- ಮಂಜೂರಾದ, ಖಾಲಿ ಇರುವ ಹುದ್ದೆಗಳ ಪಟ್ಟಿ ಬಿಡುಗಡೆ ಮಾಡಿದ ಖರ್ಗೆ
- ಖಾಲಿ ಹುದ್ದೆಗಳ ಬಗ್ಗೆ ಮೋದಿ ಸರ್ಕಾರ ಟೀಕಿಸಿದ್ದ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾನಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡದೇ ಇರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ (ಜೂನ್ 20) ವಾಗ್ದಾಳಿ ನಡೆಸಿದ್ದಾರೆ.
2014ರ ನಂತರ ಖಾಲಿ ಇರುವ ನಾನಾ ಇಲಾಖೆಗಳ 30 ಲಕ್ಷ ಹುದ್ದೆಗಳಿಗೆ ಬಿಜೆಪಿ ಸರ್ಕಾರ ಭರ್ತಿ ಮಾಡದೆ ಯುವಕರ, ದುರ್ಬಲ ವರ್ಗಗಳಿಗೆ ಮೋಸ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಈ ಕುರಿತು ಮಂಗಳವಾರ ಟ್ವೀಟ್ ಮಾಡಿದ್ದಾರೆ.
“ಪ್ರಧಾನಿ ಮೋದಿ ಸರ್ಕಾರ ದಲಿತ, ಬುಡಕಟ್ಟು, ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ ವಿರೋಧಿಯಾಗಿದೆ. ಅದಕ್ಕಾಗಿಯೇ ಮೋದಿ ಸರ್ಕಾರ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ” ಎಂದು ಟ್ವೀಟ್‌ನಲ್ಲಿ ಕುಟುಕಿದ್ದಾರೆ.
ಕೇಂದ್ರ ಸರ್ಕಾರದಲ್ಲಿ ಮಂಜೂರಾದ ಮತ್ತು ಖಾಲಿ ಉಳಿದಿರುವ ಹುದ್ದೆಗಳನ್ನು ಹೋಲಿಕೆ ಮಾಡಿದ ಪಟ್ಟಿಯೊಂದನ್ನು ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಬಿಡುಗಡೆ ಮಾಡಿದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“2014ರಿಂದ 2022ರ ವರೆಗಿನ ಅವಧಿಯಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ಪ್ರಧಾನಿ ಮೋದಿ ಸರ್ಕಾರ ಎಂದಿಗೂ ಬದ್ಧತೆ ತೋರಿಲ್ಲ. ಒಟ್ಟಾರೆ ಸರ್ಕಾರಿ ಇಲಾಖೆಗಳಲ್ಲಿ 30 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ” ಎಂದು ಖರ್ಗೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಭಾರತದ 7 ಕೆಮ್ಮಿನ ಸಿರಪ್‌ಗಳು ವಿಷಪೂರಿತ ಎಂದ ವಿಶ್ವ ಆರೋಗ್ಯ ಸಂಸ್ಥೆ
ಕೇವಲ ಕೆಲವು ಸಾವಿರ ನೇಮಕಾತಿ ಪತ್ರಗಳನ್ನು ಹಂಚುವ ಮೂಲಕ ಪ್ರಧಾನಿ ಮೋದಿ ಚಪ್ಪಾಳೆ ಪಡೆದು ಯುವಕರ ಕಣ್ಣಿಗೆ ಮಣ್ಣು ಎರಚುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ಯುವಕರಿಗೆ ಉದ್ಯೋಗ ಸೃಷ್ಟಿಸಲು ಮೋದಿ ಸರ್ಕಾರ ವಿಫಲವಾಗಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಎರಡು ದಿನಗಳ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಸಹ ಖಾಲಿ ಹುದ್ದೆಗಳ ಬಗ್ಗೆ ಮೋದಿ ಸರ್ಕಾರವನ್ನು ಟೀಕಿಸಿದ್ದರು.