ಉತ್ತರ ಕರ್ನಾಟಕದ ಬಯಲು ಸೀಮೆ ಹಳ್ಳಿ ಜನರ ಬದ್ಕ ಹಂಗೆ, ಒಂದಷ್ಟು ತಿಂಗ್ಳು ಹಗಲಿನ್ಯಾಗ ಬದ್ಕ (ದುಡಿಮೆ) ಕಳಿದ್ರ; ಇನ್ನೊಂದಷ್ಟು ತಿಂಗ್ಳು ರಾತ್ರಿಯಾಗ ಬದ್ಕ ಕಳಿತಾರ. ಅಂದ್ರ ಮುಂಗಾರಿ ಮಳಿ ಪಿಕುಗಳನ್ನ (ಉಳ್ಳಾಗಡ್ಡಿ, ಮೆಣಸಿನಕಾಯಿ, ಗೋವಿನ ಜೋಳ, ಶೆಂಗಾ ಇತ್ಯಾದಿ) ದಗದ ಹಗಲಿನ್ಯಾಗ ಮಾಡಿದ್ರ: ಹಿಂಗಾರಿ ಮಳಿ ಪಿಕುಗಳನ್ನ (ಕಡ್ಲಿ, ಗೋದಿ, ಜೋಳ ಹವಿಜ ಇತ್ಯಾದಿ) ರಾತ್ರಿಯಾಗ ಕೀಳಬೇಕಾಗುತ್ತ. ಯಾಕಂದ್ರ ಬಿಸ್ಲಿಗೆ ತೆನೆಗೂಳು ಉದುರಿ ನೆಲಕ್ಕ ಬೀಳುದ್ರಿಂದ ರಾತ್ರಿ ಹೊತ್ತಿನ್ಯಾಗ ಕೀಳ್ತಾರ. ಹಿಂಗ ನಮ್ ರೋಣ ಊರಾಗ್ ದುಡಿಮಿದಿಂದಾಗ ಹೆಣ್ಣುಮಕ್ಕಳು ಗನ್ಮಕ್ಕಳು ಎಲ್ರು ಖುಷಿಯಿಂದ ಬದ್ಕದ ನೋಡೂದ ಚಂದ.
ಹಿಂಗಾ ಅಮ್ಮನ ಊರಿಗೆ ಹೋದಾಗ, ಬಾಳ ಚಲೋ ಆತು ಬಂದಿದ್ದು, ಯಾಕ್ಬೆ….. ʼಕಡ್ಲಿ ಕಿಳಾಕಿಂತಿವಿ, ನಾಳೆ ನಡಿ ನೀನುʼ….ಹು ಅಂದೆ. ʼಹಂಗಾರ ಬಡ ಬಡ ಊಟ ಮಾಡಿ ಮಲಗು ಮುಂಜೆಲೆ ಲಗೂನ ಏಳ್ಬೇಕು” ಅಂದ್ಲು. ಊಟ ಮಾಡಿ ಯಾಡ ಕೌದಿ ಒಂದು ಚಾಪಿ ಬಗಲಾಗ ಇಟ್ಗಂಡು ನಾ ಕಾಯಂಮ್ಮಾಗಿ ಮಲಗೋ ಶರಣಬಸಪ್ಪನ ಗುಡಿಗೆ ಹ್ವಾದೆ. ಥಂಡಿ ಬಾಳ ಇದ್ದಿದ್ದರಿಂದ ಗುಡ್ಯಾಗ್ ನಾಲ್ಕೈದು ಜನ ಇದ್ರು. ಖಾಯಂಮ್ಮಾಗಿ ಮಲಗುವವರು ಹಾಸಗಿ ಹಾಸಿದ್ರು ಆಗಲೇ… ಬಗಲಾಗಿನಿ ಹಾಸ್ಗಿ ಹಾಸಿ ಅಡ್ಡಾದೆ.
