- ಪಂಡಿತ್ ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆ
- ರಂಗಮಂದಿರಗಳನ್ನು ಪ್ರತಿ ಜಿಲ್ಲೆಗೆ ನಿರ್ಮಾಣ ಮಾಡಲು ಆಲೋಚನೆ
ಕರ್ನಾಟಕ ರಾಜ್ಯ ಎಂದು ನಾಮಕರಣವಾಗಿ 50 ವರ್ಷ ತುಂಬಿದ ಹಿನ್ನೆಲೆ ವರ್ಷವಿಡಿ ಸಂಗೀತ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುವುದು. ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದಲೇ ಚಾಲನೆ ನೀಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಜಿಲ್ಲಾ ರಂಗಮಂದಿರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆ ಕಲೆ ಮತ್ತು ಸಂಸ್ಕೃತಿಯಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಈ ರಂಗಮಂದಿರ ನಿರ್ಮಾಣದಲ್ಲಿ ನಮ್ಮ ಇಲಾಖೆ ಉತ್ತಮ ಕಾರ್ಯ ನಿರ್ವಹಿಸಿದ್ದು, ಇಂತಹ ರಂಗಮಂದಿರಗಳನ್ನು ಪ್ರತಿ ಜಿಲ್ಲೆಗೆ ನಿರ್ಮಾಣ ಮಾಡಲು ಆಲೋಚನೆ ಮಾಡಲಾಗುವದು ಎಂದರು.
ಪಂಡಿತ್ ಪುಟ್ಟರಾಜ ಗವಾಯಿ ಸ್ಮಾರಕ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನವನ್ನು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಸಾಧ್ಯವಾದಷ್ಟು ಒದಗಿಸಿ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಬರವಸೆ ನೀಡಿದರು.
ಪ್ರವಾಸೋದ್ಯಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಮಾತನಾಡಿ, ಗದುಗಿಗೆ ಇಂದು ಸಂತೋಷದ ದಿನವಾಗಿದೆ. ನಾವೆಲ್ಲ ಅಭಿಮಾನ ಪಡುವ ರೀತಿಯಲ್ಲಿ ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಅವರ ಹೆಸರಿನಲ್ಲಿ ಪ್ರಾರಂಭವಾಗಿರುವ ರಂಗಮಂದಿರ ಉತ್ತಮ ಗುಣಮಟ್ಟದೊಂದಿಗೆ ಅಂತರಾಷ್ಟ್ರೀಯ ಮಟ್ಟದ ರಂಗ ಮಂದಿರ ಇದಾಗಿದೆ ಎಂದರು.
ದೇಶದಲ್ಲಿ ಸಂಗೀತ ಕ್ಷೇತ್ರದಲ್ಲಿ ಎಕೈಕ ಭಾರತ ರತ್ನ ಪಡೆದಿರುವುದು ಗದುಗಿನ ಪಂಡಿತ್ ಭೀಮಸೇನ್ ಜೋಶಿ ಎಂಬುದು ಹೆಮ್ಮೆಯ ವಿಷಯವಾಗಿದೆ. ವರ್ಷದಲ್ಲಿ ಸರ್ಕಾರಿ ಪೋಷಿತ ಇಪ್ಪತ್ತೈದು ಕಾರ್ಯಕ್ರಮಗಳು ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಲ್ಲಿ ಮನವಿ ಮಾಡಿದರು.
ಹಂಪಿಯಷ್ಠೆ ಶ್ರೇಷ್ಠವಾದ ಸ್ಮಾರಕ ಲಕ್ಕುಂಡಿ ನಮ್ಮಲ್ಲಿದ್ದು, ಇದರ ಜೊತೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಭೆಗಳು ದೊರೆಯುತ್ತವೆ. ಈ ನಾಡು ಪ್ರವಾಸೊದ್ಯಮದ ನಾಡಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯನ್ಮುಕವಾಗಬೇಕು ಎಂದರು.
ಯುವಕರು ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಸಾಕಷ್ಟು ಸಂಸ್ಕೃತ ಭವನಗಳು ನಿರ್ಮಾಣಗೊಂಡಿದ್ದು ಅದರಲ್ಲಿ ಇದೊಂದು ವಿಶೇಷ ರಂಗಮಂದಿರವಾಗಿದೆ. ಇವೆಲ್ಲಗಳ ನಿರ್ಮಾಣಕ್ಕೆ ಸಾಕಷ್ಟು ಆಯಾಸ ಪಟ್ಟಿದ್ದು ಇದರಿಂದ ಸುಧಾರಿಸಿಕೊಳ್ಳಲು ಅನುದಾನ ನೀಡಿಬೇಕು ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ರಂಗ ಮಂದಿರಕ್ಕೆ ಪಂ. ಭೀಮಸೇನ ಜೋಷಿ ಹೆಸರು ಇಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದಂತಾಗಿದೆ ಎಂದರು. ಗದಗ ಜಿಲ್ಲೆಯ ಇತಿಹಾಸ ಹಾಗೂ ಪ್ರಸಿದ್ದಿಯನ್ನು ಅಳಿಯದಂತೆ ಉಳಿಸಲು ಒಂದು ಪುಸ್ತಕ ರೂಪದಲ್ಲಿ ಹೊರ ತರಬೇಕೇಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಾಡಾನೆ ಹಾವಳಿ ತಡೆಗೆ ಜಂಟಿ ಸಮೀಕ್ಷೆ ನಡೆಸಿ ಕ್ರಮ; ಈಶ್ವರ ಖಂಡ್ರೆ ಭರವಸೆ
ಜಿಲ್ಲಾಧಿಕಾರಿ ಎಂ ಎಲ್ ವೈಶಾಲಿ ಮಾತನಾಡಿ, ಸಚಿವರ ಹೆಬ್ಬಯಕೆಯಂತೆ ಸುಸಜ್ಜಿತ ಮತ್ತು ಭವ್ಯವಾದ ಜಿಲ್ಲಾ ರಂಗಮಂದಿರ ನಿರ್ಮಾಣಗೊಂಡಿದೆ. 582 ಆಸನಗಳುಳ್ಳ ಅತ್ಯಾಧುನಿಕ ತಂತ್ರಜ್ಞಾನದ ಸೌಂಡ ಸಿಸ್ಟಮ್ ಜೊತೆಗೆ ನಿರ್ಮಾಣಗೊಂಡಿರುವ ಈ ರಂಗ ಮಂದಿರ ಜಿಲ್ಲೆಯ ಹೆಮ್ಮೆ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೆಶಕ ವಿಶ್ವನಾಥ ಹಿರೇಮಠ , ಕೊಳಲು ವಾದಕ ರಾಕೇಶ ಚೌರಾಸಿಯಾ, ತಬಲಾ ವಾದಕ ಪಂ. ವಿಜಯ ಘಾಟೆ, ಹಿಂದೂಸ್ಥಾನಿ ಗಾಯಕ ವೆಂಕಟೇಶಕುಮಾರ, ಮಾಜಿ ಸಂಸದ ಪ್ರೊ. ಐ ಜಿ ಸನದಿ, ನಗರಸಭೆ ವಿರೋಧ ಪಕ್ಷದ ನಾಯಕ ಎಲ್ ಡಿ ಚಂದಾವರಿ ಹಾಗೂ ಇತರರು ಭಾಗವಹಿಸಿದ್ದರು.