ವಿಷಮ ಭಾರತ | ಕಾನ್ಶೀರಾಮ್ ಚಮಚಾಗಳೆಂದು ಕರೆದದ್ದು ಯಾರ್ಯಾರನ್ನು?

Date:

Advertisements

ದಲಿತ ಜನಪ್ರತಿನಿಧಿಗಳನ್ನು ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳ ಚಮಚಾಗಳನ್ನಾಗಿ ಮಾಡಿಕೊಳ್ಳಲು ಸವರ್ಣೀಯ ಹಿಂದೂ ನಾಯಕರು ಪೂನಾ ಒಪ್ಪಂದ ಎಂಬ ಭಾರೀ ಹತಾರನ್ನು ಬಳಸಿದರೆಂದು ಬಹುಜನ ನಾಯಕ ಕಾನ್ಶೀರಾಮ್‌ ಹೇಳುತ್ತಾರೆ. ಪೂನಾ ಒಪ್ಪಂದದ ಯುಗವನ್ನು ‘ಬಾಲಬಡುಕರ ಯುಗ’ ಅಥವಾ ‘ಚಮಚಾ ಯುಗ’ ಎಂದು ಬಣ್ಣಿಸಿದ್ದಾರೆ.

ಜಾತಿಪದ್ಧತಿಯ ಅಮಾನುಷ ಹಿಡಿತದಿಂದ ದಲಿತರನ್ನು ಪಾರು ಮಾಡಲು ಬದುಕಿಡೀ ಶ್ರಮಿಸಿದವರು ಮಾನ್ಯವರ ಕಾನ್ಶೀರಾಮ್‌. ‘ನಾನು ಮದುವೆಯಾಗುವುದಿಲ್ಲ, ಆಸ್ತಿಪಾಸ್ತಿ ಗಳಿಸುವುದಿಲ್ಲ, ನನ್ನ ಮನೆಗೆ ಮರಳುವುದಿಲ್ಲ, ಫುಲೆ-ಶಾಹು-ಅಂಬೇಡ್ಕರ್ ಆಂದೋಲನದ ಗುರಿಗಳ ಸಾಧನೆಗೆ ಬದುಕನ್ನು ಮುಡಿಪಾಗಿಡುತ್ತೇನೆ’ ಎಂದು ಸಾರಿದರು. ಆಡಿದ ನುಡಿಗಳನ್ನು  ಅಕ್ಷರಶಃ ನಡೆಸಿಕೊಟ್ಟರು.

1971ರಲ್ಲಿ ಅಖಿಲ ಭಾರತ ಎಸ್ಸಿ, ಎಸ್ಟಿ, ಒ.ಬಿ.ಸಿ. ಹಾಗೂ ಮೈನಾರಿಟಿ ಎಂಪ್ಲಾಯೀಸ್ ಅಸೋಸಿಯೇಷನ್ ಸ್ಥಾಪಿಸಿದರು. ಏಳು ವರ್ಷಗಳ ನಂತರ ಇದೇ ಸಂಘಟನೆ BAMCEF ಎಂದಾಯಿತು. ಸರ್ಕಾರಿ ಉದ್ಯೋಗಗಳನ್ನು ಪಡೆದು ಆರ್ಥಿಕ ಸ್ಥಿರತೆಯನ್ನು ಗಳಿಸಿದವರು ಋಣ ತೀರಿಸಬೇಕು ಎಂಬುದು ಅವರ ಸಂದೇಶವಾಗಿತ್ತು. 1981ರಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (DS4). ಈ ಸಂಘಟನೆ 1984ರಲ್ಲಿ ಬಹುಜನ ಸಮಾಜ ಪಾರ್ಟಿಯ ರೂಪ ತಳೆಯಿತು. 