ಒಬ್ಬ ಹುಡ್ಗ ನಿದ್ದಿ ಜೋರ್ ಹತ್ತಿ ಗೊರಕಿ ಹೊಡಿಯಾಕ ಹತ್ತಿದ್ರಿಂದ ಯಾಡಮಳ ದೂರದಾಗ ಮಲಗಿದ್ದ ಮುದ್ಕ ʼಯಾರೋ ಅವನು ಗೊರಕಿ ಹೊಡಿಯಾವ, ನಿದ್ದಿ ಮಾಡುನ ಬ್ಯಾಡ, ನಾನು ನೋಡ್ದ್ಯಾ ನೋಡ್ದ್ಯಾ ಸಾಕಾಗಿ ಹೋತು, ಇಗ ಬಂದಾಗುತ್ತ ಆಗ ಬಂದಾಗುತ್ತʼ ಅನ್ಕೊತ ಎದ್ದು ಕುಂತು ತಲಿಮ್ಯಾಗಿನ ಬಿಳೆ ಪಟಗ ಕಿತ್ತು ಮುಂದ ಇಟ್ಗಂಡ. ಎಲ್ಲಾರು ಹೊಚ್ಗಂಡಿದ್ರಿಂದ ಯಾವ ಗೊರಕಿ ಹೊಡಿತಾನ ಅಂತ ಗೊತ್ತಾಗ್ಲೇ ಇಲ್ಲ. ಆದ್ರ ಗೊರಕಿ ಸೌಂಡ್ ಮಾತ್ರ ಕೇಳ್ತಿದ್ದ ಕೇಳಿ ಅಜ್ಜಗ ಕಂಪ್ಯೂಜ್ ಆಗಿ ʼಯಾವನಲೇ ಅವ ಇಷ್ಟ ಹೋಯ್ಕಳಕಿಂತಿನಿ ಕೇಳವಲ್ದ ಹಂದಿ ಹಂದಿಗಿಂತ ಒದರ್ತಿʼ ಅಂದಂಗೆಲ್ಲ ಇವನ ಗೊರಕಿ ಇನ್ನೂ ಜೋರಾಯ್ತು.

ʼಎ ಇದು ಹಂದಿ ಗೊರಕಿ ಅಲ್ಲಲೇ, ಇದು ಕತ್ತಿ ಗೊರಕಿ ನಿಮ್ಮನ್ಯಾಗ ಗೊರಕಿ ಹೊಡದ್ರ ಒದ್ದು ಹೊರಗ ಹಾಕ್ತಾರ ಅದಕ್ಕ ಇಲ್ಲಿ ಬಂದಿಯೇನ್ಲೆ. ಗುಡಿಯಾಗ ಯಾವ್ನು ಕೆಳಂಗಿಲ್ಲಂತ ಮಾಡಿರೇನು ಗಪ್ಪ ಆಗ್ತಿಯೋ ಇಲ್ಲ. ಬ್ಯಾಸರಾಗಿ ಗುಡಿಗೆ ಮಲ್ಕಳ್ಳಾಕ ಬಂದ್ರ ಇವರೌರ ನಿಮ್ಮ ಕಾಟ. ಗುಡಿಯಾಗ ಮಕ್ಳ ಮರಿ ಮಲಗಬೇಕೋ ಬ್ಯಾಡ” ಅಂತ ಜೋರಿಲೆ ಹೇಳ್ದ. ಕೌದಿ ಒಳಗ ನಗು ತಡಿಯಾಕ ಆಗ್ದ ಹುಡುಗುರು ನಗ್ತಿದ್ರು.
