ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದವರ ಮನೆಗಳನ್ನೇ ಗುರಿಯಾಗಿಸಿಕೊಂಡು ಲಕ್ಷಾಂತರ ರೂ ಹಣ, ಬೆಳ್ಳಿ, ಬಂಗಾರ ಕದಿಯುತ್ತಿದ್ದ ಕಳ್ಳರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮನಗರದ ಅಬ್ದುಲ್ ಶಫೀಕ್ ಅಬ್ದುಲ್ ರಶೀದ್ (21), ಸೂಳೆಬೈಲ್‌ನ ಖಲೀಲ್ ಖಾನ್ (24), ಜೆ.ಪಿ. ನಗರದ ಸೈಯದ್ ಜಾವೀದ್ @ ಶೋಯೆಬ್ (23) ಬಂಧಿತ ಆರೋಪಿಗಳು.
ಕಳೆದ ಜನವರಿ 20ರಂದು ಕಳಸಗುಂಡಿ ನಿವಾಸಿ ಉಮೇಶ್ ಮನೆಯ ಹೆಂಚು ತೆಗೆದು ಒಳ ನುಗ್ಗಿ, ಬೀರುವಿನಲ್ಲಿ ಇಟ್ಟಿದ್ದ ಅಂದಾಜು ಮೌಲ್ಯ ₹4,93,000ಗಳ ಬೆಳ್ಳಿ ಹಾಗೂ ಬಂಗಾರದ ಆಭರಣಗಳು ಮತ್ತು ನಗದು ಕಳ್ಳತನವಾಗಿದೆ ಎಂದು ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಂಧಿತರಿಂದ ಸದರಿ ಪ್ರರಕಣವೂ ಸೇರಿದಂತೆ, ಮಾಳೂರು ಠಾಣೆಯಲ್ಲಿ ವರದಿಯಾದ 2 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂದಾಜು ಮೌಲ್ಯ ₹80,000ಗಳ ಸುಜುಕಿ ಆಕ್ಸೆಸ್ ಸ್ಕೂಟರ್, ₹5,50,000 ಮೌಲ್ಯದ 72 ಗ್ರಾಂ ತೂಕದ ಬಂಗಾರದ ಆಭರಣಗಳು, ₹22,000 ಮೌಲ್ಯದ 265 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು ₹6,52,000 ರೂಪಾಯಿಯ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