Advertisements

ಮೇಲ್ಜಾತಿಗಳು ಬ್ರಿಟಿಷರಿಂದ ತಮ್ಮ ಬಿಡುಗಡೆಗಾಗಿ ಹೋರಾಡುತ್ತಿದ್ದ ಅದೇ ಸನ್ನಿವೇಶದಲ್ಲಿ, ಮೇಲ್ಜಾತಿಗಳ ದಾಸ್ಯದಿಂದ ಬಿಡುಗಡೆಯಾಗಲು ದಲಿತರು ಹೋರಾಡುತ್ತಿದ್ದರು. ಹೀಗಾಗಿ ಬ್ರಿಟಿಷರ ಭಾರತದಲ್ಲಿ ದಲಿತ ದಮನಿತರು ಗುಲಾಮರ ಗುಲಾಮರಾಗಿದ್ದರು ಎಂದು ಸಂಕಟದಿಂದ ವಿವರಿಸುತ್ತಾರೆ ಮಾನ್ಯವರ ಕಾನ್ಶೀರಾಮ್‌. ಬ್ರಿಟಿಷರು ತಮ್ಮ ಜೊತೆ ತಂದ ಪಾಶ್ಚಿಮಾತ್ಯ ಚಿಂತನೆಯು ಭಾರತದ ದಲಿತ-ದಮನಿತರಲ್ಲಿ ಜಾತಿಪದ್ಧತಿಯಿಂದ ಬಿಡುಗಡೆ ಆಗಬೇಕೆಂಬ ಹೋರಾಟದ- ಆತ್ಮಸಮ್ಮಾನದ ಕಿಡಿಯನ್ನು ಹೊತ್ತಿಸಿತು.

ದಲಿತ ಜನಪ್ರತಿನಿಧಿಗಳನ್ನು ಕಾಂಗ್ರೆಸ್ ಮತ್ತು ಇತರೆ ರಾಜಕೀಯ ಪಕ್ಷಗಳ ಚಮಚಾಗಳನ್ನಾಗಿ ಮಾಡಿಕೊಳ್ಳಲು ಸವರ್ಣೀಯ ಹಿಂದೂ ನಾಯಕರು ಪೂನಾ ಒಪ್ಪಂದ ಎಂಬ ಭಾರೀ ಹತಾರನ್ನು ಬಳಸಿದರೆಂದು ಬಹುಜನ ನಾಯಕ ಕಾನ್ಶೀರಾಮ್‌ ಹೇಳುತ್ತಾರೆ. ಪೂನಾ ಒಪ್ಪಂದದ ಯುಗವನ್ನು ‘ಬಾಲಬಡುಕರ ಯುಗ’ ಅಥವಾ ‘ಚಮಚಾ ಯುಗ’ ಎಂದು ಬಣ್ಣಿಸಿದ್ದಾರೆ.

ದಲಿತರ ರಾಜಕೀಯ ಸ್ವಾತಂತ್ರ್ಯ ಮತ್ತು ರಾಜಕೀಯ ಆಶೋತ್ತರಗಳನ್ನು ಪೂನಾ ಒಪ್ಪಂದವು ಮೇಲ್ಜಾತಿಗಳ ಗುಲಾಮಗಿರಿಗೆ ತಳ್ಳಿತು. ಪ್ರತ್ಯೇಕ ಮತಕ್ಷೇತ್ರಗಳು ದಲಿತರನ್ನು ಹಿಂದೂ ಸಮಾಜದಿಂದ ದೂರ ಮಾಡುತ್ತವೆಂದು ಅವುಗಳ ರಚನೆಯನ್ನು ವಿರೋಧಿಸಿ ಆಮರಣಾಂತ ಉಪವಾಸ ಕುಳಿತಿದ್ದರು ಗಾಂಧೀಜಿ. ಗಾಂಧೀಯವರ ಜೀವಕ್ಕೆ ಆಪತ್ತು ತಂದ ಅಪಕೀರ್ತಿ ತಮ್ಮ ಮೇಲೆ ಬಂದೀತೆಂದು ಬಾಬಾ ಸಾಹೇಬರು ಪ್ರತ್ಯೇಕ ಮತಕ್ಷೇತ್ರಗಳ ಬೇಡಿಕೆಯನ್ನು ಕೈಬಿಡಬೇಕಾಯಿತು. ಒಪ್ಪಂದದ ಮರುದಿನದಿಂದಲೇ ಅದನ್ನು ವಿರೋಧಿಸಿದರು. ತಮ್ಮ ಬದುಕಿನ ಕಡೆಯ ದಿನದ ತನಕ ವಿರೋಧಿಸಿದರು.

