ರಷ್ಯಾದ ಶಸ್ತ್ರಾಸ್ತ್ರ ಖರೀದಿಸದಂತೆ ಭಾರತಕ್ಕೆ ಅಮೆರಿಕ ಒತ್ತಡ: ಏನಿದರ ಮರ್ಮ?

Date:

Advertisements
ಟ್ರಂಪ್‌ ಅವರಿಗೆ ಅಮೆರಿಕದ ಆರ್ಥಿಕತೆಯನ್ನು ಹೆಚ್ಚಿಸಬೇಕೆಂಬ ಹಪಾಹಪಿ ಇದೆ. ಅದಕ್ಕಾಗಿ, ಅಮೆರಿಕದಲ್ಲಿ 'ಸ್ಟಾಕ್' ಇರುವ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದು ಅವರ ಗುರಿ. ಅದಕ್ಕಾಗಿ ಭಾರತದಂತಹ ರಾಷ್ಟ್ರಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ವಿಶ್ವಗುರು ಮೋದಿ ಅವರು ಟ್ರಂಪ್‌ ಅವರ 'ಲಕ್ಷ್ಮಣ ರೇಖೆ'ಯನ್ನು ದಾಟುವವರಲ್ಲ. ದಾಟುವಂತೆ ಕಾಣುವುದೂ ಇಲ್ಲ

ಡೊನಾಲ್ಡ್‌ ಟ್ರಂಪ್ 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಅವರ ವರ್ತನೆಗಳು ಮಿತಿಮೀರಿದಂತೆ ಕಾಣುತ್ತಿವೆ. ತಮ್ಮ ಲಾಭಕ್ಕಾಗಿ ಇತರ ದೇಶಗಳನ್ನು ಬಗ್ಗುಬಡಿಯುವ ಅಮೆರಿಕದ ಧೋರಣೆ ಮತ್ತಷ್ಟು-ಮೊಗದಷ್ಟು ಹೆಚ್ಚಾಗಿದೆ. ಟ್ರಂಪ್ ವಿಶ್ವದ ಸರ್ವಾಧಿಕಾರಿಯಾಗಲು ಹೊರಟಿರುವಂತೆ ವರ್ತಿಸುತ್ತಿದ್ದಾರೆ. ಗಾಜಾ, ಉಕ್ರೇನ್‌ನನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳಬೇಕೆಂಬ ಹಪಾಹಪಿ, ಸುಂಕ ಹೇರಿಕೆ, ಡಬ್ಲ್ಯೂಟಿಒದಿಂದ ನಿರ್ಗಮನ ಮುಂತಾದ ಹಲವಾರು ನಡೆಗಳು ಟ್ರಂಪ್ ಸರ್ವಾಧಿಕಾರಿತ್ವವನ್ನು ಸೂಚಿಸುತ್ತಿವೆ. ಅದರಲ್ಲೂ, ಭಾರತದ ವಿಚಾರದಲ್ಲಿ ಅವರ ಧೋರಣೆಗಳು ವಿವಾದಾತ್ಮಕವಾಗಿವೆ.

ಮೋದಿ ಅವರನ್ನು ಅಮೆರಿಕಗೆ ಕರೆಸಿಕೊಂಡಿದ್ದ ಟ್ರಂಪ್, ಭಾರತಕ್ಕೆ ಸುಂಕದ ಬೆದರಿಕೆ ಹಾಕಿದ್ದರು. ಅಲ್ಲದೆ, ಹಲವಾರು ಒಪ್ಪಂದಗಳಿಗೆ ಸಮ್ಮತಿ ಪಡೆದುಕೊಂಡಿದ್ದರು. ಸುಂಕ ಕಡಿಮೆ ಮಾಡುವಂತೆ ತಾಕೀತು ಮಾಡಿದ್ದರು. ಇದೀಗ, ಅಮೆರಿಕದ ಶಸ್ತ್ರಾಸ್ತ್ರಗಳನ್ನು ಭಾರತ ಕೊಂಡುಕೊಳ್ಳಬೇಕು. ರಷ್ಯಾದ ಶಸ್ತ್ರಾಸ್ತ್ರಗಳ ಖರೀದಿಯನ್ನು ನಿಲ್ಲಿಸಬೇಕು ಎಂದು ತಾಕೀತು ಮಾಡುತ್ತಿದ್ದಾರೆ.

