ಕೊಪ್ಪಳ | ಪ್ರವಾಸಿಗರಿಗೆ ರಕ್ಷಣೆ ಇಲ್ಲ; ಎಲ್ಲಾ ಸಮಸ್ಯೆಗೂ ಹೆಣ್ಣನ್ನು ದೂಷಿಸುವುದು ಸರಿಯೇ?

Date:

Advertisements

ಇತ್ತೀಚಿನ ಬೆಳವಣಿಗೆಗಳು ʼಕರ್ನಾಟಕ ರಾಜ್ಯ ಮಹಿಳೆಯರಿಗೆ ಎಷ್ಟು ಸುರಕ್ಷಿತʼ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ. ಈ ನಾಡು ಹೆಣ್ಣನ್ನ ಪೂಜ್ಯ ಭಾವನೆಯಿಂದ ನೋಡುವಷ್ಟು ಹೆಣ್ಣಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟಿದೆ. ಆದರೆ, ಕೊಟ್ಟವರು ಯಾರು, ಇಸ್ಕೊಂಡವರು ಯಾರು? ಎನ್ನುವಂತಾಗಿದೆ ಸದ್ಯದ ಪರಿಸ್ಥಿತಿ.

ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ತುಂಗಭದ್ರ ಎಡದಂಡೆ ಕಾಲುವೆ ಬಳಿ ಇಬ್ಬರು ಪ್ರವಾಸಿ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಒಬ್ಬನ ಕೊಲೆ ಘಟನೆ ನಡೆದಿತ್ತು. ಇಸ್ರೇಲ್ ಯುವತಿ ಹಾಗೂ ಪ್ರವಾಸಿ ತಾಣದಲ್ಲಿದ್ದ ಹೋಮ್ ಸ್ಟೇ ಮಾಲಕಿ ಮೇಲೆ ಮೂವರು ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಹಲ್ಲೆ ನಡೆಸಿದ್ದರು. ಹೊರ ರಾಜ್ಯದ ಇಬ್ಬರು ಪ್ರವಾಸಿಗರ ಮೇಲೂ ಹಲ್ಲೆ ನಡೆದಿದ್ದು, ಇದರಲ್ಲಿ ಒಡಿಶಾ ರಾಜ್ಯದ ಓರ್ವ ಪ್ರವಾಸಿ ಸಾವನಪ್ಪಿದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಆರೋಪಿಗಳು ಕೇವಲ‌ 100ರೂಗಾಗಿ ಬೇಡಿಕೆ ಇಟ್ಟು ಅತ್ಯಾಚಾರ, ಕೊಲೆ ಮಾಡಿದ್ದಾರೆ ಎನ್ನುವುದು ವಿಷಾದನೀಯ. ಈ ಘಟನೆ ಕೊಪ್ಪಳ ಹಂಪಿ, ಹಾಗೂ ಆನೆಗೊಂದಿಗೆ ಬರುವ ದೇಶ-ವಿದೇಶಿ ಪ್ರವಾಸಿಗರಲ್ಲಿ ಭಯ, ಆತಂಕವನ್ನು ಹೆಚ್ಚು ಮಾಡಿದೆ.

ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ?

Advertisements

ಸಾಣಾಪುರದಲ್ಲಿ ಸಂಭವಿಸಿದ ಆತಂಕಕಾರಿ ಘಟನೆ ಕರ್ನಾಟಕ ರಾಜ್ಯವು ಮಹಿಳೆಯರಿಗೆ ಎಷ್ಟು ಸುರಕ್ಷಿತ.. ನಮ್ಮ ನೆಲದ ಹೆಣ್ಣು ಮಕ್ಕಳಿಗೇ ರಕ್ಷಣೆ ಇಲ್ಲ ಎಂದಮೇಲೆ ವಿದೇಶದಿಂದ ಬರುವಂತ ಪ್ರವಾಸಿಗರಿಗೆ ಈ ರಾಜ್ಯ ಸುರಕ್ಷಿತವೇ? ರಾಜ್ಯದಲ್ಲಿ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಬಿಡುಗಡೆ ಮಾಡಿದ ಅಂಕಿ-ಸಂಖ್ಯೆಗಳು ಆತಂಕ, ಭಯಕ್ಕೆ ಕಾರಣವಾಗಿದೆ. ಕರ್ನಾಟಕ ಒಂದರಲ್ಲೇ 3 ವರ್ಷದಲ್ಲಿ ಸುಮಾರು 13,622 ಲೈಂಗಿಕ ಕಿರುಕುಳ ಹಾಗೂ ಸುಮಾರು 950 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ ಎಂದು ವರದಿ ಇದೆ.

