- 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ವರ್ಗಾವಣೆ ಮಾಡಿ
- 300 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆಯಾದರೂ ಮೂಲ ಸೌಕರ್ಯ ಒದಗಿಸಿಲ್ಲ
ರಿಮ್ಸ್ ಅಸ್ಪತ್ರೆಯಲ್ಲಿ 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಮತ್ತು ಅನುದಾನ ದುರ್ಬಳಕೆ ಮಾಡಿ, ಕರ್ತವ್ಯ ಲೋಪ ಎಸಗಿದ ರಿಮ್ಸ್ ನಿರ್ದೇಶಕ ಹಾಗೂ ಆಡಳಿತಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ರಾಯಚೂರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಧರಣಿ ನಡೆಸಿದರು.
ಸರ್ಕಾರ ನಿಗಧಿಪಡಿಸಿದಂತೆ ಸಮಯಕ್ಕೆ ಸರಿಯಾಗಿ ವೈದ್ಯರು ರೋಗಿಗಳಿಗೆ ಆರೈಕೆ ಮತ್ತು ಗುಣಮಟ್ಟದ ಚಿಕಿತ್ಸೆ ಮತ್ತು ಅವರ ಕರ್ತವ್ಯ ಸಮಯ ಕಡ್ಡಾಯವಾಗಿ ಪಾಲನೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸುಮಾರು 15 ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಕೂಡಲೇ ಬೇರೆಕಡೆಗೆ ವರ್ಗಾವಣೆ ಮಾಡಬೇಕು. ರಿಮ್ಸ್ ನಿರ್ದೇಶಕ ಡಾ. ಬಸವರಾಜ ಮೀರಾಪೂರ ಅವರ ಅವಧಿಯಲ್ಲಿ ಮೂಲ ಸೌಕರ್ಯ ಒದಗಿಸಲು ಬಂದ ಅನುದಾನವು ಸಂಪೂರ್ಣವಾಗಿ ದುರ್ಬಳಕೆಯಾಗಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕ ಹಿತಾದೃಷ್ಟಿಯಿಂದ ಪ್ರತಿ ತಿಂಗಳಿಗೆ ಎರಡು ಬಾರಿ ಜಿಲ್ಲಾಧಿಕಾರಿಗಳು ಖುದ್ದಾಗಿ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಬೇಕು. ವೈದ್ಯರು ಕೆಲವೊಂದು ಔಷಧಿಗಳನ್ನು ಮತ್ತು ರಕ್ತ ಪರೀಕ್ಷೆಗಳನ್ನು ಮಾಡಿಸಲು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ರೋಗಿಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಚ್ಚಿನ ಚಿಕಿತ್ಸೆಯ ಸಲುವಾಗಿ ಸಾಗಿಸಲು ಆಂಬುಲೆನ್ಸ್ ಹಾಗೂ ಶವ ಸಾಗಿಸಲು ಕಪ್ಪು ಅಂಬುಲೆನ್ಸ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಹೊಸದಾಗಿ 300 ಹಾಸಿಗೆಗಳ ಆಸ್ಪತ್ರೆ ಉದ್ಘಾಟನೆಯಾದರೂ ಇದಕ್ಕೆ ಮೂಲ ಸೌಕರ್ಯ ಇಲ್ಲ. ಇದುವರೆಯಾದರೂ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿಲ್ಲ ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಸುಳ್ಳು ಸುದ್ದಿಗೆ, ವದಂತಿಗೆ ಕಡಿವಾಣ ಹಾಕಲು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ಆಸ್ಪತ್ರೆಯ ಮೂಲ ಸೌಕರ್ಯ ಮತ್ತು ಸ್ವಚ್ಛತೆ ಏಜನ್ಸಿಯ ವಿರುದ್ಧ ಕ್ರಮ ಜರುಗಿಸಿ, ಕೂಡಲೇ ಏಜನ್ಸಿ ಬದಲಾವಣೆ ಮಾಡಬೇಕು. ರಾತ್ರಿ ಸಮಯದ ಆಯಾ ವಾರ್ಡ್ಗಳಲ್ಲಿ ವೈದ್ಯರು ಕಡ್ಡಾಯವಾಗಿ ಕರ್ತವ್ಯದಲ್ಲಿ ಇರುವಂತೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಎಸ್ ನರಸಿಂಹಲು, ಹನುಮೇಶ ಅರೋಲಿ, ಜಂಬಯ್ಯ, ಎಂ ಡಿ ಬಾಬು, ಜಿ ನರಸಿಂಹ, ನಾಗೇಂದ್ರ, ಜಲಾಲ್, ವಿಜಯ ಕುಮಾರ ಹಾಗೂ ಇತರರು ಭಾಗವಹಿಸಿದ್ದರು.