ʼಬೀದರ್ ಜಿಲ್ಲೆಯ ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ 18 ಪ್ರಾಥಮಿಕ ಮತ್ತು 22 ಪ್ರೌಢ ಶಾಲೆಗಳಲ್ಲಿ ಖಾಯಂ ಕನ್ನಡ ಶಿಕ್ಷಕರ ಕೊರತೆಯಿದೆʼ ಎಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಉತ್ತರಿಸಿದ್ದಾರೆ.
ಔರಾದ(ಬಿ) ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ವಿಷಯ ಶಿಕ್ಷಕರ ಕೊರತೆ ಬಗ್ಗೆ ಮಾಜಿ ಸಚಿವ, ಔರಾದ್ ಶಾಸಕ ಪ್ರಭು ಬಿ.ಚವ್ಹಾಣ ಅವರು ವಿಧಾನಸಭಾ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಯೊಂದಕ್ಕೆ ಸಚಿವ ಮಧು ಬಂಗಾರಪ್ಪ ಅವರು ಈ ಮೇಲಿನಂತೆ ಉತ್ತರಿಸಿದ್ದಾರೆ.
ʼಕೊರತೆಯಿಂದ ಶಿಕ್ಷಕರ ಹುದ್ದೆಗಳ ನೇಮಕಾತಿ/ನಿಯೋಜನೆಗೆ ಸರ್ಕಾರ ಕ್ರಮ ಕೈಗೊಂಡಿದೆಯೇ ಎಂದು ಶಾಸಕ ಪ್ರಭು ಚವ್ಹಾಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ ಅವರು, ʼಖಾಲಿಯಿರುವ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಖಾಲಿಯಿರುವ ಪ್ರಾಥಮಿಕ ಶಾಲೆಗಳ 4,882 ಮತ್ತು ಪ್ರೌಢ ಶಾಲೆಗಳ 385 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದಿಂದ ಅನುಮತಿ ನೀಡಲಾಗಿದೆʼ ಎಂದಿದ್ದಾರೆ.
ʼಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2024ರ ಅಕ್ಟೋಬರ್ 28ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಹೊಸದಾಗಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದೆಂದು ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿರುವುದಿಲ್ಲʼ ಎಂದು ಸಚಿವ ಮಧು ಬಂಗಾರಪ್ಪ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಖಾಯಂ ಕನ್ನಡ ಶಿಕ್ಷಕರ ನೇಮಕ್ಕೆ ಆಗ್ರಹ :
ʼರಾಜ್ಯದ ಗಡಿ ಭಾಗದಲ್ಲಿರುವ ಔರಾದ (ಬಿ) ಕ್ಷೇತ್ರದಲ್ಲಿ ಮರಾಠಿ ಮತ್ತು ತೆಲುಗು ಭಾಷೆಗಳ ಪ್ರಭಾವ ಹೆಚ್ಚಾಗಿದೆ. ನಾನು ಶಾಸಕನಾದ ನಂತರ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿದ್ದೇನೆ. ಕನ್ನಡದ ಹಿತರಕ್ಷಣೆಯ ದಿಶೆಯಲ್ಲಿ ನಿರಂತರ ಶ್ರಮಿಸುತ್ತಿದ್ದೇನೆ. ಎಲ್ಲ ಶಾಲೆಗಳಲ್ಲಿ ಕನ್ನಡ ಪಾಠಗಳು ನಡೆಯುವಂತೆ ಮಾಡಿದ್ದೇನೆ. ಗ್ರಾಮ ಸಂಚಾರ ನಡೆಸಿ ಶಾಲೆಗಳಲ್ಲಿನ ಕೊರತೆಗಳನ್ನು ತಿಳಿದುಕೊಂಡು ಸರಿಪಡಿಸುವ ವ್ಯವಸ್ಥೆ ಮಾಡುತ್ತಿದ್ದೇನೆ. ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಆದ್ಯತೆ ನೀಡಿದ್ದೇನೆ. ಎಲ್ಲ ಪ್ರಯತ್ನಗಳಿಂದಾಗಿ ಶಿಕ್ಷಣ ಕ್ಷೇತ್ರ ಸಾಕಷ್ಟು ಸುಧಾರಿಸುತ್ತಿದೆʼ ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದ್ದಾರೆ.
ʼಕ್ಷೇತ್ರದ ಸಾಕಷ್ಟು ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆಯಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ. ವಿದ್ಯಾರ್ಥಿಗಳಿಲ್ಲದ ಕಡೆ ಹೆಚ್ಚಿನ ಶಿಕ್ಷಕರಿದ್ದು, ವಿದ್ಯಾರ್ಥಿಗಳು ಹೆಚ್ಚಿರುವ ಕಡೆ ಶಿಕ್ಷಕರ ಕೊರತೆಯಿದೆ. ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿ ಸಚಿವರನ್ನು ದಾರಿ ತಪ್ಪಿಸುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದಾಗಿ ಗಡಿ ಭಾಗದಲ್ಲಿ ಶಿಕ್ಷಣಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆʼ ಎಂದಿದ್ದಾರೆ.
ʼವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣ ಶಿಕ್ಷಕರನ್ನು ಒದಗಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸಬೇಕು. ನಮ್ಮ ಮಕ್ಕಳು ಕೂಡ ಇಂದಿನ ಸ್ಪರ್ಧಾತ್ಮಕತೆಗೆ ಒಗ್ಗಿಕೊಳ್ಳಬೇಕು. ಈ ದಿಶೆಯಲ್ಲಿ ಸಚಿವರು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಗಡಿ ಭಾಗದಲ್ಲಿರುವ ಶಾಲೆಗಳಲ್ಲಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಭಾಗದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಶಿಕ್ಷಕರ ಸಮಸ್ಯೆ ಸೇರಿದಂತೆ ಸರ್ಕಾರಿ ಶಾಲೆಗಳಲ್ಲಿನ ಎಲ್ಲ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಗಡಿ ಭಾಗದಲ್ಲಿ ಶಿಕ್ಷಣ ಸುಧಾರಣೆಗೆ ಪ್ರಯತ್ನಿಸಬೇಕುʼ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಔರಾದ ತಾಲೂಕಿನ ಅರ್ಧದಷ್ಟು ಸರ್ಕಾರಿ ಪ್ರೌಢ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರಿಲ್ಲ
ಔರಾದ್ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ವಿಷಯ ಶಿಕ್ಷಕರ ಬಗ್ಗೆ ʼಈದಿನ.ಕಾಮ್ʼ 2024 ಜೂನ್ 21ರಂದು ʼಔರಾದ ತಾಲೂಕಿನ ಅರ್ಧದಷ್ಟು ಸರ್ಕಾರಿ ಪ್ರೌಢ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರಿಲ್ಲʼ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.