ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಶಿವಸೇನೆ ಮುಖ್ಯಸ್ಥ (ಶಿಂದೆ ಬಣ) ಏಕನಾಥ್ ಶಿಂದೆ ಅವರು ಈ ಹಿಂದೆ ಕಾಂಗ್ರೆಸ್ ಸೇರಲು ಬಯಸಿದ್ದರು ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಅವರು ಹೇಳಿದ್ದಾರೆ.
ಶಿವಸೇನೆ ಇಬ್ಭಾಗವಾಗಿ ಎರಡು ಪಕ್ಷಗಳಾಗಿದೆ. ಸದ್ಯ ಶಿಂದೆ ಬಣ ಆಡಳಿತಾರೂಢ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಬಣವು ವಿಪಕ್ಷವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಇಂಡಿಯಾ ಒಕ್ಕೂಟದ ಭಾಗವಾಗಿತ್ತು.
ಇದನ್ನು ಓದಿದ್ದೀರಾ? ಶಿಂದೆಯನ್ನೇ ಸಿಎಂ ಮಾಡಲು ಉದ್ಧವ್ ಬಯಸಿದ್ದರು, ಬಿಜೆಪಿ, ಎಂವಿಎ ಅಡ್ಡಬಂದಿತು: ಸಂಜಯ್ ರಾವತ್
ಇನ್ನು ಏಕನಾಥ್ ಶಿಂದೆ ಯಾವಾಗ ಅಥವಾ ಯಾವ ವರ್ಷ ಕಾಂಗ್ರೆಸ್ ಸೇರಬೇಕು ಎಂದುಕೊಂಡಿದ್ದರು ಎಂಬುದನ್ನು ಸಂಜಯ್ ರಾವತ್ ತಿಳಿಸಿಲ್ಲ. ಆದರೆ “ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಈಗ ಅಹ್ಮದ್ ಪಟೇಲ್ ಇಲ್ಲ. ಆದ್ದರಿಂದ ಈ ವಿಷಯದ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲು ಬಯಸುವುದಿಲ್ಲ” ಎಂದು ತಿಳಿಸಿದರು.
ಪಟೇಲ್ 2020ರ ನವೆಂಬರ್ 25ರಂದು ನಿಧನರಾಗಿದ್ದಾರೆ. “ಈ ವಿಚಾರವನ್ನು ನೀವು ಬೇಕಾದರೆ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಬಳಿ ಕೇಳಬಹುದು” ಎಂದು ಸಂಜಯ್ ರಾವತ್ ಹೇಳಿದ್ದಾರೆ. ಚವಾಣ್ ಅವರನ್ನು ಪಿಟಿಐ ಸಂಪರ್ಕಿಸಿದ್ದು, ಈ ಬಗ್ಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
