ಐತಿಹಾಸಿಕ ಪ್ರಸಿದ್ಧ ಬಿದರೆ ಗ್ರಾಮ ಸುಮಾರು 40 ದೇವಾಲಯಗಳನ್ನು ಹೊಂದಿದ್ದು ಯಾವುದೇ ಜಾತಿ ತಾರತಮ್ಯ ಇಲ್ಲದೆ ಧಾರ್ಮಿಕ ಕ್ಷೇತ್ರವಾಗಿ ಶ್ರೀ ತಿರುಮಲ ಟ್ರಸ್ಟ್ ಪರಿಸರ ಕಾಳಜಿ ಹೊತ್ತು ಸಾಂಪ್ರದಾಯಿಕ ಸಸಿಗಳನ್ನು ಮೂಲಕ ಸಾಮಾಜಿಕ ಸೇವೆಯಲ್ಲಿ ನಿರತವಾಗಿದೆ ಎಂದು ಶ್ರೀ ತಿರುಮಲ ಟ್ರಸ್ಟ್ ಅಧ್ಯಕ್ಷ ಬಿದರೆ ಪ್ರಕಾಶ್ ತಿಳಿಸಿದರು.
ತಾಲ್ಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮದ ಶ್ರೀ ತಿರುಮಲ ದೇವಾಲಯದ ಬಳಿಯ ಹರಿಹರ ರಸ್ತೆಯಲ್ಲಿ ಹಿರಿಯರ ಸ್ಮರಣಾರ್ಥ 30 ವಿಶೇಷ ತಳಿಗಳ ಸಸಿಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಪೋಷಿಸುವ ಸಾಮಾಜಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ತೋಟಗಳಲ್ಲಿ ಗಿಡ ನೆಟ್ಟು ಪೋಷಿಸಿದರೆ ಒಂದು ಕುಟುಂಬವಷ್ಟೇ ಸ್ಮರಿಸುತ್ತದೆ. ಸಾರ್ವಜನಿಕ ರಸ್ತೆಯಲ್ಲಿ ಹೂವು ಹಣ್ಣು ನೀಡುವ ಸಸಿಗಳನ್ನು ನೆಟ್ಟು ಪೋಷಿಸಿದರೆ ಇಡೀ ಗ್ರಾಮವೇ ಮೆಚ್ಚುಗೆ ವ್ಯಕ್ತಪಡಿಸುವ ಜೊತೆ ಮುಂದಿನ ಪೀಳಿಗೆ ಸಾಮಾಜಿಕ ಕಳಕಳಿ ಬಗ್ಗೆ ಮಾದರಿಯಾಗುತ್ತದೆ ಎಂದು ವಿವರಿಸಿದರು.

ಪ್ರತಿಯೊಂದು ಸಸಿಯನ್ನು ಗ್ರಾಮದ ಹಿರಿಯರ ಸ್ಮರಣಾರ್ಥ ನೆಟ್ಟು ಸಸಿಗೆ ಐದು ಸಾವಿರ ವೆಚ್ಚದಲ್ಲಿ ಟ್ರೀ ಗಾರ್ಡ್ ಹಾಗೂ ಸಿಮೆಂಟ್ ಬಳೆ ಬಳಸಿ ಸಂಪೂರ್ಣ ಸಂರಕ್ಷಣೆ ಮಾಡಲಾಗಿದೆ. ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಅವರ ಅನುದಾನದ ಸಿಸಿ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಟ್ಟು ಗ್ರಾಮದ ಸೌಂದರ್ಯ ಹೆಚ್ಚಿಸಲಾಗಿದೆ. ಮುಂದುವರೆದು ನೂರು ಸಸಿಗಳನ್ನು ಇದೇ ಮಾದರಿಯಲ್ಲಿ ನೆಟ್ಟು ಪೋಷಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಾಮಾಜಿಕ ಕಳಕಳಿ ತೋರುವ ಕೆಲಸ ಟ್ರಸ್ಟ್ ಮಾಡಲಿದೆ. ಮುಂದಿನ ದಿನದಲ್ಲಿ ಶಾಲಾ ಆವರಣದಲ್ಲಿ ಪರಿಸರ ಉಳಿಸುವುದು, ಆರೋಗ್ಯ ಶಿಬಿರ, ಬಡವರಿಗಾಗಿ ಸಮುದಾಯ ಭವನ ನಿರ್ಮಾಣ ಹೀಗೆ ನಾನಾ ಸಾಮಾಜಿಕ ಕಾರ್ಯ ಮಾಡಲು ಚಿಂತನೆ ನಡೆಸಲಾಗಿದೆ ಎಂದರು

ಇತಿಹಾಸ ಪ್ರಸಿದ್ಧ ಶ್ರೀ ತಿರುಮಲ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿ ಗ್ರಾಮದಿಂದ ಬೇರೆಡೆ ಇರುವವರಿಗೂ ತಿಳಿಸಿ ಭಾವ ಬಾಂಧವ್ಯ ಎಂಬ ಕಾರ್ಯಕ್ರಮ ಆಯೋಜನೆ ಮಾಡಿದಾಗ 400 ಮಂದಿ ಸ್ಥಳೀಯ ಗ್ರಾಮಸ್ಥರು ದೇವಾಲಯ ಕೆಲಸಕ್ಕೆ ಕೈ ಜೋಡಿಸಿ 14 ತಿಂಗಳಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಯಿತು. ಈ ಸಮಯದಲ್ಲಿ ರಚನೆಯಾದ ತಿರುಮಲ ಟ್ರಸ್ಟ್ ಸಾಮಾಜಿಕ ಕಾರ್ಯಗಳನ್ನು ಮಾಡಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ನಿರ್ಧರಿಸಿ ಸಸಿ ನೆಡುವ ಮೂಲಕ ಮೊದಲ ಮೆಟ್ಟಿಲು ಏರಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯ ವೈಖರಿ ತಾಲ್ಲೂಕಿನ ಇತರೆ ಗ್ರಾಮಕ್ಕೂ ಮಾದರಿಯಾಗುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಬಿ.ಎಲ್.ಸುಮತಿಕುಮಾರ್, ಕಾರ್ಯದರ್ಶಿಗಳಾದ ಸ್ಮಿತಾ ಶ್ರೀನಿವಾಸನ್, ಬಿ.ಎಸ್.ಚಂದ್ರಶೇಖರ್, ಟ್ರಸ್ಟ್ ಸದಸ್ಯರಾದ ಬಿ..ಎಸ್.ವೆಂಕಟೇಶ್, ಬಿ.ಜೆ.ಆದಿರಾಜ್, ರಂಗಸ್ವಾಮಯ್ಯ, ಬಿ.ಶ್ರೀನಿವಾಸನ್, ಆರ್.ಶೈಲಜಾ, ನಸರಿ ಈಶ್ವರಯ್ಯ, ಅಡವೀಶಯ್ಯ, ಈಶ್ವರಯ್ಯ ಇತರರು ಇದ್ದರು.