ಮಲೆನಾಡ ಭಾಗದ ಪ್ರಮುಖ ವಾಣಿಜ್ಯ ಬೆಳೆ ಶುಂಠಿ. ಆದರೆ ಈ ಬಾರಿ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಕಳೆದ ಬಾರಿ ಉತ್ತಮ ಬೆಲೆಗೆ ಮಾರಾಟವಾಗಿದ್ದ ಶುಂಠಿ ಈ ವರ್ಷ ಭಾರೀ ಕುಸಿತ ಕಂಡಿದ್ದು, ಬೆಳೆಗಾರರ ನಿದ್ದೆ ಕೆಡಿಸಿದೆ.
ಈ ಭಾಗದ ಶುಂಠಿ ಹೆಚ್ಚಾಗಿ ರಾಜಸ್ತಾನ, ದೆಹಲಿ, ಮುಂಬೈನಂತಹ ರಾಜ್ಯಗಳಿಗೆ ಹೆಚ್ಚಾಗಿ ರಫ್ತಾಗುತ್ತದೆ. ಅಲ್ಲಿ ಇತ್ತೀಚೆಗೆ ಒಣ ಶುಂಠಿ ಲಾಬಿಗಳು ಹೆಚ್ಚಾಗಿವೆ. ಲಾಬಿಯಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲವಾ ಅಥವಾ ಅಲ್ಲಿ ಸಹಜವಾಗಿಯೇ ಬೆಲೆ ಕುಸಿತ ಆಗಿದೆಯಾ ಎಂದು ಅವಲೋಕಿಸುವ ಅವಶ್ಯಕತೆ ಇದೆ. ಶುಂಠಿ ಮಲೆನಾಡು ಭಾಗ ಬಿಟ್ಟರೆ ಹೆಚ್ಚಾಗಿ ಹಾಸನ, ಸಕಲೇಶಪುರ ಮತ್ತು ಮೈಸೂರು ಭಾಗದಲ್ಲಿ ಬೆಳೆಯಲಾಗುತ್ತದೆ. ದರ ಕುಸಿತಕ್ಕೆ ಇದೂ ಒಂದು ಕಾರಣವಾಗಿರಬಹುದು ಎನ್ನಲಾಗುತ್ತಿದೆ.
ಕಳೆದ ವರ್ಷ ಕ್ವಿಂಟಾಲ್ಗೆ ₹10 ರಿಂದ ₹11 ಸಾವಿರ ದರ ಇದ್ದ ಶುಂಠಿಗೆ ಈ ವರ್ಷ ₹3,600ರಿಂದ ₹3,800 ಇದೆ. ಶುಂಠಿ ಬೆಳೆ ಬೆಳೆಯಲು ಒಂದು ಎಕರೆಗೆ ಸುಮಾರು ₹4.50 ಲಕ್ಷ ಖರ್ಚು ತಗುಲುತ್ತದೆ. ಹಾಲಿ ದರದಿಂದ ನಮಗೆ ಯಾವುದೇ ಲಾಭವಾಗುತ್ತಿಲ್ಲ. ಕನಿಷ್ಟ ₹5000 ದಿಂದ ₹6000 ಬೆಲೆ ಸಿಕ್ಕರೆ ಅನುಕೂಲವಾಗಲಿದೆ. ಒಂದು ಎಕರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುಂಠಿ ಕಿತ್ತು ಮಾರಾಟ ಮಾಡಿದರೆ ಹಾಕಿದ ಬಂಡವಾಳವೂ ವಾಪಸ್ ಬಾರದ ಪರಿಸ್ಥಿತಿ ಇದೆ. ಹಾಗಾಗಿ, ತಮಗೆ ಬೆಂಬಲ ಬೆಲೆ ನೀಡಿ ಶುಂಠಿ ಖರೀದಿಸಬೇಕೆಂದು ಕಂಗಾಲಾಗಿರುವ ರೈತರು ಮನವಿ ಮಾಡುತ್ತಿದ್ದಾರೆ.

