ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರವನ್ನು ನಾವು ಖಂಡಿಸಬೇಕಿದೆ ಎಂದು ಸಾಮಾಜಿಕ, ರಾಜಕೀಯ, ಮಾನವ ಹಕ್ಕುಗಳ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರ್ತಿ ಅಕ್ಷತಾ ಕೆ ಸಿ ಹೇಳಿದರು.
ಧಾರವಾಡದ ನವನಗರದ ಚನ್ನಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿಶೇಷ ಉಪನ್ಯಾಸ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರ ಪರವಾಗಿ ಹೋರಾಡಿದ ವ್ಯಕ್ತಿ. ಆದರೆ, ಮಹಿಳೆಯರಿಗೆ ಇನ್ನೂ ಆರ್ಥಿಕ, ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ನ್ಯಾಯ ಸಿಗದೇ ಇರುವುದು ವಿಷಾದನೀಯ. ಇಂದಿಗೂ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅನ್ಯಾಯ, ಅತ್ಯಾಚಾರವನ್ನು ಖಂಡಿಸಬೇಕಿದೆ. ನಮ್ಮ ದೇಶದ ಮಹಿಳೆಯರಿಗೆ ಸಂವಿಧಾನದ ಆಶಯಗಳನ್ನು ಜಾರಿಗೆ ತರಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು” ಎಂದು ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ಚಂದ್ರಶೇಖರ ಕಂಬಾರ ದತ್ತಿ, ನಾಗಮ್ಮ ಈರಪ್ಪ ಅಳಗುಂಡಗಿ ದತ್ತಿ, ದತ್ತಾತ್ರೇಯ ಕೃಷ್ಣಾಜಿ ಕುಲಕರ್ಣಿ ದತ್ತಿ ಹಾಗೂ ಶಾಂತಾ ರಾಮಚಂದ್ರ ನಾಡಗೇರ ದತ್ತಿ, ಅಕ್ಷತಾ ಕೆ ಸಿ ಅವರು ಲಿಂಗ ತಾರತಮ್ಯ ಹಾಗೂ ಸಮಾಜದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಡಾ. ಲಿಂಗರಾಜ ಅಂಗಡಿ, ʼಮಹಿಳಾ ಪರ ಸಂಘಟನೆಗಳು ಮಹಿಳಾ ಜಾಗೃತಿಗಾಗಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಬೇಕುʼ ಎಂದರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಉಮಾ ಚಂದ್ರಶೇಖರ ಅಳಗುಂಡಗಿ ದಿ. ವಿ ಐ ಅಳಗುಂಡಗಿಯವರ ಹೆಸರಿನಲ್ಲಿ 25000 (ಇಪ್ಪತೈದು ಸಾವಿರ) ದತ್ತಿ ನಿಧಿ ಸ್ಥಾಪನೆ ಮಾಡಲು ಹೇಳಿದರು. ಬಳಿಕ ಅಕ್ಷತಾ ಕೆ ಸಿ ಅವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಧಾರವಾಡ | ಕೊಳತೆ ಸ್ಥಿತಿಯಲ್ಲಿ ಮೃತ ದೇಹ ಪತ್ತೆ ಪ್ರಕರಣ: ಆರೋಪಿಗಳಿಬ್ಬರ ಬಂಧನ
ಕಾರ್ಯಕ್ರಮದಲ್ಲಿ ಚನ್ನಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್ ಎಸ್ ಹೊಸೂರ, ಪ್ರೊ. ಕೆ ಎಸ್ ಕೌಜಲಗಿ, ಪ್ರೊ.ಪರಶುರಾಮ ಕೆಂಗಾರ, ಎಸ್ ಕೆ ಆದಪ್ಪನವರ, ಆರ್ ಟಿ ಅಣ್ಣಿಗೇರಿ, ಶಾಂತಾ ನಾಡಿಗೇರ, ಮಂಜುಳಾ ದತ್ತಾತ್ರೇಯ ಕುಲಕರ್ಣಿ, ಪದ್ಮಜಾ ಉಮರ್ಜಿ, ಸಂಧ್ಯಾ ದಿಕ್ಷೀತ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಕೆ ಎಸ್ ಕಬ್ಬೂರ, ಸೋಮಶೇಖರ್ ಇಟಗಿ, ಸುಮಂಗಲಾ ಅಂಗಡಿ, ಜಯಶ್ರೀ ಧಾರವಾಡ ಶೆಟ್ಟರ್, ಎಸ್ ಎಸ್ ಕರಡಿ, ಕು.ನೇತ್ರಾವತಿ ಕುರುಬರ, ಕು.ಗಂಗಮ್ಮ ಶ್ಯಾಗೋಟಿ, ಚನ್ನಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು.