ಇನ್ನೊಬ್ಬ ಹುಡುಗ ಕೌದಿ ಹೊಚ್ಕೊಂಡಿದ್ದು ತಗ್ದು ಒಬ್ಬ ʼಲೇ ಯಾವನಲೇವ ಅಷ್ಟು ಅಜ್ಜ ಹೋಯ್ಕಳ್ಳಕಿಂತಾನ ಕೇಳ್ವಲ್ದಾʼ ಅಂತ ಜೋರಿಲೆ ಹೇಳ್ದಾಗ. ʼಹುನಲೇ ತಮ್ಮ ನಿನಗ ಕೇಳ್ತೈತಿ ಅವುಗ ಕೇಳವಲ್ದು ನೋಡು ನಾ ಹೇಳಿದ್ದುʼ ಅಂತ ಹೇಳಿ, ತಲಿಕೆಟ್ಟು ಗೊರಕಿ ಹೋಡಿಯವನ್ನ ಶೋಧನೆ ಮಾಡಿ ಕೌದಿ ಜಗ್ಗಿದ. ಯಾಕೆಜ್ಜ….. ಅಂದ. ಯಾಕಾ…! ಗೊರಕಿ ಹೊಡತಕ್ಕ ಸಾಯುದ್ವಂದ ಉಳಿದೈತಿ, ಗೊರಕಿ ಹೊಡಿದು ನಿಲ್ಲುಸುʼ ಅಂತ ಹೇಳಿ, ತನ್ನ ಜಗಕ್ಕ ಹೋಗಿ ಪಟಗಿ ಕಿವಿತುಂಬ ಸುತ್ಗೊಂಡು ಕೌದಿ ಎಳದು ಮಲ್ಕಂಡಾಂಗ ನಮಗಂತು ನಗು ತಡಿಯಾಕ ಆಗ್ಲಿಲ್ಲ.
ಮಗ್ಗಲ ಮಲ್ಕಂಡಿದ್ದಾವ ಹೇಳಿದ ಇವನ ಗೊರಕಿಕೆ ಅಜ್ಜ ಹಿಂಗ ಆಗೈತಿ, ಮತ್ತ ನಮ್ಮ ಶಿವಪ್ಪ ಮಾವ, ರಾಮಪ್ಪ ಮಾವ ಇದ್ದಿದ್ರ ಅಜ್ಜನ್ನ ಹೊತಗೊಂಡು ಹೋಗುದ ಬರ್ತಿತ್ತೇನೋ ಅಂತ ನೆನಸಿಗೊಂಡು ಇನ್ನೂ ನಕ್ವಿ. ಅಜ್ಜಗ ಕಾಡಿಸ್ಬೇಕಂತ ಮ್ಯಾಗ ಮಕ್ಕೊಂಡಾವ ಸುಮ್ ಸುಮ್ಮಕ ಗೊರಕಿ ಹೊಡಿದ. ಅಜ್ಜ ʼಅವನೌನ ಇಲ್ಲಿ ಗಪ್ಪಾದ್ರ ಅಲ್ಲಿ ಹೊಡಿಯಾಕಂತ ನೋಡು, ಹೊಗ್ಗೋ ಮಂಜಾಳೋಗ್ಲಿʼ ಅಂತ ಗೊಣಗಿಕೊಂತ ಮಲ್ಕಂಡಾಗ ನಮಗ ಮತ್ತ ನಕ್ಕು ನಕ್ಕು ನಿದ್ದೆ ಜಾರಿದ್ದು ಗೊತ್ತಾಗಲಿಲ್ಲ.
