ಬೇಸಿಗೆ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಜನ-ಜಾನುವಾರುಗಳಿಗೆ ಮಾತ್ರವಲ್ಲ ಕಾಡು ಪ್ರಾಣಿಗಳಿಗೂ ತಪ್ಪಿಲ್ಲ. ಬಿಸಿಲಿನ ತಾಪಕ್ಕೆ ಕಾಡು ಒಣಗಿ ಹೋಗುತ್ತಿದೆ. ಕಾಡಿನಲ್ಲಿರುವ ಹಳ್ಳ, ಕೊಳ್ಳ, ಕೆರೆಕಟ್ಟೆಗಳು ನೀರಿಲ್ಲದೇ ಬತ್ತಿ ಹೋಗುತ್ತಿವೆ. ಇದರಿಂದ ನೀರಿನ ಅಭಾವ ಎದುರಾಗಿದ್ದು, ವನ್ಯಜೀವಿಗಳ ದಾಹ ನೀಗಿಸಲು ಟ್ಯಾಂಕರ್‌ಗಳ ಮೂಲಕ ಕೃತಕ ತೊಟ್ಟಿ ತುಂಬಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಔರಾದ್-ಕಮಲನಗರ ತಾಲ್ಲೂಕು ಸೇರಿ ಸುಮಾರು 2 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಜಿಂಕೆ, ನವಿಲು, ಕೃಷ್ಣ ಮೃಗ, ನರಿ, ಕಾಡು ಹಂದಿ, ಮುಳ್ಳಹಂದಿ, ತೋಳ ಸೇರಿದಂತೆ ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳು ಈ ಅರಣ್ಯ ಪ್ರದೇಶದಲ್ಲಿವೆ.
ಪ್ರಾಣಿ-ಪಕ್ಷಿಗಳಿಗೆ ಕಾಡಿನಲ್ಲಿರುವ ಕೆರೆ ಕಟ್ಟೆಗಳೇ ನೀರಿನ ಮೂಲ. ಅವು ಆ ನೀರು ಕುಡಿಯಬೇಕು, ಅಲ್ಲೇ ವಿಶ್ರಾಂತಿ ಪಡೆದು ಜೀವ ತಂಪಾಗಿಸಿಕೊಳ್ಳಬೇಕು. ಆದರೆ ಕೆಂಡದಂತಹ ಬಿಸಿಲಿಗೆ ತಾಲ್ಲೂಕಿನ ಜಲಮೂಲ ಬತ್ತಿ ಹೋಗಿದ್ದು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ.
ಅರಣ್ಯ ಪ್ರದೇಶದ ಒಳಭಾಗದಲ್ಲಿರುವ ಕೆರೆ–ಕಟ್ಟೆ, ಹಳ್ಳಗಳು ಬತ್ತಿ ಹೋಗಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರ ಕಂಡು ಬಂದಿದೆ. ವನ್ಯಜೀವಿಗಳು ನೀರನ್ನು ಅರಸಿ ವಸತಿ ಪ್ರದೇಶಗಳು ಹಾಗೂ ರೈತರ ತೋಟಗಳತ್ತ ಧಾವಿಸುತ್ತಿವೆ. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡ ಅರಣ್ಯ ಇಲಾಖೆ ಅಧಿಕಾರಿಗಳು ವಿವಿಧ ಅರಣ್ಯ ಪ್ರದೇಶಗಳಲ್ಲಿ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಿದ್ದಾರೆ.
ಔರಾದ್-ಕಮಲನಗರ ಅವಳಿ ತಾಲ್ಲೂಕಿನ ಚಟ್ನಾಳ, ಗಡಿಕುಶನೂರ, ಆಲೂರ(ಕೆ), ಬಾಲೂರ್(ಕೆ), ಖಾನಾಪುರ, ಆಲೂರ(ಬಿ) ಹಾಗೂ ಚಿಂತಾಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ 5 ಅಡಿ ಆಳ ಮತ್ತು 3 ಮೀಟರ್ ಸುತ್ತಳತೆಯ ಕೃತಕ ಸಿಮೆಂಟ್ ತೊಟ್ಟಿಗಳು ನಿರ್ಮಿಸಲಾಗಿದೆ.

ʼಕಳೆದ ಎರಡ್ಮೂರು ವರ್ಷದ ಹಿಂದೆ ಔರಾದ್ ವಲಯದ ಅರಣ್ಯ ಪ್ರದೇಶದಲ್ಲಿ 7 ನೀರಿನ ಸಿಮೆಂಟ್ ಗುಂಡಿ ನಿರ್ಮಿಸಲಾಗಿದೆ. ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ನೀರು ತುಂಬಿಸಿ ವನ್ಯಜೀವಿಗಳಿಗೆ ಅನುಕೂಲ ಮಾಡಲಾಗುತ್ತಿದೆ. ಪ್ರತಿಯೊಂದು ನೀರಿನ ಗುಂಡಿಗೆ 2 ಟ್ಯಾಂಕರ್ ನೀರನ್ನು ಪ್ರತಿ 20 ರಿಂದ 25 ದಿನಗಳಿಗೆ ಒಮ್ಮೆ ಪೂರೈಕೆ ಮಾಡಲಾಗುತ್ತಿದೆʼ ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಔರಾದ್ ಕ್ಷೇತ್ರದ 40 ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ : ಶಾಸಕ ಪ್ರಭು ಚವ್ಹಾಣ ಪ್ರಶ್ನೆಗೆ ಸಚಿವ ಮಧು ಬಂಗಾರಪ್ಪ ಉತ್ತರ
ʼಬೇಸಿಗೆಯಲ್ಲಿ ಸಹಜವಾಗಿ ನೀರಿನ ಮೂಲಗಳು ಬತ್ತಿ ಹೋಗುತ್ತವೆ. ಪ್ರತಿ ವರ್ಷದಂತೆ ಈ ಬಾರಿಯೂ ಅರಣ್ಯ ಪ್ರದೇಶದ ವಿವಿಧೆಡೆ ಸಿಮೆಂಟ್ ತೊಟ್ಟಿಗಳಲ್ಲಿ ಟ್ಯಾಂಕರ್ ಮೂಲಕ ನೀರು ತುಂಬಿಸಿ ವನ್ಯಜೀವಿಗಳ ಬಾಯಾರಿಕೆ ತಣಿಸಲಾಗುತ್ತಿದೆ. ಬೇಸಿಗೆ ಮುಗಿಯುವರೆಗೆ ನೀರಿನ ತೊಟ್ಟಿಗಳಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆʼ ಎಂದು ವಲಯ ಅರಣ್ಯಾಧಿಕಾರಿ ಮುದಾಶೀರ್ ಅಹ್ಮದ್ ʼಈದಿನ.ಕಾಮ್ʼಗೆ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.