‘ಚಮಚಾ ಯುಗ’ ಪುಸ್ತಕ 1982ರ ಸೆಪ್ಟಂಬರ್ 24ರ ಪೂನಾ ಒಪ್ಪಂದದ 50ನೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಕಟವಾಯಿತು. ಚಮಚಾ ಯುಗವನ್ನು ಅಂತ್ಯಗೊಳಿಸುವುದೇ ಈ ಕೃತಿಯ ಉದ್ದೇಶವಾಗಿತ್ತು. 1932ರ ಸೆಪ್ಟಂಬರ್ 24ರಂದು ಪೂನಾದಲ್ಲಿ ಗಾಂಧೀಜಿ ಮತ್ತು ಬಾಬಾಸಾಹೇಬರ ನಡುವೆ ನಡೆದ ಒಪ್ಪಂದವೇ ಪೂನಾ ಒಪ್ಪಂದ.

ದಲಿತರು ಅಥವಾ ದಮನಿತ ವರ್ಗಗಳಿಂದ ಪ್ರತ್ಯೇಕ ಮೀಸಲು ಕ್ಷೇತ್ರಗಳನ್ನು ಕಸಿದುಕೊಂಡು ಅವರ ಮೇಲೆ ಏಕ ಮತಕ್ಷೇತ್ರಗಳನ್ನು ಹೇರಿತ್ತು ಈ ಒಪ್ಪಂದ. ಮೀಸಲು ಕ್ಷೇತ್ರಗಳಿಂದ ಗೆಲ್ಲಬೇಕಿದ್ದರೆ ಎಸ್.ಸಿ. ಮತ್ತು ಎಸ್.ಟಿ. ಉಮೇದುವಾರರಿಗೆ ದೊಡ್ಡ ಪಕ್ಷಗಳು ಮತ್ತು ಸವರ್ಣೀಯ ಹಿಂದೂಗಳ ಬೆಂಬಲ ಅನಿವಾರ್ಯ ಆಯಿತು. ಗೆಲುವಿನ ‘ಋಣ’ ತೀರಿಸಲು ಆ ದೊಡ್ಡ ಪಕ್ಷ ಅಥವಾ ಸವರ್ಣೀಯ ಹಿಂದುಗಳ ಚಮಚಾ- ಬಾಲಬಡುಕರಾಗಲು ಸಂತೋಷದಿಂದ ಸಿದ್ಧವಾಗುತ್ತಿದ್ದರು ಈ ಅಭ್ಯರ್ಥಿಗಳು.

ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡಿದ್ದ ಪಕ್ಷದಲ್ಲಿ ದಲಿತ-ದಮನಿತರಿಗೆ 78 ಕ್ಷೇತ್ರಗಳು ದೊರೆಯುತ್ತಿದ್ದವು. ಪೂನಾ ಒಪ್ಪಂದದಲ್ಲಿ 148 ಸೀಟುಗಳು ದೊರೆತವು ಎಂಬುದು ಹೌದು. ಆದರೆ  ದಲಿತರು ತಮ್ಮ ಅಭ್ಯರ್ಥಿ ಮತ್ತು ಇತರೆ ಅಭ್ಯರ್ಥಿ ಇಬ್ಬರಿಗೂ ಮತ ನೀಡುವ ಅವಕಾಶ ತಪ್ಪಿ ಹೋಯಿತು. ದಲಿತರಿಂದ ಆಯ್ಕೆಯಾದ ಅಭ್ಯರ್ಥಿ ಮೇಲ್ಜಾತಿಗಳ ಜೊತೆಗೆ ಯಾವುದೇ ರಾಜಿ ಮಾಡಿಕೊಳ್ಳುವ ಅಗತ್ಯ ಇರಲಿಲ್ಲ. ಯಾವುದೇ ಮುಲಾಜಿಗೆ ಒಳಗಾಗದೆ ದಲಿತ ದಮನಿತರ ಹಿತಕ್ಕಾಗಿ ಹೋರಾಡಬಹುದಿತ್ತು. ದಲಿತರಿಗೆ ಎರಡು ಮತಗಳನ್ನು ನೀಡುವ ಅಧಿಕಾರ ಇದ್ದಿದ್ದರೆ ಸವರ್ಣೀಯರು ತಾವು ಗೆಲ್ಲಲು ದಲಿತರ ಮತಗಳನ್ನೂ ಅವಲಂಬಿಸಬೇಕಾಗಿ ಬರುತ್ತಿತ್ತು. ಪರಿಣಾಮವಾಗಿ ಅವರು ತಮ್ಮ ಕ್ಷೇತ್ರದ ದಲಿತ ದಮನಿತರ ಹಿತವನ್ನು ಕಡೆಗಣಿಸಲು ಆಗುತ್ತಿರಲಿಲ್ಲ ಎಂಬ ವಾದವನ್ನು ಕಾನ್ಶೀರಾಮ್‌ ‘ಚಮಚಾ ಯುಗ’ದಲ್ಲಿ ಮರುಪ್ರತಿಪಾದಿಸಿದ್ದಾರೆ.

