ಗೈರು ಹಾಜರಿ, ಕರ್ತವ್ಯ ಲೋಪ ಆರೋಪದ ಮೇಲೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯತಿ ಪಿಡಿಒ ಕೃಷ್ಣಪ್ಪ ಅವರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ರತ್ನಂ ಪಾಂಡೆ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಪಿಡಿಒ ಕೃಷ್ಣಪ್ಪ ಅವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರಲಿಲ್ಲ. ಗೈರು ಹಾಜರಿಗಳೇ ಹೆಚ್ಚಾಗಿದ್ದವು. ಅಲ್ಲದೆ, ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಿಸಿರುವ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ಪಾವತಿಸದೆ, ವಿಳಂಬ ಮಾಡಿದ್ದರು. ಹಲವಾರು ಯೋಜನೆಗಳನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಾತ್ರವಲ್ಲದೆ, ಚರಂಡಿ ನೀರು, ಮಲ-ಮೂತ್ರಗಳ ತ್ಯಾಜ್ಯ ಸೇರಿದಂತೆ ನಾನಾ ರೀತಿಯ ತ್ಯಾಜ್ಯವು ನೇರವಾಗಿ ತುಂಗಭದ್ರಾ ನದಿಗೆ ಸೇರುತ್ತಿದೆ. ತ್ಯಾಜ್ಯವನ್ನು ನದಿಗೆ ಸೇರದಂತೆ ನಿರ್ವಹಿಸಿ, ನೈರ್ಮಲ್ಯ ಕಾಪಾಡುವಲ್ಲಿಯೂ ನಿರ್ಲಕ್ಷ್ಯ ಧೋರಣೆ ತಳೆದಿದ್ದರು. ಪ್ರವಾಸೋದ್ಯಮ ಇಲಾಖೆಗೆ ಕೊಠಡಿ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದ ಆದೇಶವನ್ನೂ ಅವರು ಪಾಲಿಸಿಲ್ಲ. ಇಂತಹ ಹಲವಾರು ರೀತಿಯಲ್ಲಿ ಕರ್ತವ್ಯಲೋಪ ಎಸಗಿದ್ದರು ಎಂದು ಆರೋಪಿಸಲಾಗಿದೆ.
ಎಲ್ಲ ಆರೋಪಗಳನ್ನು ಪರಿಗಣಿಸಿರುವ ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಪಾಂಡೆ ಅವರು ಪಿಡಿಒ ಕೃಷ್ಣಪ್ಪ ಅವರಿಗೆ ಕರ್ತವ್ಯಲೋಪಕ್ಕೆ ಕಾರಣ ಕೇಳಿ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು. ಆದರೆ, ಪಿಡಿಒ ಕೃಷ್ಣಪ್ಪ ಸರಿಯಾದ ಕಾರಣಗಳನ್ನು ನೀಡಿರಲಿಲ್ಲ. ಹೀಗಾಗಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.