ಆಂಧ್ರಪ್ರದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣಾ) ಕಾಯ್ದೆ 2019ರ ಅಡಿಯಲ್ಲಿ ಮೊದಲ ಪ್ರಕರಣ ದಾಖಲಾಗಿದೆ. ವಿಶಾಖಪಟ್ಟಣದಲ್ಲಿ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 8ರಂದು ದಲಿತ ಸಮುದಾಯದ ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಸಿನಿಮಾ ನೋಡಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಆಕೆ ವಿಶಾಖಪಟ್ಟಣದ ಜಗದಾಂಬ ಜಂಕ್ಷನ್‌ನಿಂದ ಹನುಮಂತವಾಕ ಎನ್ನುವ ಪ್ರದೇಶಕ್ಕೆ ಹೋಗಲು ಆಟೋ ಹತ್ತಿದ್ದರು. ಅದರಲ್ಲಿ ಅಷ್ಟೊತ್ತಿಗಾಗಲೇ ಮೂವರು ಪ್ರಯಾಣಿಕರಿದ್ದರು. ಸ್ವಲ್ಪ ಹೊತ್ತಿನ ನಂತರ ಆ ಮೂವರು ಆಕೆಯ ದೇಹದ ವಿವಿಧ ಭಾಗಗಳನ್ನು ಅಸಭ್ಯವಾಗಿ ಮುಟ್ಟಿ, ದೌರ್ಜನ್ಯ ಎಸಗಿದರು. ದಾರಿ ಮಧ್ಯೆಯೇ ಆಟೋದಿಂದಿಳಿದ ತನ್ನ ಮೇಲೆ ಆಟೋ ಡ್ರೈವರ್ ಸೇರಿದಂತೆ ನಾಲ್ವರೂ ಹಲ್ಲೆ ಮಾಡಿ, ತಲೆ ಮೇಲೆ ಹೊಡೆದಿದ್ದಾರೆ ಎಂದು ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಪೊಲೀಸರು ವಾಸುಪಲ್ಲಿ ಶ್ರೀನಿವಾಸ್, ಹನೀಶ್ ಕುಮಾರ್, ಸತೀಶ್ ಕುಮಾರ್ ಮತ್ತು ಮನೋಜ್ ಕುಮಾರ್ ಎನ್ನುವವರನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ಇಂದಿರಾ ಕ್ಯಾಂಟೀನ್ | ಇನ್ಮುಂದೆ ಬಿಸಿಬಿಸಿ ರಾಗಿ ಮುದ್ದೆ ಜತೆಗೆ ಪಾಯಸ
ಲೈಂಗಿಕ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣಾ) ಕಾಯ್ದೆ2019ರ ಅಡಿಯಲ್ಲಿ ಆಂಧ್ರದಲ್ಲಿ ದಾಖಲಾದ ಮೊದಲ ಪ್ರಕರಣವಿದು ಎಂದು ಎಸಿಪಿ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ರಕ್ಷಣಾ ವಿಭಾಗದ ನೋಡಲ್ ಆಫೀಸರ್ ಆದ ವಿವೇಕಾನಂದ ತಿಳಿಸಿದ್ದಾರೆ.
ಈ ಪ್ರಕರಣವನ್ನು ದಿಶಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಪೋಕ್ಸೋ ಪ್ರಕರಣಗಳ ತ್ವರಿತ ವಿಚಾರಣೆಗೆ ದಿಶಾ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ.