‘₹’ ಸಂಕೇತ ಕೈಬಿಟ್ಟ ತಮಿಳುನಾಡು ಸರ್ಕಾರ, ಎಂ ಕೆ ಸ್ಟಾಲಿನ್‌ನಿಂದ ದಿಟ್ಟ ಕ್ರಮ: ಕರವೇ ನಾರಾಯಣಗೌಡ

Date:

Advertisements

ತಮಿಳುನಾಡು ಸರ್ಕಾರದ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಮುಂಗಡಪತ್ರವನ್ನು ಓದುವ ಒಂದು ದಿನ ಮೊದಲು ತಾವೊಂದು ಗಂಭೀರ ನಡೆಯನ್ನು ಪ್ರದರ್ಶಿಸಿದ್ದೀರಿ. ಭಾರತದ ಒಕ್ಕೂಟ ಸರ್ಕಾರವು ಅಧಿಕೃತವಾಗಿ ಕಳೆದ 16 ವರ್ಷಗಳಿಂದ ಬಳಸುತ್ತಿರುವ ದೇವನಾಗರಿ ಲಿಪಿಯ ರೂಪಾಯಿ ಸಂಕೇತವನ್ನು ಕೈಬಿಟ್ಟು ಅದಕ್ಕೆ ಬದಲಾಗಿ ತಮಿಳುನಾಡಿನಲ್ಲಿ ತಮಿಳು ಲಿಪಿಯ ರೂಪಾಯಿ ಸಂಕೇತವನ್ನು ಬಳಸುವ ಗಟ್ಟಿಯಾದ ತೀರ್ಮಾನ ಮಾಡಿದ್ದೀರಿ. ಒಬ್ಬ ಹೆಮ್ಮೆಯ ಭಾರತೀಯನಾಗಿ ಮತ್ತು ಕನ್ನಡಿಗನಾಗಿ ನಿಮ್ಮ ಈ ನಡೆಯನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸಿ, ನಿಮ್ಮ ಈ ದಿಟ್ಟ ಕ್ರಮವನ್ನು ಅಭಿನಂದಿಸುತ್ತಿದ್ದೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

“ನಿಮ್ಮ ಈ ನಡೆಗೆ ಏನೇ ಟೀಕೆಗಳು ಬರಲಿ, ಪ್ರತಿರೋಧಗಳು ಬರಲಿ ಆದರೆ ಉತ್ತರ ಭಾರತದವರ ʼಹಿಂದಿ ಹೇರಿಕೆʼಯ ನಿರಂತರ ಪ್ರಯತ್ನಗಳಿಗೆ ಸಾಂಕೇತಿಕವಾಗಿ ನೀವು ಒಡ್ಡಿರುವ ಈ ಪ್ರತಿರೋಧ ನಿಜಕ್ಕೂ ಶ್ಲಾಘನೀಯವಾದುದು” ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