ದಲಿತರು ದಮನಿತರ ಪ್ರತಿಧಿಗಳಾಗುವ ಮತ್ತು ಅವರ ಅನುವು ಅಗತ್ಯಗಳಿಗಾಗಿ ಹೋರಾಡಬೇಕಿದ್ದ ಈ ಚಮಚಾಗಳು ತಮ್ಮ ರಾಜಕೀಯ ಒಡೆಯರ ‘ಹೌದಪ್ಪ’ಗಳಾದರು. ತಮ್ಮ ಹಿತಗಳಿಗೆ ಅನುಕೂಲ ಎನಿಸಿದ ಮೀಸಲು ಅಭ್ಯರ್ಥಿಯನ್ನು ಮುಖ್ಯ ಪಕ್ಷಗಳ ಮೇಲ್ಜಾತಿಗಳೇ ತೀರ್ಮಾನಿಸಿ ಆರಿಸಲು ತೊಡಗಿದವು. ಈ ದುಸ್ಥಿತಿ ಇಂದಿಗೂ ಬದಲಾಗಿಲ್ಲ. ದಲಿತರ ಮೇಲೆ ಹೇರಲಾದ ಪೂನಾ ಒಪ್ಪಂದದ ಹಿನ್ನೆಲೆಯಲ್ಲಿ ಗಾಂಧೀಯವರೇ ‘ಚಮಚಾ ಯುಗದ ಪಿತಾಮಹ’ ಎಂದು ಬಣ್ಣಿಸುತ್ತಾರೆ ಕಾನ್ಶೀರಾಮ್‌.  

ಪೂನಾ ಒಪ್ಪಂದದ ಕಾರಣ ದಲಿತರು ಹಿಂದೂಗಳ ಉಪಕರಣಗಳಾದರು (ಟೂಲ್ಸ್), ಏಜೆಂಟರಾದರು, ಬಾಲಬಡುಕರಾದರು ಎಂಬ ಮಾತನ್ನು  ಡಾ.ಅಂಬೇಡ್ಕರ್ ಆಡುತ್ತಾರೆ. ಉಪಕರಣ, ಏಜೆಂಟ್, ಬಾಲಬಡುಕರನ್ನು ಚಮಚಾಗಳು ಅಂತಲೂ ಕರೆಯಬಹುದು. ಚಮಚೆಯು ಬಳಸುವವರ ಕೈಯಲ್ಲಿನ ಉಪಕರಣವೇ ವಿನಾ ತನ್ನಷ್ಟಕ್ಕೆ ತಾನೇ ಸ್ವತಂತ್ರ ಅಲ್ಲ. ಹೀಗೆ ಬಳಸುವವರು ತಮ್ಮ ಮತ್ತು ತಮ್ಮ ಸಮುದಾಯಗಳ ಹಿತ ಕಾಯುತ್ತಾರೆಯೇ ವಿನಾ ಚಮಚಾಗಳ ಹಿತವನ್ನು ಅಲ್ಲ. ಚಮಚಾ ಯುಗವು ದಲಿತರನ್ನು ಬೆಳಕಿನತ್ತ ಒಯ್ಯುವುದು ಬಾಬಾಸಾಹೇಬರ ಗುರಿಯಾಗಿತ್ತು. ಆದರೆ ಅದರ ಬದಲು ದಮನಿತರನ್ನು ಮತ್ತಷ್ಟು ಕತ್ತಲೆ ಯುಗಕ್ಕೆ ಜಾರಿಸಿತು ಚಮಚಾಯುಗ. ದಲಿತ ದಮನಿತ ಚಮಚಾಗಳನ್ನು ಮೇಲ್ಜಾತಿಗಳು ತಮ್ಮ ಹಿತಕ್ಕಾಗಿ ತಯಾರು ಮಾಡಿಕೊಂಡವು. ನೈಜ ಮತ್ತು ಸಶಕ್ತ ದಲಿತ ಹೋರಾಟಗಾರರ ವಿರುದ್ಧ ಹೂಡಲೂ ಈ ಚಮಚಾಗಳನ್ನು ಬಳಸಿಕೊಳ್ಳಲಾಯಿತು ಎಂದು ಕಾನ್ಶೀರಾಮ್‌ ಅವರು ವಾದಿಸುತ್ತಾರೆ.