ಭಾರತದಲ್ಲಿ ಶಸ್ತ್ರಾಸ್ತ್ರಗಳ ಅಗತ್ಯ ಇದ್ದರೂ- ಇಲ್ಲದೇ ಇದ್ದರೂ, ಕಾರ್ಯಾಚರಣೆಗಳು ನಡೆದರೂ- ನಡೆಯದೇ ಇದ್ದರೂ ಭಾರತವು ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವಂತೆ ಟ್ರಂಪ್ ನೇತೃತ್ವದಲ್ಲಿ ಅಮೆರಿಕವು ಭಾರತಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆ.

Advertisements

ಕಳೆದ ತಿಂಗಳು, ಟ್ರಂಪ್ ಅವರು ಭಾರತಕ್ಕೆ ಅಮೆರಿಕದಿಂದ ‘ಹಲವು ಶತಕೋಟಿ’ ಮೌಲ್ಯದ ಶಸ್ತ್ರಾಸ್ತ್ರಗಳ ಮಾರಾಟವನ್ನು ಹೆಚ್ಚಿಸಲಾಗುತ್ತಿದೆ. ಭಾರತೀಯ ವಾಯುಪಡೆಗಾಗಿ (IAF) ದುಬಾರಿ ‘F-35 ಲೈಟೆನಿಂಗ್ II ಸ್ಟೆಲ್ತ್ ಫೈಟರ್‌’ಗಳನ್ನು ಉತ್ಪಾದಿಸುತ್ತಿದೆ ಎಂದು ಏಕಪಕ್ಷೀಯವಾಗಿ ಘೋಷಿಸಿದರು.

ಅವರ ಘೋಷಣೆಯ ಬೆನ್ನಲ್ಲೇ, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹಲವಾರು ಹೆಜ್ಜೆ ಮುಂದಿಟ್ಟಿದ್ದಾರೆ. ಮಾರ್ಚ್‌ 7ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊದಕ್ಕೆ ವರ್ಚುವಲ್ಆಗಿ ಭಾಗವಹಿಸಿ ಮಾತನಾಡಿದ ಲುಟ್ನಿಕ್, ‘ಭಾರತವು ರಷ್ಯಾದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದನ್ನು ನಿಲ್ಲಿಸಬೇಕು’ ಎಂದು ತಾಕೀತು ಮಾಡಿದರು. ಫ್ರಾನ್ಸ್ ಮತ್ತು ಯುಕೆಯಿಂದ ಭಾರತವು ರಕ್ಷಣಾ ಉಪಕರಣಗಳ ಖರೀದಿಯನ್ನು ‘ಮೂರ್ಖತನ’ ಎಂದು ಅಪಹಾಸ್ಯ ಮಾಡಿದರು.

“ಭಾರತವು ರಷ್ಯಾದಿಂದ ಗಣನೀಯ ಪ್ರಮಾಣದ ಮಿಲಿಟರಿ ಉಪಕರಣಗಳನ್ನು ಖರೀದಿಸಿದೆ. ಆ ಖರೀದಿಯನ್ನು ನಿಲ್ಲಿಸಬೇಕೆಂದು ನಾವು (ಯುಎಸ್) ಭಾವಿಸುತ್ತೇವೆ. ಅಮೆರಿಕದ ಶಸ್ತ್ರಾಸ್ತ್ರಗಳ ಎದುರು ಫ್ರಾನ್ಸ್ ಮತ್ತು ಯುಕೆಯ ಮಿಲಿಟರಿ ಸಾಮಗ್ರಿಗಳು ಬಲಿಷ್ಠವಲ್ಲ. ಅಮೆರಿಕ ಉಪಕರಣಗಳು ವಿಶ್ವದ ಶ್ರೇಷ್ಠ ಮತ್ತು ಶಕ್ತ ಶಸ್ತ್ರಾಸ್ತ್ರಗಳಾಗಿವೆ. ಇವುಗಳ ಖರೀದಿಗೆ ಭಾರತವು ಒತ್ತುಕೊಡಬೇಕು” ಎಂದು ಲುಟ್ನಿಕ್ ಹೇಳಿದರು.