ಬೆಚ್ಚಗ ಕೌದ್ಯಾಗ ಬೆಚ್ಚನ ನಿದ್ದಿ ಜೋರಿತ್ತು. ಯಾರೋ ಅಲ್ಲಾಡಿಸುತ್ತಾ, ಕೌದಿ ಏಳದಂಗಾತು. ನಿದ್ದಿಗಣ್ಣನಿಲೆ ಕಣ್ ತಗದ್ ನೋಡಿದೆ, ವಸಂತ (ಅಳಿಯ) ಯದಕಲೇ ಅಂದೆ ʼಅಮ್ಮ ಕರಿಯಾಕಿಂತಾಳʼ, ಯದಕ? ʼಕಡ್ಲಿ ಕಿಳಾಕ ಅಂದ ʼಓ ಹೌದಲ್ಲಾ….ʼಮನಿಸ್ಸಿನ್ಯಾಗ ಅನ್ಕೊಂಡು, ಬಂದೆ ನಡಿ ಅಂತ ಹೇಳಿ ಮತ್ತ ಕೌದಿ ಹೊಚಗೊಂಡೆ. ನಿದ್ದಿ ಆಗಲೇ ಮಾಯವಾಗಿತ್ತು. ಹೊಲಕ್ಕ ಹೋಗೋ ಹೆಣ್ಮಕ್ಕಳು ʼಬೇ ಯವ್ವಾ ಬಾರ್ಬೆ, ಅವಕ್ಕನ ಕರ್ಕಂಡಬಾ, ಚಿಗವನ್ನ ಕರ್ಕಂಡ ಬಾ, ಹೊತ್ತಾತ ಬಾರ್ಬೆ ಕಡ್ಲಿ ಕೀಳಾಕ, ನೋಡು ಅವ್ರು ಹೋಗಿ ಬಾಳ ಹೊತ್ತಾತು, ನಾವಿನ್ನು ಇಲ್ಲೆ ಅದೀವಿʼ ಅಂತ ಪಾರವಕ್ಕ ಕಡ್ಲಿ ಕೀಳಾಕ ಬರೋರ್ನ ಒದರ್ತಾ ಇದ್ಲು…

ಇನ್ನ ಬೈಯಿಸಿಗೊಳ್ತನಿ ಅಮ್ಮನ ಗೂಟ ಅಂತ ತಿಳಿದು ಎದ್ದು, ಹಾಸಗಿ ಮಡಿಚಿಗೊಂಡು ಬಗಲಾಗ ಇಟ್ಟುಕೊಂಡು ಮನಿಗೆ ಹೋಗಿ ಗಡಿಯಾರ ನೋಡ್ದಾಗ ನಾಲ್ಕು ವರೆ ಆಗಿತ್ತು. ಮಕಗಿಕ ತೊಳಕೊಂಡು ಚಾ ಕುಡಿಯಾಕುಂತೆ ಅಕ್ಕ ಹಳೆ ಪ್ಯಾಂಟುಗಳ ಕಾಲುಗಳನ್ನು ಕಟ್ಟು ಮಾಡಿ ಕೈಗವುಸುಗಳನ್ನು ರಾಟಿಯಲ್ಲಿ ಹೊಲಿದು ರೇಡಿ ಮಾಡ್ತಿದ್ಲು. ಅಮ್ಮ ಅವಸರ ಮಾಡಾಕ ಹತ್ತಿದ್ಲು. ʼಎಲ್ರು ಹೋದ್ರು ನೀವು ಇನ್ನ ಇಲ್ಲೆ ಅದೀರಿ ಬಡ ಬಡ ಹೋಗುನ್ ಬರ್ರಿʼ ಹೇಳಾಕ ಹತ್ತದ್ಲು. ಚಾ ಕೂಡಿದು ಹೆಗಲಿಗೆ ವಸ್ತ್ರ ಹಾಕ್ಕೊಂಡು ನಾನು ವಸಂತ ಹೊಲದ ದಾರಿ ಹಿಡಿದ್ವಿ. ಇತ್ತಾಗ ಅಮ್ಮ ಅಕ್ಕ ಇನ್ನೊಬ್ಬ ಅಳಿಯ ಗಾಡಿ ಮೇಲೆ ಹೋದ್ರು.
ತಣ್ಣನೆಯ ಚಳಿಯಾಗ ಹಲ್ ಕಟಗರಿಸ್ತಾ ಕಾಲು ದಾರಿಯಾಗ ಹೆಜ್ಜಿ ಹಾಕಿದ್ವಿ. ಬೆಳಗುಗತ್ತಲಿನ್ಯಾಗ ಜೋಳದ ತೆನೆಗಳು ಜೋಕಾಲಿ ಆಡ್ತಿದ್ವು. ನಡೆದು ಹೋಗುವಾಗ ಬೆತ್ತಲೆ ಗಿಡಗಳು ಕಾಲಿಗೆ ತಾಕಿ ಒಂದು ರೀತಿ ಸುಖ ಕೊಡುತ್ತಿದ್ರ, ಗೋಧಿ ತೆನೆಯು ಗಾಳಿಗೆ ತೇಲಾಡುತ್ತಿದ್ದವು. ಕಬ್ಬಕ್ಕಿ ಹಿಂಡಿನಂಗ ಕಡ್ಲಿ ಹೊಲ್ದಾಗ ಹೆಣ್ಮಕ್ಕಳು ಕಡ್ಲಿ ಕಿಳ್ತಾ ಹಾಡು ಹಾಡ್ತಿದ್ರ ಅನಂತದೆಡೆಗೆ ಬೆಳಕು ಕುಡಿ ಒಡಿತ್ತಿತ್ತು….. ಇದನ್ನೆಲ್ಲಾ ಕೇಳ್ತಾ, ಅನುಭವಿಸ್ತಾ, ಚಳಿಗೆ ನಡಗ್ತಾ ಹೊಲಕ್ಕ ಹೋದ್ವಿ.