ಇನ್ನು ಲೈಂಗಿಕ ಕಿರುಕುಳ ಪ್ರಕರಣದಲ್ಲಿ 2023ರಲ್ಲಿ 19 ಮಂದಿಗೆ ಶಿಕ್ಷೆಯಾದರೆ, 400 ಮಂದಿ ಖುಲಾಸೆಗೊಂಡಿದ್ದಾರೆ. ಕಳೆದ 2024ರಲ್ಲಿ 8 ಮಂದಿಗೆ ಶಿಕ್ಷೆಯಾದರೆ, 57 ಮಂದಿ ಖುಲಾಸೆಗೊಂಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ 2023ರಲ್ಲಿ ಯಾರಿಗೂ ಶಿಕ್ಷೆಯಾಗಿಲ್ಲ. ಬದಲಾಗಿ 33 ಮಂದಿ ಖುಲಾಸೆಗೊಂಡಿದ್ದಾರೆ. 2024ರಲ್ಲೂ ಯಾರಿಗೂ ಶಿಕ್ಷೆಯಾಗಿಲ್ಲ ಬದಲಾಗಿ 7 ಮಂದಿ ಖುಲಾಸೆಗೊಂಡಿದ್ದಾರೆ. ಇದನ್ನು ಗಮನಿಸಿದರೆ ಕರ್ನಾಟಕದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೇಲಿಂದ ಮೇಲೆ ಕಾಡಲು ಶುರು ಮಾಡುತ್ತದೆ.

ಅತ್ಯಾಚಾರ ತಡೆಗಟ್ಟಲು ಕ್ರಮ ಏನು?

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ‘ಪ್ರಕರಣಗಳ ಮುಕ್ತ ಮತ್ತು ನ್ಯಾಯಯುತ ನೋಂದಣಿ’ ಎಂಬ ಘೋಷಣೆ ಮಾಡಿದೆ. ತನಿಖಾ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ 206 SOCO ಅಧಿಕಾರಿಗಳನ್ನು ನೇಮಿಸಿ ಎಲ್ಲಾ ಘಟಕಗಳಿಗೆ ಈಗಾಗಲೇ ನಿಯೋಜಿಸಲಾಗಿದೆ ಎಂದು ಗೃಹ ಇಲಾಖೆ ಹೇಳುತ್ತಿದೆ. ಮುಂದಿನ ದಿನಗಳಲ್ಲಿ 500 SOCO ಅಧಿಕಾರಿಗಳನ್ನು ನೇಮಕ ಮಾಡಲಿದೆ. ಆಗ ಅಪರಾಧ ಸ್ಥಳಗಳಲ್ಲಿ ಕೈಗೊಳ್ಳುವ ಪ್ರಾಮಾಣಿಕ ತನಿಖೆ, ಸಾಕ್ಷಿ ಸಂಗ್ರಹ ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಲು ಸಹಕಾರಿಯಾಗಲಿದೆ ಎಂದಿದೆ. ಆದರೆ ಅದು ಎಷ್ಟರಮಟ್ಟಿಗೆ ಕಾರ್ಯ ರೂಪಕ್ಕೆ ಬಂದಿದೆ ಎನ್ನುವುದರ ಬಗ್ಗೆ ಇಲಾಖೆಯೇ ಸ್ಪಷ್ಟನೆ ಕೊಡಬೇಕು.

ಐತಿಹಾಸಿಕ ಪರಂಪರೆಯುಳ್ಳ ಹಂಪಿ, ಪ್ರವಾಸಿಗರಿಗೆ ಅಸುರಕ್ಷಿತ!

ವಿಶ್ವದ ಪ್ರವಾಸಿಗರ ಗಮನ ಸೆಳೆಯುವ ಹಂಪಿಯ 15ಕ್ಕೂ ಹೆಚ್ಚು ಜನಪ್ರಿಯ ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಅಸುರಕ್ಷಿತವಾಗಿವೆ ಎಂಬೊಂದು ಬೆಚ್ಚಿಬೀಳಿಸುವ ಸಂಗತಿ ಕೇಳಿಬರುತ್ತಿದೆ. ಹಂಪಿಯ ಚಕ್ರವರ್ತಿ, ಸೀತಾ ಗುಹೆ, ಆನೆಯ ಲಾಯದ ಹಿಂಭಾಗ, ಸುಗ್ರೀವ ಗುಹೆ ಹಾಗೂ ಮುಂತಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಇಲ್ಲ. ವಿರೂಪಾಕ್ಷ ಮತ್ತು ವಿಜಯ ವಿಠಲ ದೇವಾಲಯಗಳು ಮತ್ತು ಹೇಮ ಕೂಟ ಸೇರಿದಂತೆ ಕೆಲವೇ ಸ್ಥಳಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಕಾಣಬಹುದು ಎಂಬುದು ಸ್ವತಃ ಅಲ್ಲಿಯ ಸಿಬ್ಭಂದಿಯ ಮಾತು.

