ಮುಂಗಾರು ಮಳೆಯಾಗದೆ ಕಂಗಾಲಾಗಿದ್ದ ರಾಜ್ಯದ ರೈತರ ಮೊಗದಲ್ಲಿ ಮಂಗಳವಾರ (ಇಂದು) ಮಂದಹಾಸ ಮೂಡಿದೆ. ರಾಜ್ಯಾದ್ಯಂತ ಬೆಳಗ್ಗೆ ಇಂದಲೇ ಮಳೆಯಾಗುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆಯಾಗಿದೆ. ಬಿಸಿಲಿನ ಬೇಗೆಯಲ್ಲಿ ಬಸವಳಿದಿದ್ದ ನಗರದ ನಿವಾಸಿಗಳಿಗೆ ಮಳೆಯು ತಂಪು ನೀಡಿದೆ.
ನಗರದ ನಾನಾ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ಸಂಚಾರ ದಟ್ಟಣೆಯೂ ನಿರ್ಮಾಣವಾಗಿದೆ. ಮೆಜೆಸ್ಟಿಕ್, ಕಾರ್ಪೋರೇಷನ್ ವೃತ್ತ,ಶಾಂತಿನಗರ, ವಿಲ್ಸನ್‌ಗಾರ್ಡನ್, ಹೆಬ್ಬಾಳ, ಮೇಕ್ರಿ ಸರ್ಕಲ್ ಸೇರಿದಂತೆ ಹಲವಡೆ ವಾಹಸ ಸವಾರರು ‘ಟ್ರಾಫಿಕ್’ನಲ್ಲಿ ಸಿಲುಕಿಕೊಂಡು ಪರದಾಡಿದ್ದಾರೆ.
ಔಟರ್ ರಿಂಗ್ ರೋಡ್, ಬಿಇಎಲ್ ವೃತ್ತ, ಕುವೆಂಪು ವೃತ್ತ, ಹೆಬ್ಬಾಳ ಬಳಿ ರಸ್ತೆಗಳು ಜಲಾವೃತವಾಗಿವೆ. ಲಿ ಮೆರಿಡಿಯನ್ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ಹಲವೆಡೆ ಬಿಬಿಎಂಪಿ ಮತ್ತು ಸಂಚಾರ ಪೊಲೀಸರು ರಸ್ತೆಯಿಂದ ಚರಂಡಿಗೆ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದು, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
“ರಸ್ತೆಗಳಲ್ಲಿ ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ದಯಮಾಡಿ ಸಹಕರಿಸಿ. ಇದು ನಿಮ್ಮ ಸುರಕ್ಷತೆಯ ವಿಷಯ!” ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ನಿವಾಸಿಗಳು ತಮ್ಮ ದ್ವಿಚಕ್ರ ವಾಹನಗಳನ್ನು ನಿಧಾನವಾಗಿ ಚಾಲನೆ ಮಾಡಿ ಅಥವಾ ಓಡಿಸಿ ಮತ್ತು ಕಡಿಮೆ ಗೋಚರತೆಯ ಹೆಡ್‌ಲೈಟ್‌ಗಳನ್ನು ಬಳಸಿ ಎಂದು ಸದಾಶಿವನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.