2016ರಲ್ಲಿ ಭಾರತವು ವಾಯುಪಡೆಗಾಗಿ ಫ್ರಾನ್ಸ್‌ನಿಂದ 36 ಡಸಾಲ್ಟ್ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಿತು (ಈ ಖರೀದಿಯಲ್ಲಿ ಅದಾನಿಯನ್ನು ಸೇರಿಸಿ ಹಗರಣ ಎಸಗಿದೆ ಎಂಬ ಆರೋಪವಿದೆ– ಅದು ಬೇರೆಯೇ ವಿಚಾರ). ಜೊತೆಗೆ, ಹೊಸ ವಿಮಾನವಾಹಕ ನೌಕೆ ‘ಐಎನ್‌ಎಸ್‌ ವಿಕ್ರಾಂತ್‌’ಅನ್ನೂ ಖರೀದಿಸಿತು. ಈ ಖರೀದಿಯನ್ನು ಉಲ್ಲೇಖಿಸಿದ ಲುಟ್ನಿಕ್, ಅವುಗಳಿಗಿಂತ ಅತ್ಯುತ್ತಮ ಯುದ್ಧ ವಿಮಾನಗಳು ತಮ್ಮ ಬಳಿ ಇರುವುದಾಗಿ ಹೇಳಿಕೊಂಡರು.

”ವಿಶ್ವದ ‘ಅತ್ಯುತ್ತಮ’ ಮಿಲಿಟರಿ-ಕೈಗಾರಿಕಾ ಸಾಧನಗಳನ್ನು ಉತ್ಪಾದಿಸುವ ಅಮೆರಿಕ, ರಷ್ಯಾವನ್ನು ಬಿಟ್ಟು ಫ್ರಾನ್ಸ್ ಮತ್ತು ಯುಕೆಯಿಂದ ರಕ್ಷಣಾ ಉಪಕರಣಗಳನ್ನು ಖರೀದಿಸುವಂತೆ ಭಾರತಕ್ಕೆ ಎಂದಿಗೂ ಶಿಫಾರಸು ಮಾಡುವುದಿಲ್ಲ. ಭಾರತವು ತಮ್ಮ ಭವಿಷ್ಯದ ಎಲ್ಲ ರಕ್ಷಣಾ ಅಗತ್ಯಗಳನ್ನು ಅಮೆರಿಕದಿಂದ ಮಾತ್ರ ಖರೀದಿಸಬೇಕು” ಎಂದು ಅವರು ತಾಕೀತು ಮಾಡಿದರು.

ಲುಟ್ನಿಕ್ ಅವರ ಇಂತಹ ಅಸೂಕ್ಷ್ಮ ತಾಕೀತು, ಒತ್ತಾಯಗಳು ಅಮೆರಿಕದ ಹಿಂದಿನ ಆಡಳಿತಗಳು ನಡೆದುಕೊಳ್ಳುತ್ತಿದ್ದ ರೀತಿ-ನೀತಿಗಳಿಗಿಂತ ಭಿನ್ನವಾಗಿಯೂ, ಕಠಿಣವಾಗಿ ಕಾಣಿಸುತ್ತವೆ. ಈ ಹಿಂದೆ, ಅಮೆರಿಕದ ಆಡಳಿತಗಳು ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುವುದನ್ನು ಕಡಿಮೆ ಮಾಡುವಂತೆ ನಯವಾಗಿ ಸಲಹೆ ನೀಡಿವೆ. ಆದರೆ, ಈಗ ಅಮೆರಿಕ ಧೋರಣೆಗಳು ಬದಲಾಗಿವೆ. ಜಠಿಲವಾಗಿವೆ.

ಈ ವರದಿ ಓದಿದ್ದೀರಾ?: ಶ್ವೇತಭವನದಲ್ಲಿ ನಡೆದ ಕಪ್ಪು ಸಭೆ

ಗಮನಾರ್ಹವಾಗಿ, ಭಾರತದ ಮೂರು ರಕ್ಷಣಾ ಸೇವೆಗಳಲ್ಲಿ (ಭೂಸೇನೆ, ವಾಯುಪಡೆ, ನೌಕಾಪಡೆ) ಹೊಂದಿರುವ ಶಸ್ತ್ರಾಸ್ತ್ರಗಳಲ್ಲಿ 60-65% ಉಪಕರಣಗಳನ್ನು ರಷ್ಯಾ, ಫ್ರಾನ್ಸ್‌ನಿಂದ ಖರೀದಿಸಿದೆ. ‘ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ (SIPRI)ಯ ಇತ್ತೀಚಿನ ವರದಿ ಹೇಳುವಂತೆ, ”ಭಾರತದಲ್ಲಿರುವ ರಕ್ಷಣಾ ಸಾಮಗ್ರಿಗಳ ಪೈಕಿ, ರಷ್ಯಾ 36%, ಫ್ರಾನ್ಸ್ 33% ಹಾಗೂ ಇಸ್ರೇಲ್ 13% ಉಪಕರಣಗಳನ್ನು ಒದಗಿಸಿವೆ. ಉಳಿದ 18%ಅನ್ನು ಸ್ಥಳೀಯವಾಗಿ ಮತ್ತು ಅಮೆರಿಕ ಸೇರಿದಂತೆ ಕೆಲವು ದೇಶಗಳಿಂದ ಭಾರತ ಖರೀದಿಸಿದೆ.”

