ಅದೊಂದು ಸರ್ಕಾರಿ ಶಾಲೆ. ಹಾಗೆ ಸುಮ್ಮನೆ ಆ ಶಾಲೆಯಲ್ಲಿ ಸುತ್ತಾಡುತ್ತಿದ್ದಾಗ ಗೋಡೆಯ ಮೇಲಿದ್ದ ಗಡಿಯಾರವೊಂದು ಥಟ್ಟನೇ ಗಮನ ಸೆಳೆಯಿತು. ಹತ್ತಿರ ಹೋಗಿ ನೋಡಿದರೆ ಆಶ್ಚರ್ಯ. ಅದು ಸಾಮಾನ್ಯ ಗಡಿಯಾರ ಅಲ್ಲ. ಗಣಿತ ಗಡಿಯಾರ! ಸಮಯ ತಿಳಿದುಕೊಳ್ಳಬೇಕೆಂದರೆ ನೀವು ಮೆದುಳಿಗೆ ಕೆಲಸ ಕೊಡಲೇಬೇಕು. ಗಡಿಯಾರದ ಮುಳ್ಳುಗಳ ಮೇಲಿರುವ ಗಣಿತ ಸಮೀಕರಣ ಬಿಡಿಸಿದಾಗ ಮಾತ್ರ ಸಮಯದ ‘ಲೆಕ್ಕ’ ಪಕ್ಕಾ!
ಇಂತದ್ದೊಂದು ವಿಶಿಷ್ಟ ಗಡಿಯಾರ ಕಂಡು ಬಂದಿದ್ದು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಪ್ರೌಢಶಾಲೆಯಲ್ಲಿ. ಸಾಮಾನ್ಯವಾಗಿ ಗಣಿತ ವಿಷಯವನ್ನು ಕಬ್ಬಿಣದ ಕಡಲೆ ಎನ್ನಲಾಗುತ್ತದೆ. ಆದರೆ ಈ ಶಾಲೆ ಮಕ್ಕಳಿಗೆ ಗಣಿತ ಅಂದರೆ ಬಲು ಇಷ್ಟದ ವಿಷಯ. ಇದಕ್ಕೆ ಕಾರಣ, ಅಲ್ಲಿರುವ ಗಣಿತ ಪ್ರಯೋಗಾಲಯ.
ಕಳೆದ 15 ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ರಶ್ಮಿ ಎಲ್ ಈ ‘ಗಣಿತ ಲೋಕ’ ರೂಪಿಸಿದವರು. ಆ ಮೂಲಕ ಮಕ್ಕಳು ಗಣಿತವನ್ನೂ ಪ್ರೀತಿಯಿಂದ ಕಲಿಯುವ ಅಗಣಿತ ಸಾಧ್ಯತೆಗಳನ್ನು ಅವರು ತೆರೆದಿಟ್ಟಿದ್ದಾರೆ. ಬಣ್ಣ ಬಣ್ಣದ ಕಾಗದಗಳನ್ನು ಬಳಸಿ ತಯಾರಿಸಿರುವ ಇಲ್ಲಿನ ಗಣಿತ ಮಾದರಿಗಳು ಕಣ್ಮನ ಸೆಳೆಯುತ್ತವೆ. ಬಹುತೇಕ ಮಾದರಿಗಳನ್ನು ವಿದ್ಯಾರ್ಥಿಗಳೇ ತಯಾರಿಸಿರುವುದು ವಿಶೇಷ.

ಗಣಿತದ ಪ್ರಾಥಮಿಕ ಸಂಗತಿಗಳಾದ ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ, ಭಿನ್ನರಾಶಿ, ವರ್ಗಮೂಲ, ಮಗ್ಗಿ, ಪೈ, ಸಂಖ್ಯೆಗಳು, ವಿವಿಧ ಬಗೆಯ ತ್ರಿಭುಜಗಳು, ಷಟ್ಕೋನ, ಅಷ್ಟ ಭುಜಾಕೃತಿ, ಆಯತ, ಚೌಕ ಇತ್ಯಾದಿ ರೇಖಾಗಣಿತದ ಮಾದರಿಗಳು ಇಲ್ಲಿ ಮೈದಳೆದಿವೆ. ಗಣಿತವನ್ನು ಇಷ್ಟು ಸುಲಭ, ಆಕರ್ಷಕ ಹಾಗೂ ಪ್ರಾಯೋಗಿಕವಾಗಿ ಕಲಿಸಬಹುದು ಮತ್ತು ಕಲಿಯಬಹುದು ಎಂಬುದಕ್ಕೆ ಈ ಗಣಿತ ಪ್ರಯೋಗಾಲಯ ಮಾದರಿ.

‘ಗಣಿತ ಕಲಿಯುವಾಗ ವಿದ್ಯಾರ್ಥಿಗಳು ತುಂಬಾ ತೊಂದರೆ ಎದುರಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಷಯವನ್ನು ಸುಲಭವಾಗಿ ಹೇಳಿಕೊಡಬೇಕು ಎಂದು ಹಲವು ವರ್ಷಗಳಿಂದ ಯೋಚಿಸುತ್ತಿದ್ದೆ. 2024ರ ಡಿಸೆಂಬರ್ 22ರಂದು ರಾಷ್ಟೀಯ ಗಣಿತ ದಿನದಂದು ಗಣಿತ ಪ್ರಯೋಗಾಲಯ ಆರಂಭಿಸಿದೆವು. ಈಗ ಮಕ್ಕಳು ಖುಷಿಯಿಂದ ಕಲಿಯುತ್ತಿದ್ದಾರೆ ಎಂದು ಶಿಕ್ಷಕಿ ರಶ್ಮಿ ಈದಿನ.ಕಾಂಗೆ ತಿಳಿಸಿದರು.