ರೈತರ ಅನುಕೂಲಕ್ಕಾಗಿ ತೀರ್ಥಹಳ್ಳಿಯಲ್ಲಿ ಒಂದು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆದರೆ ನೆಪ ಮಾತ್ರಕ್ಕೆ ಎನ್ನುತ್ತಿರುವ ರೈತರು, “ಇಲ್ಲಿರುವ ಸಂಶೋಧನಾ ಅಧಿಕಾರಿಗಳಿಗೇ ಮಾಹಿತಿ ಕೊರತೆಯಿರುವುದು ಬೇಸರದ ಸಂಗತಿ. ಅವರಿಗೇ ಮಾಹಿತಿ ತಿಳಿದಿಲ್ಲವೆಂದರೆ ನಮ್ಮಂತ ರೈತರಿಗೆ ಇನ್ನೇನು ಮಾಹಿತಿ ಕೊಡಲು ಸಾಧ್ಯ. ಕಾಟಾಚಾರಕ್ಕೆ ಸಂಶೋಧನಾ ಕೇಂದ್ರವಿದೆ” ಎಂದು ಈ ದಿನ ಡಾಟ್ ಕಾಮ್ಗೆ ಹೊಸನಗರದ ಪತ್ರಕರ್ತ ಹಾಗೂ ರೈತ ಬೆಳ್ಳಿ ಗಣೇಶ್ ತಿಳಿಸಿದರು.
ರೈತ ರುದ್ರೇಶಪ್ಪ ಈ ದಿನ ಡಾಟ್ ಕಾಮ್ನೊಂದಿಗೆ ಮಾತನಾಡಿ, “ಕಳೆದ ಬಾರಿ ನಾವು ಶುಂಠಿ ಬೆಳೆದಾಗ ₹11,000 ದೊರೆತಿತ್ತು.ಈ ಬಾರಿ ಬಾರಿ ₹3,000 ರಿಂದ ₹3,500 ಇದೆ. ಜತೆಗೆ ಈ ಬಾರಿ ಮಲೆನಾಡಿನಲ್ಲಿ ಉತ್ತಮ ಮಳೆಯಾಗಿದ್ದರೂ ಕೂಡಾ ಸರಿಯಾದ ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ₹5,000 ರಿಂದ ₹6,000 ಬೆಲೆಗೆ ಮಾರಾಟವಾದರೆ ಮಾತ್ರ ಸಹಾಯವಾಗಲಿದೆ. ಈ ಬಾರಿ ಒಳ್ಳೆಯ ಇಳುವರಿ ಇದ್ದರೂ ಉತ್ತಮ ಬೆಲೆ ಸಿಗುತ್ತಿಲ್ಲ. ಎಲ್ಲ ರೈತರೂ ತುಂಬಾ ಸಂಕಷ್ಟದಲ್ಲಿದ್ದೇವೆ” ಎಂದು ಅವಲತ್ತುಕೊಂಡರು.
“ಕಳೆದ ಬಾರಿ ಸಾಕಷ್ಟು ಸಮಸ್ಯೆಗಳಿದ್ದರೂ ಒಳ್ಳೆಯ ಬೆಲೆಗೆ ಶುಂಠಿ ಮಾರಾಟವಾಗಿತ್ತು. ಈ ಬಾರಿ ಸಮಸ್ಯೆಗಳ ಜತೆಗೆ ತೀರಾ ಕಡಿಮೆ ದರಕ್ಕೆ ಮಾರಾಟವಾಗುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ರೈತರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಹಾಯದ ನೆರವಿಗೆ ಧಾವಿಸಬೇಕು. ಹಾಗೆಯೇ ಎಲ್ಲ ರೈತರ ಬೆಳೆಗೆ ನ್ಯಾಯ ಸಿಗುವಂತೆ ಮಾಡಬೇಕು” ಎಂದು ತಿಳಿಸಿದರು.

