ಭಾರತ ದೇಶದಲ್ಲಿ ವಿವಿಧ ಸಂಸ್ಕೃತಿಗಳು, ಅನೇಕ ಬಗೆಯ ಧರ್ಮಗಳಿವೆ. ಇವರೆಲ್ಲರೂ ಕೂಡಿ ಸಾಗಬೇಕಿದೆ ಎಂದು ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಮುಖಂಡ ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಕೊಪ್ಪಳ ನಗರದ ಹಟಗಾರ ಪೇಟೆ ಓಣಿಯಲ್ಲಿರುವ ಹಝ್ರತ್ ಮಹೆಬೂಬ್ ಸುಭಾನಿ ಅರಬ್ಬಿ ತರಬೇತಿ ಕೇಂದ್ರದ ಆವರಣದಲ್ಲಿ ಹಟಗಾರ ಪೇಟೆ ಓಣಿಯ ಯುವಕರ ಕಮಿಟಿಯಿಂದ ಶುಕ್ರವಾರ ರಾತ್ರಿ ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.
ಹಿರಿಯ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, “ಹಟಗಾರ ಪೇಟೆ ಓಣಿಯವರು ನಮ್ಮ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಸದಸ್ಯರಿಗೆ ಇಫ್ತಾರ್ ಕೂಟಕ್ಕೆ ಆಮಂತ್ರಿಸಿ ಒಳ್ಳೆಯ ಊಟ ಮಾಡಿಸಿದ್ದಾರೆ. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ, ಪಾರ್ಸಿ, ಲಿಂಗಾಯತ, ಶೈವ, ಬೌದ್ಧ ಯಾವುದೇ ಧರ್ಮ ಇರಲಿ ನಾವು ಎಲ್ಲರೂ ಕೂಡಾ ಕೂಡಿ ಬಾಳಬೇಕು, ಎಲ್ಲ ಧರ್ಮಗಳೂ ಕೂಡ ದೇವನು ಒಬ್ಬನೇ ಎನ್ನುವಂತಹ ಸೂತ್ರವನ್ನು ಹೇಳುತ್ತವೆ. ನಾವು ದೇವರಿಗಾಗಿ, ಧರ್ಮಕ್ಕಾಗಿ, ಕಾದಾಟ ಮಾಡದೆ ನಮ್ಮ ರೀತಿಯಲ್ಲಿ ಪ್ರೀತಿ ವಿಶ್ವಾಸ ಗೌರವ ಸೌಹಾರ್ದದಿಂದ ನಾವೆಲ್ಲ ಭಾರತೀಯರೂ ಕೂಡಿ ಬಾಳಬೇಕು” ಎಂದರು.
“ಭಾರತ ಒಂದು ದೊಡ್ಡ ದೇಶ, ಈ ದೇಶಕ್ಕೆ ಇರುವ ದೊಡ್ಡ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಲ್ಲದೆ ದಡ್ಡ ಸಂಸ್ಕೃತಿಯನ್ನು, ಕೋಮುವಾದಿ ಸಂಸ್ಕೃತಿಯನ್ನು ನಾವು ಯಾರೂ ಕೂಡ ಬೆಳೆಸಿಕೊಂಡು ಹೋಗಬಾರದು. ಎಲ್ಲ ಧರ್ಮಗಳ ಬಾಂಧವರಲ್ಲಿ ಸೌಹಾರ್ದ ಭಾವನೆ ಉಂಟಾದರೆ ಆಗ ಭಾರತ ನಂಬರ್ ಒನ್ ಆಗಲು ಸಾಧ್ಯ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸದ ಸರ್ಕಾರ, ಅನ್ಯಾಯ ಧೋರಣೆ ತೋರುತ್ತಿದೆ: ಬಿ ಎಸ್ ಮಹೇಶ್ ಕುಮಾರ್
ಮಾನವ ಬಂದುತ್ವ ವೇದಿಕೆಯ ವಿಭಾಗೀಯ ಸಂಚಾಲಕ ಟಿ ರತ್ನಾಕರ ಮಾತನಾಡಿ, “ನಮ್ಮ ಬಳಗದಿಂದ ಮುಸ್ಲಿಂ ಬಾಂಧವರು ಏರ್ಪಡಿಸಿದ್ದ ಇಫ್ತಾರ್ ಕೂಟದಲ್ಲಿ ನಾವು ಪಾಲ್ಗೊಂಡಿದ್ದೇವೆ. ಮುಸ್ಲಿಮರು ಭಗವಂತನಿಗೆ ಸ್ಮರಣೆ ಮಾಡುತ್ತಾರೆ. ಅವರವರ ಧಾರ್ಮಿಕ ನಂಬಿಕೆ ಗೌರವಿಸಬೇಕು. ನಿಮ್ಮ ವಿಮೋಚನೆಯಲ್ಲಿ ನಾವೂ ಕೂಡ ಸೌಹಾರ್ದ ಸಂದೇಶದೊಂದಿಗೆ ಭಾಗಿಯಾಗಿದ್ದೇವೆ” ಎಂದು ಹೇಳಿದರು.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್ ಎ ಗಫಾರ್, ಹಿರಿಯ ಕಾರ್ಮಿಕ ಮುಖಂಡ ಕೆ ಬಿ ಗೋನಾಳ, ಶರಣು ಗಡ್ಡಿ, ಶರಣು ಪಾಟೀಲ್, ಕಾಶಪ್ಪ ಚಲವಾದಿ, ಹಟಗಾರ ಪೇಟೆ ಓಣಿಯ ಯುವಕರ ಕಮಿಟಿಯ ಉಪಾಧ್ಯಕ್ಷ ಸಲೀಮ್ ಹ್ಯಾಟಿ, ಗೌಸ್ ನೀಲಿ, ಮೊಹಮ್ಮದ್ ಕಾಝೀಮ್ ಸಂಗಟಿ, ಫಾರೂಖ್ ನೀಲಿ, ಮೌಲಾ ಹುಸೇನ್ ಗೊಂಡಬಾಳ, ಮರ್ದಾನ್ ಸಂಗಟಿ, ಇಮ್ರಾನ್ ಗಂಗಾವತಿ, ರಾಜಾ ಹುಸೇನ್ ಕಾತರಕಿ, ಖಲಂದರ್ ಗೊಂಡಬಾಳ, ಇಬ್ರಾಹಿಮ್ ತಂಬ್ರಳಿ, ರಿಯಾಝ್ ಸಂಗಟಿ, ಖಾಸೀಮ್ ಸಾಬ್ ಲೇಬಗೇರಿ, ಖಾಜಾ ಹುಸೇನ್ ನೀಲಿ, ಖಾಸೀಮ್ ಸಾಬ್ ನೀಲಿ ಹಾಗೂ ಇತರರು ಇದ್ದರು.