ಅಕ್ಕ ಹರಿದ ಪ್ಯಾಂಟಿನ ಕೈಗವುಸಗಳನ್ನು ಎರಡು ಕೈಗೆ ಕಟಗೊಂಡು ಕಡ್ಲಿಸಾಲು ಹಿಡಿದು ಆ ತಂಡಿ ಒಳ್ಗ ಕಡ್ಲಿ ಕಿಳಾಕ ಮುಟ್ಲೋ ಬ್ಯಾಡೋ ಅನ್ನುವಂಗ ಮಾಡ್ತಿದ್ವಿ. ಅವಾಗ ನಮ್ಮಮ್ಮ ʼಕಡ್ಲಿ ಮುಟ್ಟಿದರ ಕಡ್ಲಿ ಕಡದಿತು ಮತ್ತ ಮುಟ್ಟ ಬ್ಯಾಡೆಪ್ಪ….ʼ ಅಂತ ಗ್ಯಾಪ್ ಕೊಟ್ಟು ಹೇಳಿದ್ಲು ʼಬಡ ಬಡ ಕಿತ್ಗಂಡು ಹೋಗ್ಬಾರ್ದʼ ಹೇಳಿದಮ್ಯಾಗ ಒಂದೊಂದು ಕಡ್ಲಿ ಗಿಡ ಕಿಳ್ತಾ ಕಿಳ್ತಾ, ಹಿಡಿ ಹಿಡಿ ಕಿಳ್ತಾ, ಹಿಂದಿಂದ ಗುಂಪಿ ಇಡುತ್ತಾ, ಮುಂದ ಸಾಗ್ತಿದ್ರ, ತಂಡಿ ಮಂಗ್ ಮಾಯ ಆಗ್ತಿತ್ತು.
ಹಿಂಗ ಮ್ಯಾರಿ ಮುಟ್ಟತ್ಲೆ ಮಂದನ ಬೆಳಕು ಭೂಮಿಗೆ ಹರಿಸಿತ್ತು. ಆ ಬೆಳಕಿನ್ಯಾಗ ಕಡ್ಲಿ ಹೊಲ ಬಂಗಾರನೇ ಬೆಳೆದಿದೆಯೇನು ಅನ್ನುವಂಗ ಕಾಣ್ತಿರೋದು ನೋಡೋದ ಚಂದ. ಬಿಸಿಲು ಏರಿದಂಗೆಲ್ಲ ಕಡ್ಲಿ ಕಿಳುದು ಬಿಡ್ತಿದ್ರು. ಯಾಕಂದ್ರ ಬಿಸಲಿಗೆ ಬುಡ್ಡಿ ಉದುರುತ್ತಾವಂತ. ಅಷ್ಟೊತ್ತಿಗೆ ಏಳುವರೆ ಎಂಟು ಗಂಟೆಗೆ ಆಗಿ ಹೊಲಕ್ಕ ಹೋದ ಕೂಲಿ ಹೆಣ್ಮಕ್ಕಳು ಮನೆಗೆ ಬಂದು ಬಿಡುತ್ತಿದ್ದರು. ಹೊಲದವರು ಅಷ್ಟೇ ಇದ್ದರ ತಾಸು ಎರಡು ತಾಸು ನಿಧಾನಕಿಲೆ ಕಿತ್ತು ಹನ್ನೊಂದು ಹನ್ನೆರಡು ಗಂಟೆಗೆ ಮನಿ ಕಡೆ ಮುಖ ಮಾಡ್ತಾರ.