“ಒಕ್ಕೂಟ ಸರ್ಕಾರ ಮತ್ತು ಉತ್ತರ ಭಾರತದ ಹಿಂದಿ ಲಾಭಿಗಳು ಇಡೀ ದೇಶದ ನೂರಾರು ಭಾಷಿಕರ ಮೇಲೆ ಮೇಲೆ ತಮ್ಮ ಭಾಷೆಯನ್ನು ಹೇರುತ್ತ, ಹಿಂದಿ ಭಾಷೆಯನ್ನು ʼರಾಷ್ಟ್ರಭಾಷೆʼಯಾಗಿಸಬೇಕೆಂಬ ನೆಪದಲ್ಲಿ ನಾನಾ ವಿಧದಲ್ಲಿ ಹೇರುವ ಇಲ್ಲವೇ ತೂರಿಸುವ ಕೆಲಸ ಮಾಡಿಕೊಂಡೇ ಬರುತ್ತಿವೆ. ತ್ರಿಭಾಷಾ ಸೂತ್ರವನ್ನು ಹೇರಿ ನಮ್ಮ ಸ್ಥಳೀಯ ಭಾಷೆಗಳ ಕತ್ತು ಹಿಚುಕುವ ಕೆಲಸವನ್ನೇ ಮಾಡಿಕೊಂಡು ಬರುತ್ತಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮೂಲಕವೂ ಹಿಂದಿ ಹೇರಿಕೆ ಕೆಲಸ ನಡೆಯುತ್ತಿದೆ. ಅತ್ಯಂತ ನಾಚಿಕೆಗೇಡಿನ ಸಂಗತಿ ಏನೆಂದರೆ ಈ ಎನ್ಇಪಿಯನ್ನು ಒಪ್ಪಿಕೊಳ್ಳದೇ ಶಿಕ್ಷಣದಲ್ಲಿ ಸ್ವಾಯತ್ತತೆ ಕಾಪಾಡಿಕೊಳ್ಳಲು ಪ್ರಯತ್ನಿಸಿದ ರಾಜ್ಯ ಸರ್ಕಾರಗಳ ಮೇಲೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ತೋರುತ್ತಿರುವ ಅವಕೃಪೆ ಮತ್ತು ಅನಾದರಗಳು. ʼಒಪ್ಪಿಕೊಳ್ಳಿ ಇಲ್ಲವೇ ನಾವು ನೀಡುವ ಸಂಕಷ್ಟಗಳನ್ನು ಅನುಭವಿಸಿʼ ಎಂಬ ರೀತಿಯಲ್ಲಿ ಇವರು ಮಾಡುತ್ತಿರುವ ಒತ್ತಡ ತಂತ್ರಗಳು ನಮ್ಮ ಸಂವಿಧಾನ ಹೇಳುವ ಪ್ರಜಾಪ್ರಭುತ್ವ ತತ್ವಗಳಿಗೇ ಮಾಡಿರುವ ಅಪಮಾನ” ಎಂದಿದ್ದಾರೆ.

Advertisements

“2026ರಲ್ಲಿ ಮಾಡಲು ಉದ್ದೇಶಿಸಿರುವ ಡಿಲಿಮಿಟೇಶನ್ ಅಥವಾ ಕ್ಷೇತ್ರ ಪುನರ್ವಿಂಗಡಣೆಯು ದಕ್ಷಿಣ ರಾಜ್ಯಗಳ ಪಾಲಿನ ರಾಜಕೀಯ ಮರಣಶಾಸನವಾಗಿ ಪರಿಣಮಿಸಲಿದೆ. ಈ ಕುರಿತು ತಮ್ಮ ಸರ್ಕಾರ ಮತ್ತು ಇತರ ದಕ್ಷಿಣ ಭಾರತದ ಸರ್ಕಾರಗಳು ಕೇಂದ್ರಕ್ಕೆ ಮಾಡುತ್ತಿರುವ ಮನವಿಗಳಿಗೆ ಯಾವ ಬೆಲೆ ಕೊಡದೇ ಸರ್ವಾಧಿಕಾರ ಧೋರಣೆ ಪ್ರದರ್ಶಿಸಲಾಗುತ್ತಿದೆ. ಒಂದೊಮ್ಮೆ ಜನಸಂಖ್ಯೆ ಆಧಾರದಲ್ಲಿ ಈಗ ಮಾಡಲು ಹೊರಟಿರುವ ಕ್ಷೇತ್ರ ಪುನರ್ವಿಂಗಡಣೆ ಜಾರಿಯಾದರೆ ಜನಸಂಖ್ಯೆ ನಿಯಂತ್ರಿಸಲು ವಿಫಲಗೊಂಡಿರುವ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಲೋಕಸಭಾ ಕ್ಷೇತ್ರಗಳು ದೊರೆತು, ದೇಶದ ಹಿತದೃಷ್ಟಿಯಿಂದ ಜನಸಂಖ್ಯಾ ನಿಯಂತ್ರಣ ಸಾಧಿಸಿರುವ ದಕ್ಷಿಣದ ರಾಜ್ಯಗಳು ಕಡಿಮೆ ಕ್ಷೇತ್ರಗಳನ್ನು ಹೊಂದುವಂತಾಗಿ, ದಕ್ಷಿಣದ ಮೇಲೆ ಉತ್ತರ ಭಾರತದ ರಾಜ್ಯಗಳ ಪ್ರಾಬಲ್ಯ, ದಬ್ಬಾಳಿಕೆಗೆ ಅವಕಾಶವಾಗುವುದು ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ತೆಗೆದುಕೊಂಡಿರುವ ಮುಂತೊಡಗು (ಇನೀಶಿಯೇಟಿವ್) ಖಂಡಿತಾ ಮೆಚ್ಚುಗೆಗೆ ಅರ್ಹವಾಗಿದೆ” ಎಂದು ಹೇಳಿದ್ದಾರೆ.

“ಇನ್ನು ತೆರಿಗೆ ಹಂಚಿಕೆಯಲ್ಲಿ ಸಹ ಒಕ್ಕೂಟ ಸರ್ಕಾರ ಮತ್ತು ಹಣಕಾಸು ಆಯೋಗಗಳು ಅನುಸರಿಸಿರುವ ಮಾನದಂಡಗಳು ದಕ್ಷಿಣ ಭಾರತಕ್ಕೆ ದೊಡ್ಡ ಬೆಲೆಯನ್ನು ತೆರುವಂತೆ ಮಾಡಿವೆ. ಒಂದು ಕಡೆ ದಕ್ಷಿಣದ ರಾಜ್ಯಗಳಿಗೆ ಪಾಲುಹಂಚಿಕೆಯಲ್ಲಿ ಅನ್ಯಾಯವೆಸಗುತ್ತಲೇ ಮತ್ತೊಂದು ಕಡೆ ʼಪ್ರಧಾನಿಗಳು ಹೇಳುವ ʼಸಬ್ ಕಾ ಸಾಥ್ ಸಬಕಾ ವಿಶ್ವಾಸ್ʼ ಘೋಷಣೆಗೆ ಏನಾದರೂ ಅರ್ಥವಿದೆಯೇ? ಭಾಷೆಯ ಆಧಾರದಲ್ಲಿ ದಕ್ಷಿಣ ಭಾರತವನ್ನು ಶಾಶ್ವತ ಗುಲಾಮಗಿರಿಗೆ ತಳ್ಳುವ ಉತ್ತರ ಭಾರತದ ಹಿಂದಿ ದುರಭಿಮಾನಿಗಳು ಎಲ್ಲಾ ಪ್ರಯತ್ನಗಳನ್ನು ನಿರಂತರವಾಗಿ ಎದುರಿಸಿ, ಅವರನ್ನು ಬಗ್ಗಿಸಿ, ಅವರ ದುಂಡಾವರ್ತನೆಗೆ ತಡೆಹಾಕಿರುವ ತಮಿಳುನಾಡಿನ ದ್ರಾವಿಡ ಚಳವಳಿ ಇಡೀ ದಕ್ಷಿಣ ಭಾರತೀಯ ದ್ರಾವಿಡ ಭಾಷಿಕರ ಹೆಮ್ಮೆ. 90 ವರ್ಷಗಳ ಹಿಂದೆ ಅಂದು ರಾಮಸ್ವಾಮಿ ನಾಯ್ಕರ್ (ಪೆರಿಯಾರ್), ಅಣ್ಣಾದೊರೈ ಅವರಂತಹ ದ್ರಾವಿಡ ಚಳವಳಿಯ ದಿಗ್ಗಜರು ದನಿ ಎತ್ತಿ ಜನಚಳವಳಿಗಳ ಮೂಲಕ ನಿರಂತರವಾಗಿ ಹಿಂದಿ ಲಾಭಿಗಳನ್ನು ಮಣಿಸದೇ ಇರುತ್ತಿದ್ದರೆ ಇಂದು ನಮ್ಮ ತಾಯ್ನುಡಿಯಾದ ಕನ್ನಡವನ್ನೂ ಒಳಗೊಂಡಂತೆ ತಮಿಳು, ಮಲಯಾಳಂ, ತೆಲುಗುವ, ತುಳು, ಕೊಡವ, ಗೊಂಡಿ, ಒರಿಯಾ ಮುಂತಾದ ನೂರಾರು ಭಾರತೀಯ ಭಾಷೆಗಳು ಮತ್ತು ಈ ಭಾಷೆಗಳನ್ನು ಮಾತಾಡುವ ಜನರು ಅಪಾಯಕ್ಕೆ ಸಿಲುಕುತ್ತಿದ್ದರು” ಎಂದು ಹೇಳಿದ್ದಾರೆ.