‘ಈ ಮೊದಲು ಶಿಕ್ಷಕರು ಬೋರ್ಡ್ ಮೇಲೆ ಹೇಳಿಕೊಡುವಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಆದರೆ ಗಣಿತ ಪ್ರಯೋಗಾಲಯ ಆರಂಭವಾದ ಮೇಲೆ ವಿಷಯವನ್ನು ಸುಲಭವಾಗಿ ತಿಳಿಯಲು ಸಹಾಯಕವಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವ ಆತ್ಮವಿಶ್ವಾಸ ಮೂಡಿದೆ’ ಎಂದು 10ನೇ ತರಗತಿ ವಿದ್ಯಾರ್ಥಿನಿ ನಿತ್ಯಲಕ್ಷ್ಮಿ ತಿಳಿಸಿದರು.
ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ
ಸುಸಜ್ಜಿತ ಕಟ್ಟಡ, ಪ್ರಶಾಂತ ವಾತಾವರಣ, ಶುದ್ಧ ಕುಡಿಯುವ ನೀರು, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಬೆಂಚ್‌ಗಳು, ಗಣಿತ ಹಾಗೂ ವಿಜ್ಞಾನ ಪ್ರಯೋಗಾಲಯ, ಕೈದೋಟ, ಆಟದ ಮೈದಾನ, ಗ್ರಂಥಾಲಯ, ಕಲಿಕಾ ಉಪಕರಣ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಹೊಂದಿರುವ ಈ ಪ್ರೌಢಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ ಮಕ್ಕಳಿಗೆ ಕರಾಟೆ, ಯೋಗ, ತ್ಯಾಜ್ಯ ನಿರ್ವಹಣೆ, ನೀರಿನ ಮಿತಬಳಕೆ ಮತ್ತು ಸಂರಕ್ಷಣೆ, ಕೈತೋಟ ನಿರ್ವಹಣೆಯ ಮಹತ್ವ ಸೇರಿದಂತೆ ಉತ್ತಮ ಜೀವನದ ಕೌಶಲ್ಯಗಳ ಬಗ್ಗೆಯೂ ಬೋಧನೆ ಮಾಡಲಾಗುತ್ತಿದೆ.

8ರಿಂದ 10ನೇ ತರಗತಿಯಲ್ಲಿ ಒಟ್ಟು 113 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ ಅಲೆಮಾರಿ ಸಮುದಾಯಗಳ ಮಕ್ಕಳು ಹಾಗೂ ದಿನಗೂಲಿ ಕಾರ್ಮಿಕರ ಮಕ್ಕಳೇ ಹೆಚ್ಚು. ಶಾಲೆಯ ಹತ್ತಿರದಲ್ಲೇ ಸುಮಾರು 40 ಹಂದಿಜೋಗಿ ಸಮುದಾಯದ ಕುಟುಂಬಗಳು ಜೋಪಡಿಗಳಲ್ಲಿ ವಾಸಿಸುತ್ತಿದ್ದು, ಅಲ್ಲಿನ ಮಕ್ಕಳಿಗೆ ಈ ಶಾಲೆಯೇ ಆಸರೆಯಾಗಿದೆ.

‘ನಮ್ಮ ಶಾಲೆಯಲ್ಲಿ ನುರಿತ ಶಿಕ್ಷರಿದ್ದಾರೆ. ಆದರೆ ವಿಜ್ಞಾನ, ದೈಹಿಕ ಶಿಕ್ಷಣ ವಿಷಯಗಳಿಗೆ ಕಾಯಂ ಶಿಕ್ಷಕರಿಲ್ಲ. ಈಗಾಗಲೇ ಶಿಕ್ಷಣ ಇಲಾಖೆಯಿಂದ 12 ಕಂಪ್ಯೂಟರ್ ಮಂಜೂರಾಗಿದ್ದು, ಇನ್ನೂ ಬಂದಿಲ್ಲ. ಆದಷ್ಟು ಬೇಗ ಒದಗಿಸಿದರೆ ಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಆರಂಭಿಸಲು ಯೋಜಿಸಿದ್ದೇವೆ. ಇನ್ನಷ್ಟು ಅಗತ್ಯ ಸೌಕರ್ಯ ಕಲ್ಪಿಸಿದರೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ’ ಎಂದು ಮುಖ್ಯಶಿಕ್ಷಕ ತಿಪ್ಪೇಸ್ವಾಮಿ ತಿಳಿಸಿದರು.
ಸರ್ಕಾರಿ ಶಾಲೆ ಉಳಿದರೆ, ಬಡವರ ಮಕ್ಕಳು ಬೆಳೆದಂತೆ ಎನ್ನುವ ಮಾತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಶಾಲೆಯತ್ತ ಗಮನಹರಿಸಿ ಸೌಲಭ್ಯ ಕಲ್ಪಿಸಲು ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.