ಕ್ಷುಲ್ಲಕ ಕಾರಣಕ್ಕೆ ಇಬ್ಬರು ಶಾಲಾ ವಿದ್ಯಾರ್ಥಿಗಳ ನಡುವಿನ ಕಿತ್ತಾಟವು ಗುಂಪು ಘರ್ಷಣೆಯಾಗಿ ಮಾರ್ಪಟ್ಟಿದೆ. ಆ ಘಟನೆಗೆ ಹಿಂದುತ್ವವಾದಿಗಳು ಕೋಮು ಬಣ್ಣ ಬಳಿದು, ಕೋಮುದ್ವೇಷ ಹರಡಲು ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಹುಳಿಯಾರುನಲ್ಲಿ ನಡೆದಿದೆ.
ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಅದೇ ತರಗತಿಯ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರನ್ನು ಪ್ರೀತಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿದ್ದರು. ಆ ಇಬ್ಬರು ವಿದ್ಯಾರ್ಥಿಗಳಲ್ಲಿ ಓರ್ವ ಹಿಂದು, ಮತ್ತೋರ್ವ ಮುಸ್ಲಿಂ. ಈ ಇಬ್ಬರು ಒಂದೇ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ, ಆ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಇಬ್ಬರು ವಿದ್ಯಾರ್ಥಿಗಳ ನಡುವಿನ ಕಿತ್ತಾಟದಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳು, ಯುವಕರು ಭಾಗಿಯಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಆದರೆ, ಕೆಲವು ಮಾಧ್ಯಮಗಳು ಮತ್ತು ಹಿಂದುತ್ವವಾದಿಗಳು ಘಟನೆಗೆ ಕೋಮು ಬಣ್ಣ ಬಳಿದು, ಕೋಮು ಸಂಘರ್ಷದ ಸುದ್ದಿಯನ್ನಾಗಿ ಮಾಡಿದ್ದಾರೆ. ‘ಹಿಂದು ವಿದ್ಯಾರ್ಥಿಗೆ ಥಳಿಸಿದ ಏಳು ಮಂದಿ ಮುಸ್ಲಿಮರು’, ‘ಅನ್ಯಕೋಮಿನ ಯುವಕರಿಂದ ವಿದ್ಯಾರ್ಥಿಗೆ ಹಲ್ಲೆ’ ಎಂಬಿತ್ಯಾದಿ ಶೀರ್ಷಿಕೆಗಳನ್ನು ಕೊಟ್ಟು ಕೆಲ ಮಾಧ್ಯಮಗಳು ಸುದ್ದಿ ಮಾಡಿದ್ದಾರೆ. ಇನ್ನು, ಹಿಂದುತ್ವವಾದಿಗಳು ಘಟನೆಯನ್ನು ಕೋಮುದ್ವೇಷ ಮತ್ತು ಕೋಮು ರಾಜಕಾರಣಕ್ಕೆ ಬಳಸಿಕೊಳ್ಳಲು ಯತ್ನಿಸಿದ್ದಾರೆ.
ಆದಾಗ್ಯೂ, ಘಟನೆ ಬಗ್ಗೆ ಶಾಲೆಯ ಉಪ ಪ್ರಾಂಶುಪಾಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲೆಯ ಆವರಣ ಪ್ರವೇಶಿಸಿದ್ದ ಶಾಲೆಯ ವಿದ್ಯಾರ್ಥಿಗಳಲ್ಲದ ನಾಲ್ಕು ಮಂದಿ ಸೇರಿ, ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ. ಶಾಲೆಯೊಳಗಿನ ವಿಚಾರಕ್ಕೆ ಶಾಲೆಯ ವಿದ್ಯಾರ್ಥಿಗಳಲ್ಲದವರು ಭಾಗಿಯಾಗಿದ್ದು ಅಕ್ಷಮ್ಯವಾಗಿದ್ದು, ಅವರಿಗೆ ಶಿಕ್ಷೆಯಾಗಬೇಕು. ಆದರೆ, ಕ್ಷುಲ್ಲಕ ಘಟನೆಯೊಂದಕ್ಕೆ ಕೋಮುವಾದದ ಬಣ್ಣ ಹಚ್ಚಿ, ಭೀಕರಗೊಳಿಸಿ, ಕೋಮು ದ್ವೇಷ, ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿರುವುದು ಅದಕ್ಕಿಂತಲೂ ಅಕ್ಷಮ್ಯ ಎಂದು ಸ್ಥಳೀಯರು ಹೇಳಿದ್ದಾರೆ.
“ಎಳಸು ಹುಡುಗರ ಪ್ರೇಮ ಎಂಬ ಭ್ರಮೆಯ ಸಿಲ್ಲಿ ಬಡಿದಾಟವನ್ನು ಕೆಲವರು ಬಲಪಂಥೀಯ ಕೋಮು ವಿಷ ಹರಡಲು ಬಳಿಕೊಳ್ಳುತ್ತಿದ್ದಾರೆ. ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಬೇಕಿದ್ದವರು, ಕೋಮು ಸಂಘರ್ಷ ಸೃಷ್ಟಿಸಲು ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಪತ್ರಕರ್ತರೂ ಭಾಗಿಯಾಗಿರುವುದು ಅಕ್ಷಮ್ಯ. ವೃತ್ತಿದ್ರೋಹ. ಇವರ ನಡೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ” ಎಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳು (ಫೆಬ್ರವರಿ 11) ಇದೇ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಅನುಭವಾತ್ಮಕ ಕಲಿಕೆಗಾಗಿ ಚರ್ಚ್‌ಗೆ ಭೇಟಿ ನೀಡಿದ್ದರು. ಅದನ್ನು ಚಿತ್ರೀಕರಿಸಿದ್ದ ಹಿಂದುತ್ವವಾದಿಯೊಬ್ಬ ವಿದ್ಯಾರ್ಥಿಗಳಿಗೆ ಧರ್ಮ ಬೋಧನೆ ಮಾಡಿಸಲಾಗುತ್ತಿದೆ. ಮತಾಂತರಕ್ಕೆ ಯತ್ನಿಸಲಾಗುತ್ತಿದೆ ಎಂದು ವದಂತಿ ಹಬ್ಬಿಸಿದ್ದ. ಇದೀಗ, ಕ್ಷುಲ್ಲಕ ಕಾರಣವನ್ನು ಕೋಮುದ್ವೇಷ ಬಿತ್ತಲು ಬಳಸಿಕೊಳ್ಳಲಾಗುತ್ತಿದೆ. ಕೋಮುದ್ವೇಷ ಬಿತ್ತುತ್ತಿರುವವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.