“ತಮಿಳುನಾಡು, ಕರ್ನಾಟಕ ರಾಜ್ಯಗಳು ಆಗ ತೋರಿದ ಪ್ರತಿರೋಧದಿಂದಾಗಿ ಹಿಂದಿ ರಾಷ್ಟ್ರಭಾಷೆಯಾಗುವುದು ನಿಂತು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳೆರಡೂ ಅಧಿಕೃತ ಭಾಷೆಗಳಾಗಿ ಘೋಷಣೆಯಾಗಿದ್ದು ಇತಿಹಾಸ. ಇಂತಹ ಒಂದು ಸ್ವಾಭಿಮಾನದ ಚಳವಳಿಯಿಂದ ವಿಚಲಿತರಾಗಿದ್ದ ಹಿಂದಿ ಮತ್ತು ಸಂಸ್ಕೃತ ದುರಭಿಮಾನಿಗಳು ಒಂದಲ್ಲಾ ಒಂದು ವಿಧದಲ್ಲಿ ತಮ್ಮ ವಿಸ್ತರಣಾವಾದಿ, ಹಿಂದಿ ಸಾಮ್ರಾಜ್ಯಶಾಹಿ ನೀತಿಗಳನ್ನು ಜಾರಿ ಮಾಡಲು ಹವಣಿಸುತ್ತಲೇ ಇರುವಾಗ ಇದಕ್ಕೆ ಸೂಕ್ತ ಪ್ರತಿರೋಧ, ನಿರಂತರ ಎಚ್ಚರಗಳೂ ಅಗತ್ಯವಾಗಿದೆ. ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಕಳೆದ ೨೬ ವರ್ಷಗಳಿಂದ ಕನ್ನಡ ನಾಡಿನಲ್ಲಿ ಭಾಷಾಭಿಮಾನವನ್ನು ಬಡಿದೆಬ್ಬಿಸುವ ಕೆಲಸ ಮಾಡಿಕೊಂಡು ಬಂದಿದೆ. ಹಿಂದಿ ಹೇರಿಕೆಯ ವಿಚಾರದಲ್ಲಿ ಇದುವರೆಗೆ ನೂರಾರು ಹೋರಾಟಗಳನ್ನು, ಪ್ರತಿಭಟನೆಗಳನ್ನು ನಿರಂತವಾಗಿ ನಡೆಸಿಕೊಂಡು ಬಂದಿದೆ. ಮೆಟ್ರೋಗಳಲ್ಲಿ ಹಿಂದಿ ನಾಮಫಲಕಗಳ ವಿರುದ್ಧ ಬೃಹತ್ ಆಂದೋಲನ ನಡೆಸಿ, ಅವುಗಳನ್ನು ರದ್ದುಗೊಳಿಸುವಂತೆ ಮಾಡಿದ ಯಶಸ್ವಿ ಹೋರಾಟ ಇತ್ತೀಚಿನ ಉದಾಹರಣೆ. ಇದೇ ರೀತಿಯಲ್ಲಿ ಒಕ್ಕೂಟ ಸರ್ಕಾರ ನಡೆಸುವ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಹಿಂದಿ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಲೂ ಅವಕಾಶ ನೀಡಲು ಒತ್ತಾಯಿಸಿ ಅನೇಕ ಹೋರಾಟಗಳನ್ನು ನಡೆಸಿದ್ದು ಯಶಸ್ಸು ಸಿಕ್ಕಿದೆ. ಹೀಗಾಗಿ, ದ್ರಾವಿಡ ಭಾಷೆಗಳ ಉಳಿವು-ಅಳಿವಿನ ಈ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲರೂ ಒಂದುಗೂಡಿ ಹೋಗಬೇಕಾದ ಅನಿವಾರ್ಯತೆಯಿದೆ” ಎಂದು ಕರೆ ನೀಡಿದ್ದಾರೆ.

