ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಅಪರಿಚಿತ ಯುವತಿಯ ಶವ ಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ (22) ಎಂಬ ಯುವತಿ ರಾಣೆಬೆನ್ನೂರಿನ ಆಸ್ಪತ್ರೆಯಲ್ಲಿ ಶುಕ್ರೂಷಕಿ ಆಗಿದ್ದರು. ಮಾರ್ಚ್ 6ರಂದು ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಎಂದು ತಿಳಿದು ಬಂದಿದೆ.
ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣವನ್ನು ಭೇದಿಸಿರುವ ಹಲಗೇರಿ ಠಾಣೆಯ ಪೊಲೀಸರು, ನಯಾಜ್ ಬೆಣ್ಣಿಗೇರಿ (28) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಸಹಕರಿಸಿದ್ದರು ಎನ್ನಲಾದ ಆತನ ಸ್ನೇಹಿತರಾದ ಮಾಸೂರಿನ ದುರ್ಗಾಚಾರಿ ಬಡಿಗೇರ ಮತ್ತು ವಿನಾಯಕ ಪೂಜಾರ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಶೋಧ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ತಿಳಿಸಿದ್ದಾರೆ.
ಸ್ನೇಹ ಸಲುಗೆಗೆ ತಿರುಗಿತ್ತು
ಹೋರಿ ಹಬ್ಬದ ಸಂದರ್ಭದಲ್ಲಿ ಸ್ವಾತಿಗೆ ನಯಾಜ್, ದುರ್ಗಾಚಾರಿ ಮತ್ತು ವಿನಾಯಕ ಪರಿಚಯ ಆಗಿದ್ದರು. ಸ್ವಾತಿ ಮತ್ತು ನಯಾಜ್ ನಡುವಿನ ಸ್ನೇಹ, ಸಲುಗೆಗೆ ತಿರುಗಿತ್ತು. ಸ್ವಾತಿ ತಮ್ಮನ್ನು ಮದುವೆಯಾಗುವಂತೆ ನಯಾಜ್‌ಗೆ ಒತ್ತಾಯಿಸಿದ್ದರು. ಆದರೆ, ನಯಾಜ್ ಮದುವೆಗೆ ಒಪ್ಪಿರಲಿಲ್ಲ. ನಯಾಜ್‌ಗೆ ಬೇರೊಂದು ಯುವತಿ ಜೊತೆ ಮದುವೆ ನಿಶ್ಚಯವಾದ ವಿಷಯ ತಿಳಿದ ಕೂಡಲೇ, ಅವರ ಮನೆಗೆ ತೆರಳಿ ಸ್ವಾತಿ ಗಲಾಟೆ ಮಾಡಿದ್ದರು. ಇದರಿಂದ ಸಿಟ್ಟಿಗೆದ್ದ ನಯಾಜ್, ಸ್ವಾತಿಯ ಕೊಲೆ ಮಾಡಲು ಸಂಚು ರೂಪಿಸಿದ್ದ ಎಂಬುದು ಗೊತ್ತಾಗಿದೆ’ ಎಂದು ಅಂಶುಕುಮಾರ ವಿವರಿಸಿದ್ದಾರೆ.
