ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಇದಕ್ಕೆ ಕಾಯಿರಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಡಿಸಿಸಿ ಅಧ್ಯಕ್ಷರು, ಮುಂಚೂಣಿ ಘಟಕ ಹಾಗೂ ಸೆಲ್ ವಿಭಾಗಗಳ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಅವರು ಪಕ್ಷದ ಬಲವರ್ಧನೆ ಹಾಗೂ ಮುಂದೆ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಕೆಪಿಸಿಸಿ ಪದಾಧಿಕಾರಿಯೊಬ್ಬರು ಜಿಲ್ಲಾ ಮಟ್ಟದಲ್ಲಿ ಎರಡು ಹುದ್ದೆಗಳ ಬಗ್ಗೆ ಪ್ರಸ್ತಾಪ ಮಾಡಿದಾಗ ಮಾತನಾಡಿದ ಡಿ ಕೆ ಶಿವಕುಮಾರ್, ಸಮಯ, ಸಂದರ್ಭದ ಅನುಗುಣವಾಗಿ ನಮ್ಮ ಪಕ್ಷದಲ್ಲಿ ಯೋಜನೆಗಳು ನಡೆಯುತ್ತವೆ. ಖರ್ಗೆ ಅವರು ಎಐಸಿಸಿ ಅಧ್ಯಕ್ಷರು, ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ, ಎರಡು ಖಾತೆ ಕೂಡ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಬಳಿಕ ನಾನು ಮುಕ್ತನಾಗುತ್ತೇನೆ. ಬೇರೆಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ನಿಯಮದ ಪ್ರಕಾರ ಒಬ್ಬರಿಗೆ ಒಂದು ಹುದ್ದೆ ಮಾತ್ರ ಸಿಗಬೇಕು. ಸದ್ಯ ಡಿ ಕೆ ಶಿವಕುಮಾರ್ ಡಿಸಿಎಂ ಜೊತೆಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಈ ಹಿಂದೆಯೇ ಪಕ್ಷದ ಒಳಗಡೆಯೇ ಅಧ್ಯಕ್ಷ ಸ್ಥಾನ ಮತ್ತು ಡಿಸಿಎಂ ಎರಡನ್ನೂ ನಿಭಾಯಿಸುತ್ತಿರುವುದಕ್ಕೆ ಅಪಸ್ವರ ಎದ್ದಿತ್ತು. ಈಗ ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ ಎಂದು ಹೇಳುವ ಮೂಲಕ ಪಕ್ಷದಲ್ಲಿ ಸಂಚಲನ ಮೂಡಿಸಿದ್ದಾರೆ.