 “ನೀವು ಯಾರನ್ನಾದರೂ ಚಮಚಾ ಎಂದು ಕರೆದರೆ ಅವರಿಗೆ ಅದು ಇಷ್ಟವಾಗದೆ ಇರಬಹುದು. ಆದರೆ ಆ ಯುಗವನ್ನೇ ಚಮಚಾ ಯುಗ ಎಂದು ಕರೆದರೆ ನೀವು ಅನೇಕ ಮಂದಿಯನ್ನು ಕಚ್ಚುತ್ತೀರಿ. ಅವರು ನಿಮ್ಮನ್ನೇ ತಿರುಗಿ ಹೊಡೆಯಬಹುದು. ಆದರೆ  ತನ್ನಷ್ಟಕ್ಕೆ ತಾನೇ ಚಲಿಸುವ ಶಕ್ತಿ ಚಮಚಕ್ಕೆ ಇಲ್ಲ. ಚಮಚೆಯನ್ನು ಬಳಸುವವರು ಚಮಚೆಯಿಂದ ನಿಮ್ಮನ್ನು ಹೊಡೆಯಲು ಬಹುದು. ಹೀಗಾಗಿ ‘ಚಮಚಾ ದಾಳಿ’ಗೆ ನಾವು ತಯಾರಿರಬೇಕು”.

“ಚಮಚ ಎಂಬುದು ಅಂತಹ ಶಕ್ತಿಯುತ ಅಥವಾ ಭಯಾನಕ ಹತಾರೇನೂ ಅಲ್ಲ. ಹೀಗಾಗಿ ಅದನ್ನು ಕಂಡು ನಾವು ಭಯಪಡಬೇಕಿಲ್ಲ. ಜೊತೆಗೆ ನಾವು ಗುರಿ ಇಡಬೇಕಿರುವುದು ಚಮಚೆಯನ್ನು ಬಳಸುವ ಕೈಯ ಮೇಲೆಯೇ ವಿನಾ ಚಮಚೆಯ ಮೇಲೆ ಅಲ್ಲ. ಕೈಯ ಮೇಲೆ ಹೊಡೆದರೆ ಚಮಚೆ ಕೆಳಕ್ಕೆ ಬೀಳುತ್ತದೆ. ನೆಲಕ್ಕೆ ಬಿದ್ದ ಚಮಚ ನಿಜಕ್ಕೂ ನಿರಪಾಯಕಾರಿ. ಹೀಗೆ ಹತ್ತು ವರ್ಷಗಳ ಅವಧಿಯಲ್ಲೇ ಚಮಚಾ ಯುಗವನ್ನು ಅಂತ್ಯಗೊಳಿಸಲು ಆಶಿಸುತ್ತೇವೆ” ಎಂಬುದಾಗಿ ಕಾನ್ಶೀರಾಮ್‌ ಅವರು ದಲಿತರ ಶತ್ರುಗಳನ್ನು ಮತ್ತು ಅವರನ್ನು ಎದುರಿಸುವ ಬಗೆಯನ್ನು ನಿಚ್ಚಳವಾಗಿ ಗುರುತಿಸಿದ್ದಾರೆ.

ಹೋರಾಟಗಾರರು ಚಮಚಾಗಳಲ್ಲ

ದಲಿತ ಹೋರಾಟಗಾರರನ್ನು ಚಮಚಾಗಳೆಂದು ಭಾವಿಸಕೂಡದು. ಹೋರಾಟಗಾರರು ವಿಧೇಯರಾಗಿರುತ್ತಾರೆ. ಆದರೆ, ಚಮಚಾಗಳು ಅಧೀನರಾಗಿರುತ್ತಾರೆ. ವಿಧೇಯತೆ ಮತ್ತು ಅಧೀನತೆಯ ನಡುವಣ ವ್ಯತ್ಯಾಸವನ್ನು ತಿಳಿಯಬೇಕು.

ಚಮಚಾಗಳಲ್ಲಿ ಎಷ್ಟು ವಿಧ?

