ಕೋಮುವಾದದ ಹೆಸರಿನಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಇದರ ವಿರುದ್ಧ ಮಹಿಳೆಯರು ಸಂಘಟಿತ ಹೋರಾಟ ನಡೆಸಬೇಕು ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ರಾಜ್ಯ ಉಪಾಧ್ಯಕ್ಷರೂ ಆಗಿರುವ ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷಿ ರಾಧಾ ಮೂಡಬಿದ್ರೆ ಅಭಿಪ್ರಾಯಪಟ್ಟರು.
ಮಂಗಳೂರಿನ ಮಿನಿ ವಿಧಾನಸೌಧದ ಎದುರು ಸಿಐಟಿಯು ಸಂಯೋಜಿತಗೊಂಡಿರುವ ʼದುಡಿಯುವ ಮಹಿಳೆಯರ ಸಮನ್ವಯ ಸಮಿತಿʼ ಆಶ್ರಯದಲ್ಲಿ ಜರುಗಿದ 117ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ದೇಶದ ಐಕ್ಯತೆಯನ್ನು ಒಡೆಯಲು ಸಂಚು ರೂಪಿಸುತ್ತಿರುವ ಕೋಮುವಾದಿ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಹಿಳೆಯರನ್ನು ಪ್ರಧಾನ ಅಸ್ತ್ರವನ್ನಾಗಿಸಿದೆ ಮಾತ್ರವಲ್ಲದೆ ಕೋಮುವಾದದ ಪಿಡುಗಿಗೆ ಮೊದಲ ಬಲಿ ಮಹಿಳೆಯೇ ಆಗಿದ್ದಾಳೆ. ಎಲ್ಲಾ ಕ್ಷೇತ್ರಗಳಲ್ಲೂ ಸದೃಢವಾಗಿ ಬೆಳೆಯುತ್ತಿರುವ ಮಹಿಳೆಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆ ಅಬಲೆ ಎನ್ನುವ ಮನಸ್ಥಿತಿ ದೂರಗಬೇಕು” ಎಂದರು.
ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ನಾಯಕಿ ಜಯಂತಿ ಬಿ ಶೆಟ್ಟಿಯವರು ಮಾತನಾಡಿ, “ಪ್ರತಿಯೊಂದು ಸಂದರ್ಭದಲ್ಲಿಯೂ ಮಹಿಳೆಯರನ್ನು ಅತ್ಯಂತ ತುಚ್ಛವಾಗಿ ಕಾಣುವ ಈ ಸಮಾಜದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚೆಚ್ಚು ಚರ್ಚಿಸುವ ಮೂಲಕ ಮಹಿಳಾ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಮಾಜದ ಪ್ರತಿಯೊಬ್ಬರೂ ಮಾಡಬೇಕಾಗಿದೆ” ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಹಿರಿಯ ನಾಯಕಿ ಪದ್ಮಾವತಿ ಶೆಟ್ಟಿಯವರು ಮಾತನಾಡುತ್ತಾ, “ಜಾಗತೀಕರಣದ ಕಪಿಮುಷ್ಠಿಯಲ್ಲಿ ನಲುಗುತ್ತಿರುವ ಭಾರತದಲ್ಲಿ ಮಹಿಳೆಯರ ದುಡಿಮೆಯನ್ನು ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಕಡಿಮೆ ಕೂಲಿಗೆ ಗರಿಷ್ಠ ಅವಧಿಯಲ್ಲಿ ಮಹಿಳೆಯರನ್ನು ದುಡಿಸುವ ಮೂಲಕ ಮತ್ತೆ ಮಹಿಳೆಯರನ್ನು ಗುಲಾಮರನ್ನಾಗಿಸುವ ವ್ಯವಸ್ಥೆಯನ್ನು ಸ್ಪಷ್ಟಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಮಹಿಳೆಯರ ಭಾಗವಹಿಸುವಿಕೆಯಿಲ್ಲದೆ ಸಮಾಜದ ಅಭಿವೃದ್ಧಿ ಯಾವತ್ತೂ ಸಾಧ್ಯವಿಲ್ಲ. ಪ್ರತಿಯೊಂದು ದೇಶದ ಆರ್ಥಿಕತೆಯಲ್ಲಿ ಪ್ರಧಾನ ಪಾತ್ರ ವಹಿಸುವ ಮಹಿಳಾ ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಆಳುವ ವರ್ಗಗಳು ವಿಶೇಷ ಗಮನ ನೀಡಬೇಕಾಗಿದೆ” ಎಂದು ಹೇಳಿದರು.
ಕಾರ್ಯಕ್ರಮವನ್ನುದ್ದೇಶಿಸಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಮುಖಂಡರಾದ ಈಶ್ವರಿ ಬೆಳ್ತಂಗಡಿ, ನಳಿನಾಕ್ಷಿ ಶೆಟ್ಟಿ, ಭಾರತಿ ಬೋಳಾರ, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಮುಖಂಡರಾದ ಕಿರಣಪ್ರಭಾ, ಅಸುಂತ ಡಿಸೋಜರವರು ಮಾತನಾಡಿದರು. ಮಹಿಳಾ ವಿಮೋಚನೆ ಹಾಗೂ ಮಹಿಳೆಯರ ಸಂಕಷ್ಟಗಳ ಬಗ್ಗೆ ಹಾಡುಗಳನ್ನು ಮಹಿಳಾ ಮುಖಂಡರಾದ ಗಿರಿಜಾ ಮೂಡಬಿದ್ರೆ, ಜಯಶ್ರೀ ಬೆಳ್ತಂಗಡಿ, ವಸಂತಿ ಕುಪ್ಪೆಪದವುರವರು ಹಾಡಿದರು.
ಇದನ್ನೂ ಓದಿ: ಮಂಗಳೂರು | ಜಾದೂ ಕಲಾವಿದ ಕುದ್ರೋಳಿ ಗಣೇಶ್‌ಗೆ ಆಂಧ್ರಪ್ರದೇಶದ ಪ್ರತಿಷ್ಠಿತ ಪ್ರಶಸ್ತಿ
ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ನಾಯಕ ಜೆ ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ರೈತ ನಾಯಕ ಸದಾಶಿವದಾಸ್, ರಿಜ್ವಾನ್ ಹರೇಕಳ, ಮಹಿಳಾ ಸಂಘಟನೆಗಳ ಮುಖಂಡರಾದ ಪ್ರಮೀಳಾ ದೇವಾಡಿಗ, ಫ್ಲೇವಿ ಕ್ರಾಸ್ತಾ ಅತ್ತಾವರ, ಗ್ರೆಟ್ಟಾ ಟೀಚರ್, ವಿಲಾಸಿನಿ ತೊಕ್ಕೋಟ್ಟು, ಪ್ರಮೋದಿನಿ, ಜಯಲಕ್ಷ್ಮಿ, ರೋಹಿಣಿ, ಗೀತಾ, ಭವಾನಿ ವಾಮಂಜೂರು, ಲಕ್ಷ್ಮಿ ಮೂಡಬಿದ್ರೆ, ಲೋಲಾಕ್ಷಿ ಬಂಟ್ವಾಳ, ಮೀಳಾ ಶಕ್ತಿನಗರ ಭಾಗವಹಿಸಿದ್ದರು.