ದೈಹಿಕ ಸಂಪರ್ಕ ನಿರಾಕರಿಸುವುದು 1955ರ ಹಿಂದು ವಿವಾಹ ಕಾಯ್ದೆಯಡಿ ಅಪರಾಧವೇ ಹೊರತು ಐಪಿಸಿ ಸೆಕ್ಷನ್ 498ಎ ಅಡಿ ದೌರ್ಜನ್ಯವಲ್ಲ ಎಂದು ಕರ್ನಾಟಕ ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಪತಿ ಹಾಗೂ ಆತನ ಪೋಷಕರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಆಧ್ಯಾತ್ಮಿಕ ಸಾಧನೆಯತ್ತ ಮುಖಮಾಡಿದ್ದ ಪತಿ ವಿರುದ್ಧ ಪತ್ನಿಯು 2020ರಲ್ಲಿ ಐಪಿಸಿ 498 ಎ ಅಡಿ ಲೈಂಗಿಕತೆಗೆ ಸಹಕರಿಸುತ್ತಿಲ್ಲ ಹಾಗೂ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ನಿಸ್ಸಂದೇಹವಾಗಿ ಹಿಂದೂ ವಿವಾಹ ಕಾಯಿದೆಯ12(1) (ಎ) ಅಡಿಯಲ್ಲಿ ಲೈಂಗಿಕತೆಯನ್ನು ಪೂರೈಸದ ಕಾರಣ ಕ್ರೌರ್ಯಕ್ಕೆ ಕಾರಣವಾಗುತ್ತದೆ. ಆದರೆ ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಇದು ಕ್ರೌರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಆದೇಶ ಹೊರಡಿಸಿದೆ.
ಈ ಸುದ್ದಿ ಓದಿದ್ದೀರಾ? ಶೀಘ್ರದಲ್ಲೇ ಟ್ವಿಟರ್ನಲ್ಲಿ ಯೂಟ್ಯೂಬ್, ಇನ್ಸ್ಟಾದಂತೆ ಹಲವು ಸೇವೆ ಲಭ್ಯ
ಮಹಿಳೆಯೊಬ್ಬರು 2019 ರ ಡಿ.18 ರಂದು ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ವಿವಾಹವಾಗಿ 28 ದಿನ ಮಾತ್ರ ಜೊತೆಯಲ್ಲಿದ್ದರು. ಇದಾದ ನಂತರ ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಮುಖ ಮಾಡಿದ್ದಾರೆ. ಅಲ್ಲದೆ, ದೈಹಿಕ ಪ್ರೀತಿಗಿಂತ, ಆತ್ಮಗಳ ಪ್ರೀತಿ ಮುಖ್ಯವೆನ್ನುತ್ತಿದ್ದ ಪತಿ, ಆಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸುವಂತೆ ತನ್ನ ಪತ್ನಿಗೆ ಹೇಳುತ್ತಿದ್ದರು.
ಪತಿಯ ನಡೆಯಿಂದ ಮನನೊಂದ ಪತ್ನಿ ದೈಹಿಕ ಸಂಬಂಧ ನಡೆಸದ ಪತಿ ವಿರುದ್ಧ ಐಪಿಸಿ 498ಎ ಅಡಿ ದೂರು ದಾಖಲಿಸಿದ್ದರು. ಅಲ್ಲದೆ, ಕ್ರೌರ್ಯದ ಕಾರಣಕ್ಕೆ ವಿಚ್ಛೇದನ ಕೂಡ ಪಡೆದುಕೊಂಡಿದ್ದರು. 2022ರಲ್ಲಿ ವಿಚ್ಛೇದನ ಪಡೆದ ನಂತರ ವರದಕ್ಷಿಣೆ ಕಿರುಕುಳ ಹಾಗೂ ಲೈಂಗಿಕ ನಿರಾಕರಣೆಯ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಿದ್ದರು.
ಕ್ರಿಮಿನಲ್ ಪ್ರಕರಣದ ಬಗ್ಗೆ ತನ್ನ ತೀರ್ಪಿನಲ್ಲಿ ತಿಳಿಸಿರುವ ನ್ಯಾಯಾಧೀಶರು, ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಅನುಮತಿಸಲಾಗುವುದಿಲ್ಲ ಅಥವಾ ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗ ಮತ್ತು ನ್ಯಾಯದ ವೈಫಲ್ಯಕ್ಕೆ ಕಾರಣವಾಗುತ್ತದೆ” ಎಂದು ತಿಳಿಸಿದ್ದಾರೆ.