“ಮಾತುಕತೆ ನೆಪದಲ್ಲಿ ಸ್ವಾತಿ ಅವರನ್ನು ಮಾರ್ಚ್ 3ರಂದು ರಟ್ಟಿಹಳ್ಳಿಗೆ ಕರೆಸಿದ್ದ ಆರೋಪಿ ನಯಾಜ್, ಬಾಡಿಗೆ ಕಾರಿನಲ್ಲಿ ರಾಣೆಬೆನ್ನೂರಿನಲ್ಲಿರುವ ಸುವರ್ಣ ಉದ್ಯಾನಕ್ಕೆ ಕರೆದೊಯ್ದಿದ್ದ. ಅದೇ ಉದ್ಯಾನಕ್ಕೆ ದುರ್ಗಾಚಾರಿ ಹಾಗೂ ವಿನಾಯಕ ಸಹ ಬಂದಿದ್ದರು. ನಂತರ, ನಾಲ್ವರು ಸೇರಿ ರಟ್ಟಿಹಳ್ಳಿಯ ಕಬ್ಬಿಣಕಂತಿಮಠ ಬಳಿಯ ಪಾಳು ಬಿದ್ದ ತರಳಬಾಳು ಶಾಲೆಗೆ ಹೋಗಿದ್ದರು. ಅಲ್ಲಿ ನಯಾಜ್ ಹಾಗೂ ಸ್ವಾತಿ ನಡುವೆ ಜಗಳ ತಾರಕಕ್ಕೇರಿದೆ. ಆಗ ಮೂವರು ಆರೋಪಿಗಳು ಸೇರಿ ಸ್ವಾತಿ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ, ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾರೆ. ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೂಸಗಟ್ಟಿ ನಂದಿಗುಡಿ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಎಸೆದಿದ್ದರು. ಅದೇ ಶವ ತೇಲಿ ಹೋಗಿ, ಮಾರ್ಚ್ 6ರಂದು ಪತ್ತೇಪುರ ಬಳಿ ಪತ್ತೆಯಾಗಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಯುವತಿಯನ್ನು ಫಯಾಜ್ ಎನ್ನುವಬ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ ಪ್ರಕರಣದಂತೆ ಹಾವೇರಿಯಲ್ಲಿ ಹಿಂದು ಯುವತಿಯನ್ನು ನಯಾಜ್ ಮತ್ತು ಆತನ ಸ್ನೇಹಿತರು ಜೊತೆಗೂಡಿ ಕೊಲೆ ಮಾಡಿದ್ದಾರೆ ಎಂದು ‘ಹಿಂದೂ ಯುವತಿ ಹತ್ಯೆ, #Justiceforswati’ ಎಂಬ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದೆ. ಕೊಲೆಗಾರರಲಿ ಇನ್ನುಳಿದ ಆರೋಪಿಗಳು ಹಿಂದೂ ಯುವಕರೇ ಆಗಿದ್ದಾರೆ.
ಸಂಘಪರಿವಾರದ ಕಲ್ಪಿತ ಸಿದ್ಧಾಂತ ‘ಲವ್ ಜಿಹಾದ್’ ಮುನ್ನೆಲೆಗೆ
ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣದಲ್ಲಿ ಸಂಘಪರಿವಾರದ ಕಲ್ಪಿತ ಸಿದ್ಧಾಂತವಾದ ಲವ್ ಜಿಹಾದ್ ಆರೋಪ ಮುನ್ನೆಲೆಗೆ ಬಂದಿದೆ. ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ವಿವಾಹವಾಗಿ, ಮತಾಂತರ ಮಾಡುತ್ತಾರೆಂಬ ಸಂಘಪರಿವಾರದ ಕಲ್ಪಿತ ಪಿತೂರಿಯೇ ಲವ್ ಜಿಹಾದ್. ಈಗ ಸ್ವಾತಿ ಪ್ರಕರಣದಲ್ಲೂ ಈ ವಿಚಾರವನ್ನು ಮುಂದಿಟ್ಟುಕೊಂಡು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಲವ್ ಜಿಹಾದ್ ಆರೋಪ ಮಾಡಿದ್ದಾರೆ.
ಎಕ್ಸ್ ತಾಣದಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬೊಮ್ಮಾಯಿ, “ಸ್ವಾತಿ ಬ್ಯಾಡಗಿ ಎಂಬ ಯುವತಿಯನ್ನು ವಂಚಿಸಿ ಹತ್ಯೆ ಮಾಡಿರುವ ಘಟನೆ ಖಂಡನೀಯವಾಗಿದ್ದು, ರಾಜ್ಯದಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ಸಕ್ರೀಯವಾಗಿದೆ. ಪೊಲೀಸರ ಭಯ ಇಲ್ಲದಿರುವುದೇ ಇಂತಹ ಪ್ರಕರಣ ಹೆಚ್ಚಾಗಲು ಕಾರಣ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದ್ದು, ವಿಶೇಷವಾಗಿ ಪ್ರೀತಿ ಹೆಸರಿನಲ್ಲಿ ಯುವತಿಯರನ್ನು ವಂಚಿಸಿ ಹತ್ಯೆ ಮಾಡುವ ಹೇಯ ಕೃತ್ಯಗಳು ಹೆಚ್ಚಾಗಿರುವುದು ಅತ್ಯಂತ ಆಘಾತಕಾರಿ” ಎಂದು ಹೇಳಿದ್ದಾರೆ.