ಆದಾಗ್ಯೂ, 2011-20ರ ನಡುವೆ ಭಾರತವು ರಷ್ಯಾದ ವಸ್ತುಗಳ ಮೇಲಿನ ಅವಲಂಬನೆಯನ್ನು ಸುಮಾರು 33% ರಷ್ಟು ಕಡಿಮೆ ಮಾಡಿದೆ. ಅಲ್ಲದೆ, ಕಳೆದ 20 ವರ್ಷಗಳಲ್ಲಿ ಅಮೆರಿಕದಿಂದ ಸುಮಾರು 22 ಶತಕೋಟಿ ಡಾಲರ್ (1.65 ಲಕ್ಷ ಕೋಟಿ ರೂ.) ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ.

ಇವುಗಳಲ್ಲಿ 11C-17 ಮತ್ತು 12C-130J-30 ಸಾರಿಗೆ ವಿಮಾನಗಳು, 12 ನೆಪ್ಚೂನ್ ಮ್ಯಾರಿಟೈಮ್ ಮಲ್ಟಿ-ಮಿಷನ್ ಪ್ಲಾಟ್‌ಫಾರ್ಮ್‌, 22 AH-64E ಅಪಾಚೆ ಅಟ್ಯಾಕ್, 15 CH-47F ಚಿನೂಕ್ ಹಾಗೂ 24 MH-60R ಸೀಹಾಕ್ ಹೆಲಿಕಾಪ್ಟರ್‌ಗಳು ಸೇರಿವೆ. ಅಲ್ಲದೆ, 145 M777 155mm/39 ಕ್ಯಾಲಿಬರ್ ಹಗುರ ತೂಕವುಳ್ಳ ಹೊವಿಟ್ಜರ್‌ಗಳನ್ನು ಸಹ ಖರೀದಿಸಿದೆ. 2024ರ ಅಕ್ಟೋಬರ್‌ನಲ್ಲಿ ರೈಫಲ್‌ಗಳು ಮತ್ತು ವಿವಿಧ ಕ್ಷಿಪಣಿಗಳನ್ನೂ ಖರೀದಿಸಿದೆ. ಜೊತೆಗೆ, 31 MQ-9B ಮಾನವರಹಿತ ವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದಾಗ್ಯೂ, ಇನ್ನೂ ವಿವಿಧ ರಕ್ಷಣಾ ಸಾಧನಗಳ ರಫ್ತು-ಆಮದು ಮಾತುಕತೆಗಳೂ ನಡೆಯುತ್ತಿವೆ.

ಆದರೆ, ಈ ಎಲ್ಲ ಖರೀದಿಗಳ ಆಚೆಗೂ ಭಾರತದ ಮೇಲೆ ಅಮೆರಿಕದ ಒತ್ತಡ ಹೆಚ್ಚುತ್ತಲೇ ಇದೆ. ಟ್ರಂಪ್ ಮತ್ತು ಲುಟ್ನಿಕ್ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಶಸ್ತ್ರಾಸ್ತ್ರ ಖರೀದಿಗೆ ಒತ್ತಾಯಿಸುತ್ತಿದ್ದಾರೆ. ಟ್ರಂಪ್ ಅವರು F-35 ಯುದ್ಧವಿಮಾನದ ಮಾರಾಟವನ್ನು ಹೆಚ್ಚಿಸಲು ಹವಣಿಸುತ್ತಿದ್ದಾರೆ ಎಂದು ಭಾರತೀಯ ವಾಯುಪಡೆಯ ನಿವೃತ್ತ ಯೋಧರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವರದಿ ಓದಿದ್ದೀರಾ?: ವಿಶ್ವದಲ್ಲೇ ಅತಿ ಹೆಚ್ಚು ಶಸ್ತ್ರಾಸ್ತ್ರ ಆಮದು: ಪ್ರಧಾನಿ ಮೋದಿಗೆ ಯುದ್ಧ ದಾಹವೇ?