WhatsApp Image 2025 03 17 at 2.40.43 PM

ಸಣ್ಣ ಪುಟ್ಟ ವ್ಯಾಪಾರಕ್ಕೆ ಹಾಗೂ ಹೋಮ್ ಸ್ಟೇ ಮಾಲಿಕರ ವ್ಯಾಪಾರಕ್ಕೆ ಭಾರಿ ಹೊಡೆತ

ಸಾಣಾಪುರ ಪ್ರಕರಣದ ನಂತರ, ವಿದೇಶಿ ಪ್ರವಾಸಿಗರು ಹಾಗೂ ಹೊರರಾಜ್ಯ ಪ್ರವಾಸಿಗರು ಆತಂಕದಿಂದ ರೆಸಾರ್ಟ್ ಹಾಗೂ ಹೋಮ್ ಸ್ಟೇಗಳನ್ನು ತೊರೆದಿದ್ದಾರೆ. ಸದಾ ಜನಜಂಗುಳಿ ಇರುತ್ತಿದ್ದ ಸಣಾಪುರ, ಬಸಾಪುರ, ತಿಮಲಾಪುರ ಹಾಗೂ ಸುತ್ತಮುತ್ತಲ ಪ್ರವಾಸಿ ರೆಸಾರ್ಟ್‌ಗಳು ಹಾಗೂ ಹೋಮ್ ಸ್ಟೇಗಳು ಖಾಲಿ ಬಿದ್ದಿವೆ. ಮಾಲಿಕರ ನಷ್ಟಕ್ಕೂ ಕಾರಣವಾಗಿವೆ. ಹೋಟೆಲ್, ಆಟೋ, ಬಾಡಿಗೆಗೆ ಬೈಕ್, ಕೂಲ್ಡ್‌ಡ್ರಿಂಕ್ ವ್ಯಾಪಾರ, ಕಾಟನ್ ಬಟ್ಟೆ ಬ್ಯಾಗ್ ವ್ಯಾಪಾರ‌ ಸೇರಿದಂತೆ ಸಣ್ಣ ವ್ಯಾಪಾರಿಗಳ ವ್ಯಾಪಾರಕ್ಕೆ ಹೊಡೆತ ಕೊಟ್ಟಿರುವುದರಂದ ಕೆಲವು ವ್ಯಾಪಾರಿಗಳು ಅಂಗಡಿ ಬಂದ್ ಮಾಡಿಕೊಂಡಿರುವ ಉದಾಹರಣೆಗಳೂ ಇವೆ.

ವ್ಯಾಪಾರಸ್ಥರು ಏನಂತಾರೆ?

ಆಟೋಚಾಲಕ ಕೋಟ್ರೇಶ ಈ ದಿನ ಡಾಟ್ ಕಾಮ್ನೊಂದಿಗೆ ಮಾತನಾಡಿ, “ವಿದೇಶಿ ಪ್ರವಾಸಿಗರು ಬರುವುದರಿಂದಲೇ ನಮಗೊಂದಿಷ್ಟು ಕೆಲಸ ಇರುತ್ತಿತ್ತು. ಆಟೋಗಳ ಚಾಲನೆಯೇ ನಮ್ಮ ಜೀವನಕ್ಕೆ ಆಧಾರವಾಗಿತ್ತು. ಯಾವುದೋ ಊರಿಂದ ಕುಡಿದ ಮತ್ತಿನಲ್ಲಿ ಬಂದು ಕೊಲೆ,‌ ಅತ್ಯಾಚಾರ ಮಾಡಿ ಬರುವ ಪ್ರವಾಸಿಗರಲ್ಲಿ ಭಯ ಹುಟ್ಟಿಸಿಬಿಟ್ಟಿದ್ದಾರೆ. ಈಗ ಪ್ರವಾಸಿಗರು ಪ್ರವಾಸಿ ತಾಣಗಳನ್ನ ಖಾಲಿ ಮಾಡಿಕೊಂಡು ಹೋಗಿದ್ದಾರೆ. ನಮ್ಮಂತ ಬಡಪಾಯಿಗಳ ಹೊಟ್ಟೆ ಮೇಲೆ ಕಲ್ಲು ಹಾಕಿದಂತಾಗಿದೆ. ಹೋಮ್ ಸ್ಟೇ ಹಾಗೂ ರೆಸಾರ್ಟ್ ಮುಚ್ಚುವ ಪರಿಸ್ಥಿತಿ ಬಂದಿದೆ. ಹೋಟೆಲ್‌ಗಳು ಬಂದ್ ಆಗಿವೆ. ಇಲ್ಲಿ ಹೆಚ್ಚು ಇಸ್ರೇಲಿ ಪ್ರವಾಸಿಗರು ಬರುತ್ತಾರೆ. ಸದ್ಯ ಯಾವುದೂ ಇಲ್ಲದಂತಾಗಿದೆ. ಮುಂದೆ ಪರಿಸ್ಥಿತಿ ಇನ್ನೆಷ್ಟು ಕೆಡಬಹುದು” ಎಂದು ಕಳವಳ ವ್ಯಕ್ತಪಡಿಸಿದರು.