“ನಮ್ಮ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರದ ಮಾದರಿಯನ್ನು ಅನುಸರಿಸಿ ಒಕ್ಕೂಟ ಸರ್ಕಾರಕ್ಕೆ ಪ್ರಬಲವಾದ ಸಂದೇಶವನ್ನು ರವಾನಿಸಬೇಕಾಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವೂ ಸಹ ಈ ವಿಷಯದಲ್ಲಿ ಕನ್ನಡಿಗರ ಪರವಾಗಿ ನಿಂತಿದ್ದು ಒಕ್ಕೂಟ ಸರ್ಕಾರಕ್ಕೆ ಸವಾಲೊಡ್ಡುತ್ತಲೇ ಬಂದಿದ್ದಾರೆ. ಈ ಸಂದರ್ಭದಲ್ಲಿ ಎಂ ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರದ ಮಾದರಿಯಲ್ಲೇ ಮಾನ್ಯ ಸಿದ್ದರಾಮಯ್ಯನವರೂ ದೇವನಾಗರಿ ಲಿಪಿಯ ರೂಪಾಯಿ ಬದಲು ಕನ್ನಡ ಲಿಪಿಯ ರೂಪಾಯಿ ಚಿನ್ಹೆಯನ್ನು ಸಿದ್ಧಪಡಿಸಿ ಬಳಕೆಗೆ ತರಬೇಕು” ಎಂದು ಆಗ್ರಹಿಸಿದ್ದಾರೆ.

“ಹಿಂದಿಯಿಂದಲೇ ದೇಶದ ಅಭಿವೃದ್ಧಿ ಸಾಧ್ಯವಾಗುವುದಾಗಿದ್ದರೆ ಇಂದು ಉತ್ತರ ಭಾರತದ ಹಿಂದಿ ರಾಜ್ಯಗಳೇ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಮುನ್ನಡೆ ಸಾಧಿಸಬೇಕಿತ್ತು. ಆದರೆ ವಾಸ್ತವದಲ್ಲಿ ತದ್ವಿರುದ್ಧವಾಗಿದೆ. ಭಿನ್ನ ಭಿನ್ನ ಭಾಷೆಗಳನ್ನು ಹೊಂದಿರುವ ದಕ್ಷಿಣ ಭಾರತವೇ ಅಭಿವೃದ್ಧಿ ಸೂಚ್ಯಂಕದಲ್ಲಿ ಮುನ್ನಡೆ ಸಾಧಿಸಿಲ್ಲವೆ? ಇದರಿಂದ ಒಕ್ಕೂಟ ಸರ್ಕಾರ ಯಾವುದೇ ಪಾಠ ಕಲಿಯಲು ಆಸಕ್ತಿ ತೋರದಿರುವುದು ವಿಷಾದಕರ. ದೇಶದ ಏಕತೆ ಇರುವುದು ಏಕರೂಪತೆಯಲ್ಲಿ ಅಲ್ಲ, ಬದಲಾಗಿ ದೇಶದ ಭಾಷಾ ವೈವಿಧ್ಯತೆಯನ್ನು, ಸಂಸ್ಕೃತಿ, ಧರ್ಮಗಳ ವೈವಿಧ್ಯತೆಯನ್ನು, ಆಹಾರ ಪದ್ಧತಿಗಳ ವೈವಿಧ್ಯತೆಯನ್ನು ಸಂಭ್ರಮಿಸುವ ಮೂಲಕ ಮತ್ತು ಪೋಷಿಸುವ ಮೂಲಕ. ಈ ಮೂಲಕವೇ ವಿವಿಧತೆಯಲ್ಲಿ ಏಕತೆ ಹೊಂದಿ ಭಾರತವನ್ನು ಶಕ್ತಿಶಾಲಿ ಒಕ್ಕೂಟವನ್ನಾಗಿ ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಲು ಸಾದ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ನಮ್ಮ ಭಾಷೆ, ಸಂಸ್ಕೃತಿ, ರಾಜ್ಯಗಳ ಜೊತೆಗ ದೇಶದ ಹಿತಾಸಕ್ತಿಯನ್ನೂ ನಾವೆಲ್ಲರೂ ಸೇರಿ ಕಾಪಾಡಿಕೊಂಡು ಹೋಗೋಣ, ಇದಕ್ಕಾಗಿ ಬಿಗಿಮುಷ್ಠಿ ಮೇಲೆತ್ತಿ, ಹೆಗಲಿಗೆ ಹೆಗಲಾಗಿ ಸಾಗೋಣ” ಎಂದು ಹೇಳಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X