ಮಲೆನಾಡ ರೈತ ಹೋರಾಟ ಸಮಿತಿ ರಾಜ್ಯ ಸಂಚಾಲಕ ತಿ ನಾ ಶ್ರೀನಿವಾಸ್ ಮಾತನಾಡಿ, “ಕೇಂದ್ರ ಬಿಜೆಪಿ ಸರ್ಕಾರ ರೈತರಿಗೆ ಲಾಭದಾಯಕ ಬೆಲೆ ಕೊಡುತ್ತೇವೆ ಅಂದಿತ್ತು. ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆಂದು ಭರವಸೆ ನೀಡಿತ್ತು. ಮಲೆನಾಡಿನಲ್ಲಿ ಶುಂಠಿ ಹಾಗೂ ಭತ್ತ ಬೆಳೆಯ ಬೆಲೆ ಕಡಿಮಿಯಾಗಿದೆ. ಆದರೂ ರೈತರ ನೆರವಿಗೆ ಕೇಂದ್ರ ಸರ್ಕಾರ ಬಂದಿಲ್ಲ. ಜತೆಗೆ ಉತ್ತರ ಭಾರತದಲ್ಲಿ ನಮ್ಮ ರೈತರು ಸ್ವಾಮಿನಾಥಾನ್ ವರದಿ ಜಾರಿಗೆ ಅಗ್ರಹಿಸಿ ಚಳವಳಿ ಮಾಡುತ್ತಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು” ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿ ಸತೀಶ್ ಎಚ್ ವೈ ಮಾತನಾಡಿ, “ತೀರ್ಥಹಳ್ಳಿ ಸಾಗರ ಭಾಗದಲ್ಲಿ ಅತಿ ಹೆಚ್ಚು ಅಡಕೆ ಬೆಳೆಯಲಾಗುತ್ತದೆ. ಹಾಗಾಗಿ ಶುಂಠಿ ಒಂದು ಬೆಂಬಲ ಬೆಳೆಯಾಗಿದೆ. ತೋಟಗಾರಿಕೆ ಇಲಾಖೆಯಿಂದ ಇದರ ಕುರಿತು ಸಮಗ್ರ ಮಾಹಿತಿ ಪಡೆದು ತಿಳಿಸುತ್ತೇನೆ. ಹೋಬಳಿ ಮಟ್ಟದಲ್ಲಿ ಶೀತಲ ಘಟಕ ಸ್ಥಾಪನೆಗೆ ರೈತರು ಆಗ್ರಹ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುಮತಿ ಪಡೆದು ಈ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಶಿವಮೊಗ್ಗ: 385.05 ಹೆಕ್ಟೇರ್, ರ್ಭದ್ರಾವತಿ: 30.84 ಹೆಕ್ಟೇರ್, ಸಾಗರ: 397.03 ಹೆಕ್ಟೇರ್, ಶಿಕಾರಿಪುರ: 957 ಹೆಕ್ಟೇರ್, ಹೊಸನಗರ: 349.74 ಹೆಕ್ಟೇರ್, ತೀರ್ಥಹಳ್ಳಿ: 27.01 ಹೆಕ್ಟೇರ್, ಸಾಗರ: 758.08 ಹೆಕ್ಟೇರ್.. ಒಟ್ಟು 2,895.97 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದೆ.
ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಬೆಂಬಲ ಬೆಲೆ ಘೋಷಿಸಿ ಖರೀದಿ ಮಾಡಬೇಕು. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದ ಶುಂಠಿ ಉತ್ತಮ ಬೆಲೆಯಿಲ್ಲದೆ ರೈತರು ಬೀದಿಪಾಲಾಗುವುದನ್ನು ತಡೆಯಬೇಕು.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.
ಪ್ರಸ್ತುತ ಕಂಗಾಲಾಗಿ ಶುಂಠಿ ಮಾರಾಟ ಮಾಡಿ ಸಾಲ ಹೊತ್ತುಕೊಂಡಿದ್ದೇವೆ sir