- ಸಂಸ್ಥಾಪನಾ ದಿನ ಆಚರಣೆ ವಿರೋಧಿಸಿ ಆನಂದ ಬೋಸ್ ಅವರಿಗೆ ಪತ್ರ ಬರೆದಿದ್ದ ಮಮತಾ
- ಕೋಲ್ಕತ್ತದ ರಾಜಭವನದಲ್ಲಿ ರಾಜ್ಯದ ಸಂಸ್ಥಾಪನಾ ದಿನ ಆಚರಣೆ ಕಾರ್ಯಕ್ರಮ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಕ್ಷೇಪದ ನಡುವೆಯೂ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಕೋಲ್ಕತ್ತದ ರಾಜಭವನದಲ್ಲಿ ರಾಜ್ಯದ ‘ಸಂಸ್ಥಾಪನಾ ದಿನ’ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಹಿಂಸಾಚಾರದ ಬಗ್ಗೆ ಶೂನ್ಯ ಸಹಿಷ್ಣು ಭಾವ ಮತ್ತು ಸಾಮಾನ್ಯ ಜನರು ಮುಕ್ತ ಮತದಾನದ ಹಕ್ಕು ಹೊಂದಿರುವ ಬಗ್ಗೆ ಕಾರ್ಯಕ್ರಮದಲ್ಲಿ ಬೋಸ್ ಮಾತನಾಡಿದರು.
ಆನಂದ ಬೋಸ್ ಅವರು ರಾಜ್ಯದ ಬಗ್ಗೆ ಮಾತನಾಡಿ, “ನಾನು ರಾಜ್ಯದ ಜನರ ಕಲ್ಯಾಣಕ್ಕಾಗಿ ಬದ್ಧನಾಗಿದ್ದೇನೆ. ಪಶ್ಚಿಮ ಬಂಗಾಳ ರಾಜ್ಯವು ಅಪಾರ ಸಾಮರ್ಥ್ಯವನ್ನು ಹೊಂದಿದ್ದು ಪ್ರತಿಭೆಗಳ ಕಣಜವಾಗಿದೆ” ಎಂದು ಹೇಳಿದರು.
ಸಮಾರಂಭದಲ್ಲಿ ರಾಜ್ಯ ಸರ್ಕಾರದ ಯಾವ ಪ್ರತಿನಿಧಿಗಳೂ ಭಾಗವಹಿಸಿರಲಿಲ್ಲ. ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು.
ಆನಂದ ಬೋಸ್ ಅವರು ರಾಜ್ಯದ ಸಂಸ್ಥಾಪನಾ ದಿನ ಆಚರಿಸುವುದಾಗಿ ಸೋಮವಾರ ಘೋಷಿಸಿದ್ದರು. ಇದಕ್ಕೆ ಮಮತಾ ಬ್ಯಾನರ್ಜಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಏಕಪಕ್ಷೀಯ ನಿರ್ಧಾರ ಎಂದು ಹೇಳಿದ್ದರು.
“ಬಂಗಾಳದ ವಿಭಜನೆಯಿಂದ ಇಲ್ಲಿನ ಜನತೆಗೆ ಎಷ್ಟು ನೋವಾಗಿತ್ತೆಂದರೆ ಸ್ವಾತಂತ್ರ್ಯ ಬಂದ ನಂತರವೂ ಸಹ ರಾಜ್ಯದಲ್ಲಿ ರಾಜ್ಯ ಸ್ಥಾಪನಾ ದಿನವನ್ನು ಯಾರೂ ಆಚರಿಸಿಲ್ಲ” ಎಂದು ಆಘಾತ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲ ಆನಂದ ಬೋಸ್ ಅವರಿಗೆ ಸೋಮವಾರ ಪತ್ರ ಬರೆದಿದ್ದರು.
“ರಾಜ್ಯ ಸಂಸ್ಥಾಪನಾ ದಿನ ಆಚರಿಸಲು ಜೂ.20 ರಂದು ಕೋಲ್ಕತ್ತದಲ್ಲಿನ ರಾಜಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದಕ್ಕೆ ನಿರ್ಧರಿಸಿರುವುದನ್ನು ಕೇಳಿ ನನಗೆ ಆಘಾತ ಉಂಟಾಗಿದೆ” ಎಂದು ಹೇಳಿದ್ದರು.
“ರಾಜ್ಯದ ವಿಭಜನೆಯು ಗಡಿಯಲ್ಲಿನ ಲಕ್ಷಾಂತರ ಜನರ ತೆರವು ಕಾರ್ಯ ಮತ್ತು ಅಸಂಖ್ಯಾತ ಕುಟುಂಬಗಳ ಸಾವು ಹಾಗೂ ಸ್ಥಳಾಂತರವನ್ನು ಒಳಗೊಂಡಿತ್ತು” ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಉಲ್ಲೇಖಿಸಿದ್ದರು.
1947ರ ಜೂನ್ 20 ರಂದು ಅವಿಭಜಿತ ಬಂಗಾಳ ರಾಜ್ಯವನ್ನು ಇಬ್ಭಾಗ ಮಾಡಿ ಪಶ್ಚಿಮ ಬಂಗಾಳವನ್ನಾಗಿ ಮಾಡಲಾಯಿತು. ಇದು ಅತ್ಯಂತ ನೋವಿನ ಹಾಗೂ ಆಘಾತಕಾರಿ ಪ್ರಕ್ರಿಯೆಯಾಗಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೊಬೈಲ್ ಕೊಡದೆ ಕಟ್ಟುನಿಟ್ಟು ಮಾಡಿದ್ದಕ್ಕೆ ತಾಯಿಯನ್ನೇ ಕೊಲ್ಲಲು ಹೊರಟ ಮಗಳು!
ಆನಂದ ಬೋಸ್ ಅವರ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಏಕಪಕ್ಷೀಯ ಎಂದು ಕರೆದಿತ್ತು.