ಇತ್ತೀಚೆಗೆ, ವಾಯುಪಡೆಯ ಮುಖ್ಯಸ್ಥ ಎ.ಪಿ. ಸಿಂಗ್ F-35ಅನ್ನು ಖರೀದಿಸುವ ಬಗ್ಗೆ ಯಾವುದೇ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆ ಸಮಯದಲ್ಲಿ, ಅವುಗಳ ಖರೀದಿ ಬಗ್ಗೆ ಅಮೆರಿಕದಿಂದ ಯಾವುದೇ ಔಪಚಾರಿಕ ಪ್ರಸ್ತಾಪವಿರಲಿಲ್ಲ. ಆದರೆ, ಈಗ ಅಮೆರಿಕ ತಾನು ಸೂಚಿಸುವ ಯಾವುದೇ ಶಸ್ತ್ರಾಸ್ತ್ರವನ್ನು ಖರೀದಿಸಬೇಕೆಂದು ಭಾರತದ ಮೇಲೆ ಒತ್ತಡ ಹಾಕಲು ಮುಂದಾಗಿದೆ. ಮಾತ್ರವಲ್ಲದೆ, ತನ್ನ ಶಸ್ತ್ರಾಸ್ತ್ರಗಳನ್ನು ಹೇಗೆ ಮತ್ತು ಎಲ್ಲಿ ಬಳಸಿಕೊಳ್ಳಬಹುದು ಎಂಬುದರ ಕುರಿತು ಕಟ್ಟುನಿಟ್ಟಿನ ಷರತ್ತುಗಳನ್ನೂ ವಿಧಿಸುತ್ತದೆ. ಆ ಷರತ್ತುಗಳನ್ನು ಅನುಸರಿಸದಿದ್ದರೆ, ಸಂಬಂಧಿತ ಸಾಧನಗಳಿಗೆ ತಾಂತ್ರಿಕ ನೆರವು, ಬಿಡಿಭಾಗಗಳು ಅಥವಾ ಎರಡನ್ನೂ ಹಿಂಪಡೆಯಬಹುದು ಮತ್ತು ಭಾರೀ ಆರ್ಥಿಕ ದಂಡ ವಿಧಿಸಬಹುದು ಎಂದೂ ಅಮೆರಿಕ ಪ್ರತಿಪಾದಿಸುತ್ತದೆ.

ಅಮೆರಿಕದ ಶಸ್ತ್ರಾಸ್ತ್ರ ಕಂಪನಿಗಳಿಂದ ವಿದೇಶಕ್ಕೆ ತಂತ್ರಜ್ಞಾನ ವರ್ಗಾವಣೆಗಳು ಕೂಡ ಸೀಮಿತವಾಗಿರುತ್ತವೆ. ಯಾವುದೇ ದೇಶವು ಶಸ್ತ್ರಾಸ್ತ್ರಗಳ ಬಳಕೆಗೆ ತಮ್ಮನ್ನೇ ಅವಲಂಬಿಸಿರಬೇಕು ಎಂಬ ಹುಂಬುತನ ಅಮೆರಿಕದ್ದು. ಇದರಿಂದಾಗಿ ಆಮದುದಾರರ ಸ್ಥಳೀಯ ಸಾಮರ್ಥ್ಯಗಳನ್ನು ಮೊಟಕುಗೊಳಿಸುತ್ತವೆ. ಅಲ್ಲದೆ, ಅಮೆರಿಕದ ಉಪಕರಣಗಳು ನಿರ್ವಹಣೆಯೂ ದುಬಾರಿಯಾಗಿರುತ್ತವೆ. ಅದಕ್ಕಾಗಿ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (MRO) ಒಪ್ಪಂದಗಳೂ ಜಾರಿಯಲ್ಲಿವೆ. ಇದು, ಅಮೆರಿಕ ಮೂಲದ ಉಪಕರಣಗಳನ್ನು ನಿರ್ವಹಿಸುವಲ್ಲಿ ಆಮದು ಮಾಡಿಕೊಳ್ಳುವ ದೇಶಗಳು ದೀರ್ಘಕಾಲದವರೆಗೆ ವೆಚ್ಚ ಮಾಡುತ್ತಲೇ ಇರಬೇಕಾಗುತ್ತದೆ.

