ತೆಲಂಗಾಣದ ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಕ್ಯಾಂಪಸ್‌ನಲ್ಲಿ ಪ್ರತಿಭಟನೆಯನ್ನು ನಿಷೇಧಿಸಿದೆ. ಶಾಂತಿಯುತ ಕಲಿಕಾ ವಾತಾವರಣ ನಿರ್ಮಿಸಿ, ವಿದ್ಯಾರ್ಥಿಗಳಿಗೆ ಕಲಿಕೆ ಸುಗಮಗೊಳಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದೆ. ಕ್ಯಾಂಪಸ್‌ನಲ್ಲಿ ಧರಣಿ, ಪ್ರತಿಭಟನೆ ಮತ್ತು ಘೋಷಣೆಗಳನ್ನು ಕೂಗುವುದನ್ನು ನಿಷೇಧಿಸಲಾಗಿದೆ. ವಿಶ್ವವಿದ್ಯಾನಿಲಯ ಕೈಗೊಂಡಿರುವ ಕ್ರಮವನ್ನು ಬಿಆರ್‌ಎಸ್ ಮತ್ತು ಬಿಜೆಪಿ ಖಂಡಿಸಿವೆ.
ಮಾರ್ಚ್ 13ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಹೊರಡಿಸಿದ ಸುತ್ತೋಲೆಯಲ್ಲಿ, “ಇತ್ತೀಚಿನ ದಿನಗಳಲ್ಲಿ, ವಿದ್ಯಾರ್ಥಿಗಳು/ವಿದ್ಯಾರ್ಥಿ ಗುಂಪುಗಳು ವಿಭಾಗಗಳು/ಕಾಲೇಜುಗಳ ಆಡಳಿತ ಕಟ್ಟಡಕ್ಕೆ ಪ್ರವೇಶಿಸಿ ಧರಣಿ, ಪ್ರತಿಭಟನೆ ಮಾಡುತ್ತಿರುವುದರಿಂದಾಗಿ ಆಡಳಿತಾತ್ಮಕ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಸಮಾಜಕ್ಕೆ ವಿಶ್ವವಿದ್ಯಾಲಯದ ಬಗ್ಗೆ ತಪ್ಪು ಗ್ರಹಿಕೆ ಬರುತ್ತಿದೆ” ಎಂದು ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ಪತ್ರಿಕೋದ್ಯಮ ಮೌನವಾಗಿರುವುದಿಲ್ಲ: ಖಾಲಿ ಸಂಪಾದಕೀಯ ಪ್ರಕಟಿಸಿದ ತೆಲಂಗಾಣ ಉರ್ದು ದೈನಿಕ
“ಅತಿಕ್ರಮಣ, ಧರಣಿ ಮತ್ತು ಆಂದೋಲನಗಳನ್ನು ನಡೆಸುವುದು, ಘೋಷಣೆಗಳನ್ನು ಕೂಗುವುದು, ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸದಂತೆ ತಡೆಯುವುದು, ವಿಶ್ವವಿದ್ಯಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕೆಟ್ಟ ಭಾಷೆಯನ್ನು ಬಳಸುವುದನ್ನು ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿಷೇಧಿಸಲಾಗಿದೆ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಹಾಗೆಯೇ ನಿಷೇಧಿಸಲಾದ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾನಿಲಯ ಎಚ್ಚರಿಕೆ ನೀಡಿದೆ. ಈ ನಡುವೆ ವಿಶ್ವವಿದ್ಯಾನಿಲಯದ ಈ ಕ್ರಮವನ್ನು ಬಿಆರ್‌ಎಸ್ ಮತ್ತು ಬಿಜೆಪಿ ಟೀಕಿಸಿದೆ.
ತೆಲಂಗಾಣ ವಿಶ್ವವಿದ್ಯಾನಿಲಯದ ನಿರ್ಧಾರದ ವಿಚಾರದಲ್ಲಿ ಬಿಆರ್‌ಎಸ್ ನಾಯಕ ಕ್ರಿಶಾಂಕ್ ಅವರು, ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ‘ಅಸಹಿಷ್ಣು ಪಕ್ಷ’ ಎಂದು ಟೀಕಿಸಿದ್ದಾರೆ.
“ಪ್ರಜಾಪ್ರಭುತ್ವ ಸರ್ಕಾರ ಎಂದು ಹೇಳಿಕೊಳ್ಳುವ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮತ್ತು ಅವರ ನಾಯಕ ರಾಹುಲ್ ಗಾಂಧಿ ಭಾರತದಾದ್ಯಂತ ಕೆಂಪು ಸಂವಿಧಾನ ಪ್ರತಿಯನ್ನು ತೋರಿಸುತ್ತಾರೆ. ಆದರೆ ತೆಲಂಗಾಣಕ್ಕೆ ರಾಜ್ಯತ್ವವನ್ನು ತಂದ ತೆಲಂಗಾಣ ಆಂದೋಲನಕ್ಕೆ ಪ್ರತಿಭಟನೆಗಳ ಕೇಂದ್ರಬಿಂದುವಾಗಿರುವ ಐತಿಹಾಸಿಕ ಉಸ್ಮಾನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ, ಕಾಂಗ್ರೆಸ್ ಸರ್ಕಾರವು ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ನಿಷೇಧಿಸಿದೆ. ಕಾಂಗ್ರೆಸ್ ಸರ್ಕಾರವು ಎಷ್ಟು ಅಸಹಿಷ್ಣುತೆಯಿಂದ ಕೂಡಿದೆಯೆಂದರೆ ಅವರು ಟೀಕೆಗಳನ್ನು ಸಹ ಸ್ವೀಕರಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ಹೇರಿಕೆ ವಿವಾದ | ಶಾಲೆಗಳಲ್ಲಿ ತೆಲುಗು ಬೋಧನೆ, ಕಲಿಕೆ ಕಡ್ಡಾಯಗೊಳಿಸಿದ ತೆಲಂಗಾಣ
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರಾಮಚಂದರ್ ರಾವ್, ಇದು ಅಘೋಷಿತ ತುರ್ತುಸ್ಥಿತಿ ಎಂದು ಕರೆದಿದ್ದಾರೆ. ತೆಲಂಗಾಣ ಸರ್ಕಾರದ ಆದೇಶದ ಮೇರೆಗೆ ವಿಶ್ವವಿದ್ಯಾಲಯವು ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದ್ದಾರೆ.
“ತೆಲಂಗಾಣದಲ್ಲಿ ಅಘೋಷಿತ ತುರ್ತುಸ್ಥಿತಿಯಿದೆ. ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಯಾವುದೇ ಧರಣಿ ಅಥವಾ ಸಭೆ ನಡೆಯದಂತೆ ನೋಡಿಕೊಳ್ಳಲು ಸರ್ಕಾರ ಉಸ್ಮಾನಿಯಾ ವಿಶ್ವವಿದ್ಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸರ್ಕಾರವು ವಿದ್ಯಾರ್ಥಿಗಳನ್ನು, ಉದ್ಯೋಗ ಮತ್ತು ಇತರ ವಿಷಯಗಳ ಬಗ್ಗೆ ಅವರ ಬೇಡಿಕೆಗಳನ್ನು ಹತ್ತಿಕ್ಕಲು ಬಯಸುತ್ತದೆ. ಸರ್ಕಾರದ ಇಂತಹ ಕೃತ್ಯವನ್ನು ಬಿಜೆಪಿ ಖಂಡಿಸುತ್ತದೆ” ಎಂದು ಹೇಳಿದ್ದಾರೆ.
