ಬಿಪೊರ್‌ಜಾಯ್ ಚಂಡಮಾರುತದ ಪರಿಣಾಮದಿಂದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಇದೀಗ ಚುರುಕಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಮಳೆ ಆರಂಭವಾಗಿದೆ.
ರಾಜ್ಯದ ಬಹುತೇಕ ಕಡೆ ಮುಂಗಾರು ಚುರುಕಾಗಿದೆ. ಈ ಹಿನ್ನಲೆ ರಾಜ್ಯದ ಹಲವು ಭಾಗಗಳಲ್ಲಿ ಈ ವಾರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಗುಡುಗು ಮಿಂಚಿನ ಸಹಿತ ಉತ್ತಮ ಮಳೆಯಾಗಲಿದೆ.
ಬೆಂಗಳೂರಿನಲ್ಲಿ ಮಂಗಳವಾರ ಮುಂಜಾನೆಯಿಂದಲೇ ಮಳೆ ಸುರಿಯುತ್ತಿದ್ದು, ಜನ ಹೊರಗಡೆ ವಾಕಿಂಗ್ ಇತ್ಯಾದಿಗಳಿಗೆ ಬರಲು ಹಿಂಜರಿದರು. ಬೆಂಗಳೂರಿನಲ್ಲಿ ಮಲೆನಾಡಿನಂತಾಗಿದ್ದು, ತುಂತುರು ಮಳೆಯ ನಡುವೆ ಜನ ಓಡಾಡಿದರು. ಇಷ್ಟು ದಿನ ಸೆಕೆ, ಬಿಸಿಲಿನಿಂದ ಕಂಗೆಟ್ಟಿದ್ದ ನಗರವಾಸಿಗಳು ತುಂತುರು ಮಳೆಯಿಂದ ಮೈ ಕುಲುಕಿಸುವ ಚಳಿಯನ್ನು ಆನಂದಿಸಿದ್ದಾರೆ.
ಜೂನ್ ಮೂರನೇ ವಾರ ಮುಗಿಯುವ ಹಂತಕ್ಕೆ ಬಂದರೂ ಮಳೆ ಬಾರದ ಕಾರಣ ರೈತರು ಕಂಗಾಲಾಗಿದ್ದರು. ಕೃಷಿ ಭೂಮಿಯನ್ನು ಹದಮಾಡಿಕೊಂಡು ಬಿತ್ತನೆಗೆ ಕಾಯುತ್ತಿದ್ದ ರೈತರು ಕೊನೆಗೂ ಹರ್ಷ ವ್ಯಕ್ತಪಡಿಸುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ಬರದ ಭೀತಿಯಲ್ಲಿದ್ದ ರೈತರಿಗೆ ಮಳೆ ಸೂಚನೆ
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ತುಮಕೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳ ಹಲವು ಭಾಗಗಳಲ್ಲಿ ಉತ್ತಮ ಮಳೆಯನ್ನು ನಿರೀಕ್ಷಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಇನ್ನೆರಡು ದಿನ ಮಳೆ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.