ಜಾತಿ ಮತ್ತು ಸಮುದಾಯ ಆಧಾರಿತ ಚಮಚೆಗಳು, ಪರಿಶಿಷ್ಟ ಜಾತಿಗಳ ಅರೆ ಮನಸ್ಸಿನ ಚಮಚೆಗಳು, ಬುಡಕಟ್ಟುಗಳ ಪ್ರತ್ಯಕ್ಷ ಚಮಚೆಗಳು, ಒಬಿಸಿ ಚಮಚೆಗಳು, ಅಸಹಾಯಕ ಅಲ್ಪಸಂಖ್ಯಾತ ಚಮಚೆಗಳು, ರಾಜಕೀಯ ಪಕ್ಷಾಧಾರಿತ ಚಮಚೆಗಳು, ಅಜ್ಞಾನಿ ಚಮಚೆಗಳು, ಅರಿವು ಹೊಂದಿದ ಅಥವಾ ಅಂಬೇಡ್ಕರ್ ವಾದಿ ಚಮಚೆಗಳು, ಚಮಚೆಗಳ ಚಮಚೆಗಳು, ವಿದೇಶದಲ್ಲಿ ವಾಸಿಸುವ ಅವಕಾಶವಾದಿ ‘ಅಸ್ಪೃಶ್ಯ’ ಚಮಚೆಗಳು ಎಂಬುದಾಗಿ ಕಾನ್ಶೀರಾಮ್‌ ಅವರು ಚಮಚೆಗಳನ್ನು ವರ್ಗೀಕರಿಸಿದ್ದಾರೆ.

ಚಮಚಾ ಯುಗ ಎಲ್ಲಿಯ ತನಕ ಮುಂದುವರೆಯುತ್ತದೆ?

ದಮನಕಾರರು ಮತ್ತು ದಮನಿತರ ನಡುವಣ ಸಂಘರ್ಷ ಎಲ್ಲಿಯವರೆಗೆ ಮುಂದುವರೆಯುತ್ತದೆಯೋ, ಅಲ್ಲಿಯವರೆಗೆ ಚಮಚಾ ಯುಗವೂ ಮುಂದುವರೆಯುತ್ತದೆ. ಚಮಚಾ ಯುಗವು ದಲಿತರ ಹೋರಾಟಗಳ ಮೇಲೆ ನೇತ್ಯಾತ್ಮಕ ಪರಿಣಾಮ ಬೀರುತ್ತ ಬಂದಿದೆ, ದಲಿತ ನೇತೃತ್ವ ಸೃಷ್ಟಿಯಾಗದಂತೆ ತಡೆಯುತ್ತ ಬಂದಿದೆ. ಚಮಚಾ ಯುಗದ ವಿರುದ್ಧ ದಲಿತರಲ್ಲಿ ಜಾಗೃತಿ ಮೂಡಿಸಬೇಕಿದೆ. ಈ ದಿಸೆಯಲ್ಲಿ ಅವರಿಗೆ ಶಿಕ್ಷಣ ನೀಡಿ ಹೋರಾಟಕ್ಕೆ ತೊಡಗಿಸಬೇಕಿದೆ. ಸಮಾನತೆಯ ಹೋರಾಟದ ಸಾಮಾಜಿಕ ಕ್ರಿಯಾ ಯೋಜನೆಗಳನ್ನು ರೂಪಿಸಬೇಕಿದೆ. ಈ ದಿಸೆಯಲ್ಲಿ ದಲಿತರ ಸ್ವತಂತ್ರ ರಾಜಕೀಯ ಪಕ್ಷಗಳನ್ನು ಬೆಳೆಸಬೇಕಿದೆ ಎಂಬ ಪರಿಹಾರವನ್ನೂ ‘ಚಮಚಾ ಯುಗ’ ಕೃತಿಯಲ್ಲಿ ನೀಡಿದ್ದಾರೆ ಕಾನ್ಶೀರಾಮ್‌.

‘ಚಮಚಾ ಏಜ್’ ಕೃತಿಯನ್ನು ಸಂಚಲನ ಪ್ರಕಾಶನ ಕನ್ನಡಕ್ಕೆ ತಂದಿದೆ. ಪ್ರತಿಗಳಿಗಾಗಿ 9448545959 ದೂರವಾಣಿಯನ್ನು ಸಂಪರ್ಕಿಸಬಹುದು.

ಉಮಾಪತಿ ಡಿ
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X