“ಹುಬ್ಬಳ್ಳಿಯಲ್ಲಿ ಕಾಲೇಜು ಯುವತಿ ನೇಹಾ ಹಿರೇಮಠ ಅವಳ ಬರ್ಬರ ಕೊಲೆಯ ನೋವು ಮಾಸುವ ಮುನ್ನ ಈಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಎನ್ನುವ ಯುವತಿಯ ಕೊಲೆಯಾಗಿದ್ದು, ಇದೂ ಕೂಡ ಲವ್ ಜಿಹಾದ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಘಟನೆ ನಡೆದು ಒಂದು ವಾರ ಕಳೆದರೂ ಈ ಪ್ರಕರಣದಲ್ಲಿ ಬಂಧಿತನಾಗಿರುವ ನಯಾಜ್ ಎನ್ನುವ ಪ್ರಮುಖ ಆರೋಪಿಯ ರಕ್ಷಣೆಗೆ ದೊಡ್ಡ ಮಟ್ಟದ ಕಸರತ್ತು ನಡೆದಂತೆ ಕಾಣಿಸುತ್ತದೆ. ಸ್ವಾತಿಯನ್ನು ಪ್ರೀತಿಸುವ ನಾಟಕವಾಡಿ ಅನ್ಯ ಧರ್ಮದವಳೆಂದು ತಿರಸ್ಕರಿಸಿ ತನ್ನ ಧರ್ಮದ ಬೇರೆ ಯುವತಿಯ ಜೊತೆ ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದನ್ನು ಪ್ರಶ್ನಿಸಿರುವುದಕ್ಕೆ ಸ್ವಾತಿಯ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಇದೆ” ಎಂದರು.
“ಇತ್ತೀಚಿನ ದಿನಗಳಲ್ಲಿ ಪ್ರೀತಿಯ ಹೆಸರಿನಲ್ಲಿ ಲವ್ ಜಿಹಾದ್ ಜಾಲ ರಾಜ್ಯದಲ್ಲಿ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಕೃತ್ಯ ನಡೆಸುವವರಿಗೆ ಪೊಲೀಸರ ಭಯ ಇಲ್ಲದಿರುವುದು ಇಂತಹ ಪ್ರಕರಣ ಹೆಚ್ಚಾಗಲು ಕಾರಣ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುವುದರಿಂದ ಮಾತ್ರ ಇಂತಹ ಪ್ರಕರಣಗಳಿಗೆ ತಡೆ ಒಡ್ಡಬಹುದಾಗಿದೆ. ಇದರ ಬಗ್ಗೆ ಪೊಲೀಸರು ನಿಷ್ಠುರವಾಗಿ ಅಪರಾಧಿಗಳನ್ನು ಹಿಡಿದು ಅದರ ಹಿಂದೆ ಇರುವ ಶಕ್ತಿಗಳನ್ನು ಕಡಿವಾಣ ಹಾಕುವುದು ಅತ್ಯಂತ ಅವಶ್ಯ. ಆದರೆ, ಇಂತಹ ಪ್ರಕರಣಗಳು ಕೆಲವೇ ದಿನಗಳಲ್ಲಿ ಅಧಿಕಾರಿಗಳು ಗಾಂಭಿರ್ಯತೆಯಿಂದ ತೆಗೆದುಕೊಳ್ಳದೇ ಮರೆತು ಹೋಗುವುದು ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ.
“ಹೆಣ್ಣು ಮಕ್ಕಳ ಕುಟುಂಬ, ಬಂಧುಗಳು ಮತ್ತು ಸಮಾಜ ಅತ್ಯಂತ ನೋವು ಪಡುವ ಈ ಘಟನೆಯಲ್ಲಿ ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು ಮತ್ತು ನ್ಯಾಯ ದೊರಕಿಸಿ ಕೊಡಬೇಕು” ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.