ನಾರಾಣಪುರ ಬಸವಸಾಗರ ಜಲಾಶಯದಿಂದ ಬೇಸಿಗೆ ಬೆಳೆಗೆ ನೀರು ಒದಗಿಸುವ ನಿಟ್ಟಿನಲ್ಲಿ ಕಾಲುವೆಗಳಿಗೆ ಏಪ್ರಿಲ್ 15ರವರೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಾದಗಿರಿ ಜಿಲ್ಲಾ ಸಮಿತಿ ಆಗ್ರಹಿಸಿವೆ.
ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ರೈತ ಸಂಘ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಲಬಾವಿ ಮಾತನಾಡಿ, “ಬಸವಸಾಗರ ಜಲಾಶಯ ಅಣೆಕಟ್ಟಿನ ಎಡದಂಡೆ ಕಾಲುವೆಯ ವ್ಯಾಪ್ತಿಗೆ ಬರುವ ರೈತಾಪಿ ವರ್ಗದವರು ಡ್ಯಾಂನಲ್ಲಿ ನೀರು ಸಂಗ್ರಹಗೊಂಡಿರುವ ಖುಷಿಯಲ್ಲಿ ಹಿಂಗಾರು ಬೆಳೆಗೆ ಬಿತ್ತನೆ ಮಾಡಿರುತ್ತಾರೆ. ಇದೀಗ ಮಾ.14ರಂದು ಸಲಹಾ ಸಮಿತಿ ಸಭೆಯಲ್ಲಿ ವಾರ ಬಂದಿ ಪದ್ಧತಿಯನ್ನು ಅನುಸರಿಸಿ ಏಪ್ರಿಲ್ 06 ರವರೆಗೆ ಮಾತ್ರ ನೀರು ಹರಿಸಲು ತೀರ್ಮಾನಿಸಲಾಗಿದೆ”
“ಆದರೆ ಇದು ಅವೈಜ್ಞಾನಿಕವಾಗಿದ್ದು, ಹಿಂಗಾರು ಬಿತ್ತನೆ ಮಾಡಿದ ಬೆಳೆಗಳಿಗೆ ವಾರ ಬಂದಿ ಮಾಡದೆ ನಿರಂತರವಾಗಿ ಏಪ್ರಿಲ್.15 ರವರೆಗೆ ನೀರು ಬಿಟ್ಟರೆ ಮಾತ್ರ ರೈತರು ಬೆಳೆಗಳು ಕೈಗೆ ಸೇರುತ್ತವೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಎರಡು ಮೂರು ಬಾರಿ ಸಂಘಟನೆ ವತಿಯಿಂದ ಮನವಿ ಪತ್ರ ಕೊಟ್ಟರೂ ಯಾವುದೇ ಕ್ರಮ ಜರುಗಿಸಿದೆ ತಮ್ಮ ಇಚ್ಛೆಯಂತೆ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ. ಕೂಡಲೇ ನಿರ್ಧಾರ ಕೈಬಿಟ್ಟು ಕಾಲುವೆಗೆ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
“ಒಂದು ವೇಳೆ ನೀರು ಬಿಡದೆ ಹೋದಲ್ಲಿ ಮುಂದೆ ರೈತರ ಹಾನಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಮತ್ತು ರೈತ ಈ ಬೆಳೆಗೆ ಮಾಡಿದ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ” ಎಂದು ಕಳವಳ ವ್ಯಕ್ತಪಡಿಸಿದರು.
ಇದನ್ನೂ ಓದಿ: ಯಾದಗಿರಿ | ಮಾರಕಸ್ತ್ರಗಳಿಂದ ಹಲ್ಲೆ; ದಲಿತ ಮುಖಂಡನ ಭೀಕರ ಕೊಲೆ
ಈ ವೇಳೆ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