ಹಿಂಗ ಬರುವಾಗ ದನಕರುವಿಗೆ ಮೇವು ಮಾಡ್ಕಂಡು, ಜೋಳದ ದಂಟು ಕಿತ್ಗೊಂಡು ಗಂಟು ಹೊರೀ ಮಾಡಿ,ತಲಿ ಮ್ಯಾಗ ಇಟ್ಗಂಡು, ಮನಿಗೆ ಹೋಗೋದು ಮಾಮುಲಿ. ನಾವು ಹಿಂದಿಂದ ಬರುವಾಗ ಹಿಂಬಿತ್ತಿಗೆ ಆದ ಕಡ್ಲಿ ಹೊಲ್ದಾಗ ಹಸಿ ಕಡ್ಲಿ ಗಿಡಗಳನ್ನ ಹಿಡಿತುಂಬಾ ಕಿತ್ಗಂಡು ತಿನ್ಕಂತ ದಾರಿಯುದ್ದಕ್ಕೂ ಬರ್ತಿದ್ವಿ. ಒಮ್ಮೊಮ್ಮೆ ಹಸಿ ಕಡ್ಲಿ ಹರಿದು ಮನೆಯ ಒಲಿಮ್ಯಾಗ ಹಂಚಿನ್ಯಾಗ ಹುರಿದು ಉಪ್ಪು ಹಾಕಿ ತಿಂತಿದ್ವಿ. ಅದರ ರುಚಿ ತಿಂದವರ ನಾಲಿಗಿಗೆ ಗೊತ್ತು…..
ಈ ನುಡಿಗಟ್ಟು ಓದಿದ್ದೀರಾ? ಔರಾದ್ ಸೀಮೆಯ ಕನ್ನಡ | ಹಂತಿ ಹೊಡಿಲಾಕ್ ನಮ್ ಎತ್ಗೊಳ್ ಖಾಲಿನೇ ಅವಾ!
ʼಕಡ್ಲಿ ಕಿಳೋದು ಒಂದು ತಿಂಗಳವರೆಗೆ ನಡಿತಿತ್ತು. ಹೆನ್ಮಕ್ಕಳಿಗೆ ಒಂದು ದಿನಕ್ಕೆ ಒಂದು ಪಡಿ (ನಾಕ್ ಸೇರು) ಕಡ್ಲಿ ಕೊಡ್ತಿದ್ರು. ಇಲ್ಲ ರೊಕ್ಕಾ ಕೊಡ್ತಿದ್ರು. ಇದಲ್ಲದೇ ಎಕ್ಕರೆಗೆ ಇಷ್ಟು ಅಂತ ಕೂಲಿ ಮಾತಾಡಿ ಗುತ್ತಿಗೆ ಹಿಡಿದು ಬೇಗ ಬೇಗ ಮಾಡಿ ಮುಗಿಸಿ ಬಿಡ್ತಿದ್ರು.
ಹಿಂಗ ಈ ಕಡ್ಲಿ ಸುಗ್ಯಾಗ ಚೀಲ ಯಾಡ ಚೀಲ ಕಡ್ಲಿ ದುಡಿದು ಮನ್ಯಾಗ ನಿಟ್ಟೊಟ್ಟಿ, ಹೆಣ್ಮಕ್ಕಳ ಮದುವೆ ಗನ್ಮಕ್ಕಳ ಮದುವೆಗೆ ಪಲ್ಯೇಕ, ಬುಂದೆ ಮಾಡಾಕ ಬ್ಯಾರೆ ಬ್ಯಾರೆ ಭವಿಷ್ಯತ್ತಿನಿ ಲೆಕ್ಕಾ ಹಾಕ್ತಿದ್ರು ಹೆಣ್ಮಕ್ಕಳು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.