವೆಲ್ಲ ಬಹಳ ಕಾತುರದಿಂದ ಕಾಯುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಬಜೆಟ್ನ ಪಾವಿತ್ರ್ಯತೆ ಸಂಪೂರ್ಣವಾಗಿ ಹಾಳಾಗಿದೆ. ಬಜೆಟ್ ಮೇಲಿನ ಆಸಕ್ತಿ ಕಳೆದು ಹೋಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬಜೆಟ್ ದುಡಿಯುವ ವರ್ಗದ ಜನರ ಪರವಾಗಿರಬೇಕು. ಆದರೆ, ಇಂದಿನ ಬಜೆಟ್ಗಳು ಯಾರು ಸಂಪತ್ತು ಸೃಷ್ಟಿ ಮಾಡುತ್ತಾರೋ, ಅವರ ಪರವಾಗಿವೆ. ಕೇಂದ್ರ ಸರ್ಕಾರ ಯಾವ ಮುಲಾಜು ಇಲ್ಲದೇ ದುಡಿಯುವ ವರ್ಗವನ್ನು ಕಡೆಗಣಿಸಿದೆ. ರಾಜ್ಯ ಸರ್ಕಾರ ಕೂಡ ಅದೇ ಹಾದಿ ತುಳಿಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಜೆಟ್ಗಳು ದೇಸಿಯ ಕೈಗಾರಿಕೆಗಳ ಜೊತೆಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ. ರೈತ, ದಲಿತ, ಕಾರ್ಮಿಕ, ಜನಸಾಮಾನ್ಯರನ್ನು ಕಡೆಗಣಿಸುತ್ತಿವೆ. ಕೈಗಾರಿಕೆಗಳಿಗೆ, ಬಂಡವಾಳಶಾಹಿಗಳಿಗೆ ಕೊಟ್ಟಿರುವ ರಿಯಾಯಿತಿಯಲ್ಲಿ ನಾಲ್ಕನೇ ಒಂದು ಭಾಗದಷ್ಟು ರಿಯಾಯಿತಿ ದುಡಿಯುವ ವರ್ಗದವರಿಗೆ ಕೊಟ್ಟಿದ್ದರೇ ಸಾಮಾನ್ಯರಿಗೆ ಎಷ್ಟೋ ಉಪಯೋಗವಾಗುತ್ತಿತ್ತು” ಎಂದು ಹೇಳಿದರು.
“ಸರ್ಕಾರಗಳು ದುಡಿಯುವ ವರ್ಗದವರನ್ನು ಭಿಕ್ಷುಕರನ್ನಾಗಿಸಿಕೊಂಡಿದ್ದಾರೆ. ಇಂದು ವಿರೋಧ ಪಕ್ಷದವರಿಗೆ ಬಜೆಟ್ ಅಂದರೆ ಏನು ಎಂಬುದೇ ಗೊತ್ತಿಲ್ಲದಂತ ಪರಿಸ್ಥಿತಿ ಇದೆ. ಯಾವ ಸಮುದಾಯಕ್ಕೆ ಎಷ್ಟು ಹಣ ಕೊಟ್ಟಿದ್ದಾರೆ ಎನ್ನುವ ಅಂಕಿಅಂಶಗಳನ್ನು ಮುಂದಿಟ್ಟು ಮಾತನಾಡಬೇಕು. ಅದು ಬಿಟ್ಟು ಹಲಾಲ್ ಬಜೆಟ್ ಎಂದುಕೊಂಡು ಕೂಗುತ್ತಿರುವುದು ದುರಂತದ ಸಂಗತಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಿಹುಲೀ ದಲಿತ ಹತ್ಯಾಕಾಂಡ; 44 ವರ್ಷ ನಡೆದ ಕೇಸಿನ ಬೆವರು-ನೆತ್ತರು-ಕಂಬನಿಯ ಕತೆಯೇನು?
“ಸದನದಲ್ಲಿ ವಿರೋಧ ಪಕ್ಷದ ನಾಯಕ ಮಾತನಾಡುತ್ತಾರೆಂದರೆ, ಆಡಳಿತ ಪಕ್ಷದ ನಾಯಕರೆಲ್ಲರೂ ಕಿವಿಕೊಟ್ಟು ಕೇಳಿಸಿಕೊಳ್ಳುತ್ತಿದ್ದರು. ಆದರೆ, ಇಂದು ವಿಪಕ್ಷ ನಾಯಕರ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ, ಆಡಳಿತ ಪಕ್ಷದ ನಾಯಕರ ಮಾತುಗಳನ್ನು ಕೇಳಿಸಿಕೊಳ್ಳುವುದಕ್ಕೂ ಯಾರೂ ಇಷ್ಟಪಡುತ್ತಿಲ್ಲ. ಜನಪರ ಚಳವಳಿಯಿಂದ ಬಂದವರು ವಿಧಾನಸೌಧಕ್ಕೆ ಹೋಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧಾನಸೌಧಕ್ಕೆ ಹೋಗುವರು ಯಾರು ಎಂದು ನೋಡಿದಾಗ ಬಂಡವಾಳಶಾಹಿಗಳು, ಕಳ್ಳರು-ಕದೀಮರೇ ಆಗಿದ್ದಾರೆ” ಎಂದು ಬಸವರಾಜ್ ಹೇಳಿದರು.
“ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ, ಮಹಿಳಾ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಗಲೂ ಬಜೆಟ್ನಲ್ಲಿ ಸೇರಿಸುವುದಕ್ಕೆ ಅವಕಾಶವಿದೆ. ಆದುದರಿಂದ ಸಿದ್ದರಾಮಯ್ಯ ಕೂಡಲೇ ಸಂಯುಕ್ತ ಹೋರಾಟದ ನಿಯೋಗದೊಂದಿಗೆ ಸಭೆ ಮಾಡಿ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ, ಎ.17ರ ನಂತರ ನಿರಂತರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಆರ್.ಹಿರೇಮಠ್, ಬಡಗಲಪುರ ನಾಗೇಂದ್ರ, ಟಿ.ಯಶ್ವಂತ್, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಕೆ.ವಿ.ಭಟ್, ಕುಮಾರ್ ಸಮತಳ, ಶಿವಕುಮಾರ್, ಗೋಪಾಲ್ ಇದ್ದರು.