ಇದಲ್ಲದೆ, 2009ರಲ್ಲಿ ಭಾರತ ಮತ್ತು ಅಮೆರಿಕ ನಡುವೆ ನಡೆದ ‘ಎಂಡ್ ಯುಸ್ ಮಾನಿಟರಿಂಗ್ ಅಗ್ರಿಮೆಂಟ್’ (EUMA) ರೀತಿಯ ಅಮೆರಿಕದ ಪ್ರೋಟೋಕಾಲ್‌ಗಳು, ಶಸ್ತ್ರಾಸ್ತ್ರ ತಯಾರಕರ ಒಪ್ಪಿಗೆ ಇಲ್ಲದೆ, ಅವುಗಳನ್ನು ಭಾರತವು ತನ್ನ ಅಗತ್ಯಗಳಿಗೆ ತಕ್ಕಂತೆ ಮರುಹೊಂದಿಸುವಂತಿಲ್ಲ ಮತ್ತು ಅಳವಡಿಸಿಕೊಳ್ಳುವಂತಿಲ್ಲ. ಇದು ಭಾರತಕ್ಕೆ ಅನೇಕ ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡುತ್ತದೆ.

“ಉಪಕರಣಗಳ ಮೇಲಿನ ಇಂತಹ ನಿರ್ಬಂಧಗಳು ಶಸ್ತ್ರಾಸ್ತ್ರ ಖರೀದಿ ರಾಷ್ಟ್ರಗಳ ಮೇಲೆ ಅಮೆರಿಕಗೆ ನಿರಂತರ ಹಿಡಿತವನ್ನು ಒದಗಿಸುತ್ತವೆ” ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸವಾಲುಗಳ ಹೊರತಾಗಿಯೂ, ಅಮೆರಿಕದ ಶಸ್ತ್ರಾಸ್ತ್ರಗಳು ಜಾಗತಿಕ ಮಟ್ಟದಲ್ಲಿ ತಾಂತ್ರಿಕವಾಗಿ ಸಾಟಿಯಿಲ್ಲದ ರೀತಿಯಲ್ಲಿವೆ ಎಂಬ ಅಭಿಪ್ರಾಯಗಳೂ ಇವೆ. ವಿಶೇಷವಾಗಿ ರಹಸ್ಯ, ಏವಿಯಾನಿಕ್ಸ್ ಮತ್ತು ನೆಟ್‌ವರ್ಕ್-ಕೇಂದ್ರಿತ ಯುದ್ಧದ ಕ್ಷೇತ್ರದಲ್ಲಿ ಅಮೆರಿಕ ಉಪಕರಣಗಳು ಮುಂಚೂಣಿಯಲ್ಲಿವೆ.

ಇದೆಲ್ಲದರ ನಡುವೆ, ಟ್ರಂಪ್‌ ಅವರಿಗೆ ಅಮೆರಿಕದ ಆರ್ಥಿಕತೆಯನ್ನು ಹೆಚ್ಚಿಸಬೇಕೆಂಬ ಹಪಾಹಪಿಕೆ ಇದೆ. ಅದಕ್ಕಾಗಿ, ಅಮೆರಿಕದಲ್ಲಿ ‘ಸ್ಟಾಕ್’ ಇರುವ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವುದು ಅವರ ಗುರಿ. ಅದಕ್ಕಾಗಿ ಭಾರತದಂತಹ ರಾಷ್ಟ್ರಗಳ ಮೇಲೆ ಶಸ್ತ್ರಾಸ್ತ್ರ ಖರೀದಿಗೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ವಿಶ್ವಗುರು ಮೋದಿ ಅವರು ಟ್ರಂಪ್‌ ಅವರ ‘ಲಕ್ಷ್ಮಣ ರೇಖೆ’ಯನ್ನು ದಾಟುವವರಲ್ಲ. ದಾಟುವಂತೆ ಕಾಣುವುದೂ ಇಲ್ಲ. ಹೀಗಾಗಿ, ಅಮೆರಿಕದ ವಾಣಿಜ್ಯ ಕಾರ್ಯದರ್ಶಿಯೂ ಭಾರತಕ್ಕೆ ತಾಕೀತು ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X