ಈ ದೇಶದ ಸ್ವಾತಂತ್ರ್ಯಕ್ಕಾಗಿ ಮುಸ್ಲಿಂ ಸಮುದಾಯದ ಜನರು ಹೋರಾಟ ನಡೆಸಿದ್ದಾರೆ. ಅವರು ಜೈಲುಗಳಿಗೆ ಹೋಗಿದ್ದು, ದೇಶಕ್ಕಾಗಿ ಹೋರಾಡುವಾಗ ಪ್ರಾಣ ತ್ಯಾಗವನ್ನೂ ಮಾಡಿದ್ದಾರೆ. ಅಂತಹ ಒಬ್ಬ ಆರ್‌ಎಸ್‌ಎಸ್ ನಾಯಕನನ್ನು ನನಗೆ ತೋರಿಸಿ ಎಂದು ಡಿಎಂಕೆ ಸಂಸದೆ ಕನಿಮೋಳಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಚೆನ್ನೈನ ಇಂಡಿಯನ್ ವುಮೆನ್ ಲೀಗ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆರ್‌ಎಸ್‌ಎಸ್ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದರು.
ಆರ್‌ಎಸ್‌ಎಸ್ ಕ್ಷಮಾಪಣೆ ಪತ್ರ ಬರೆದು ಜೈಲಿನಿಂದ ಹೊರಬಂದಿದ್ದ ಓರ್ವ ವ್ಯಕ್ತಿಯನ್ನು ಮಾತ್ರ ಹೆಸರಿಸುತ್ತಾರೆ. ಆದರೆ,ಅದಕ್ಕಾಗಿ ಅವರು ಒಂದು ಕತೆಯನ್ನು ನಿರೂಪಿಸುತ್ತಾರೆ. ನಾನದನ್ನು ತುಂಬಾ ಇಷ್ಟಪಡುತ್ತೇನೆ, ಸಾವರ್ಕರ್ ಕ್ಷಮಾಪಣೆ ಪತ್ರ ನೀಡಿ, ಜೈಲಿನಿಂದ ಹೊರ ಬಂದರು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಆರ್‌ಎಸ್‌ಎಸ್‌ನವರು ಮಾತ್ರ ಸಾವರ್ಕರ್ ಪಕ್ಷಿಯ ಮೇಲೆ ಕುಳಿತುಕೊಂಡು ಜೈಲಿನಿಂದ ಹೊರಗೆ ಬಂದರು ಎಂದು ಹೇಳುತ್ತಾರೆ ಎಂದು ಕನಿಮೋಳಿ ವ್ಯಂಗ್ಯವಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
ಅವರು ನಮ್ಮತ್ತ ನೋಡಿ, ನಮ್ಮನ್ನು ದೇಶದ್ರೋಹಿಗಳು ಹಾಗೂ ನಗರ ನಕ್ಸಲೀಯರು ಎಂದು ಟೀಕಿಸುತ್ತಾರೆ.ಇತ್ತೀಚೆಗೆ ಸಹ, ಕೇಂದ್ರ ಸಚಿವರು ನಮ್ಮನ್ನು ಅನಾಗರಿಕರು ಎಂದು ಬಣ್ಣಿಸಿದ್ದರು. ನಿಮಗೆ ನಾಗರಿಕತೆ ಎಂದರೇನು ಎಂದು ತಿಳಿಯದಿರುವುದರಿಂದ, ನೀವು ನಮ್ಮನ್ನು ಅನಾಗರಿಕರು ಎಂದು ಕರೆದಿರುವ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಕನಿಮೋಳಿ ಹೇಳಿದರು.
ಈ ವೇಳೆ, ಕೇಂದ್ರ ಸರ್ಕಾರದ ತ್ರಿವಳಿ ತಲಾಖ್ ಕಾಯ್ದೆಯನ್ನೂ ಟೀಕಿಸಿದ ಕನಿಮೋಳಿ, ಈ ಕಾಯ್ದೆಯು ಮುಸ್ಲಿಂ ಮಹಿಳೆಯರ ಕಲ್ಯಾಣದ ಗುರಿಯನ್ನು ಹೊಂದಿಲ್ಲ, ಬದಲಿಗೆ ಮುಸ್ಲಿಂ ಪುರುಷರನ್ನು ಅಪರಾಧೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಈ ಕಾಯ್ದೆಯು ಹಲವು ವಿಧದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ದಮನಿಸುತ್ತದೆ ಹಾಗೂ ಅವರನ್ನು ದೇಶದ ಶತ್ರುಗಳು ಎಂದು ಬಿಂಬಿಸುತ್ತದೆ. ಆದರೆ, ಮುಸ್ಲಿಂ ಸಮುದಾಯದವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ್ದಾರೆ ಎಂದು ಹೇಳಿದರು.