WhatsApp Image 2025 03 17 at 3.31.58 PM

ಇಂತಹ ಘಟನೆ ಇದೇ ಮೊದಲ?

ಸಣಾಪುರದಲ್ಲಿ ಇಂತಹ ಘಟನೆ ಇದೆ ಮೊದಲ ಸಲ ನಡೆದದ್ದ ಅಥವಾ ಈ ಹಿಂದೆಯೂ ಇಂತಹ ಘಟನೆ ನಡೆದಿತ್ತೇ? ಎಂಬ ಪ್ರಶ್ನಗೆ, ಸ್ಥಳೀಯ ವ್ಯಕ್ತಿ ಮಾತನಾಡಿ, “ಈ ಹಿಂದೆ ಅತ್ಯಾಚಾರ, ಹಲ್ಲೆ ಹಾಗೂ ಕೊಲೆಯಂತ ಘಟನೆಗಳು ನಡೆದಿಲ್ಲ. ಆದರೆ, ಹಳ್ಳದಲ್ಲಿ ವಿದೇಶಿ ಪ್ರವಾಸಿಗರು ಸ್ನಾನ ಮಾಡುವಾಗ ಸಣಾಪುರದವರೇ ಇಬ್ಬರು, ಪ್ರವಾಸಿಗರಿಂದ ಸಿಗರೇಟು ಹಾಗೂ ಸ್ನಾಕ್ಸ್‌ ತೆಗೆದುಕೊಂಡು ತಿಂದು ಅವರ 1ಲಕ್ಷ ಹಣ ಇದ್ದ ಬ್ಯಾಗ್, ಮೊಬೈಲ್ ಕಿತ್ಕೊಂಡು ಹೋಗಿದ್ದರು; ಆದರೆ, ಮೊಬೈಲ್ ಮೂಲಕ ತಾವು ಇರುವ ಜಾಗ ಕಂಡುಹಿಡಿಯಬಹುದೆಂದೆ ಮೊಬೈಲ್ ಮತ್ತು ಬ್ಯಾಗ್ ಎಸೆದು ಹಣ ತಗೊಂಡು ಓಡಿ ಹೋಗಿರುವ ಘಟನೆ ನಡೆದಿತ್ತು. ಉಡಾಳ ಹುಡುಗರು ವಿದೇಶಿ ಮಹಿಳೆಯರು ತೊಟ್ಟಿರುವ ಉಡುಪುಗಳನ್ನು ನೋಡಿ ಸಿಳ್ಳೆ ಹೊಡೆಯುವುದು; ಚುಡಾಯಿಸುವುದು ನಡೆಯುತ್ತವೆ. ಅನಧಿಕೃತ ರೆಸಾರ್ಟ್ ಹಾಗೂ ಹೋಮ್ ಸ್ಟೇಗಳಲ್ಲಿ ಮದ್ಯಪಾನ ಮಾರಾಟವಾಗುತ್ತದೆ. ಕೆಲವು ಅಂಗಡಿಗಳಲ್ಲಿ ವಿದೇಶಿ ಹಾಗೂ ಹೊರರಾಜ್ಯದ ಪ್ರಾಸಿಗರಿಗೆ ಕದ್ದು ಗಾಂಜಾ ಮಾರಾಟವೂ ಅಗುತ್ತದೆ” ಎಂದು ಹೇಳಿದರು.

ಕರ್ತವ್ಯ ಮರೆಯಿತೇ ಜಿಲ್ಲಾಡಳಿತ?

ಸಣಾಪುರ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯಾಚಾರಣೆಯು ಶ್ಲಾಘನೀಯ. ತ್ವರಿತವಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾಡಳಿತ ಊರು ಕೊಳ್ಳೆ ಹೊಡೆದ ಮೇಲೆ ಎಚ್ಚೆತ್ತುಕೊಂಡಂತಾಗಿದೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ-ವಿದೇಶದಿಂದ ಬರುವ ಪ್ರವಾಸಿಗರಿಗೆ ರಕ್ಷಣೆಯ ಜವಾಬ್ದಾರಿವಹಿಸಬೇಕಿತ್ತು. ಅಧಿಕೃತ ಹಾಗೂ ಅನಧಿಕೃತ ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳ ಬಗ್ಗೆ ನಿಗಾವಹಿಸಿ ಹೆಚ್ಚು ಪ್ರವಾಸಿಗರು ಸಂಚರಿಸುವ ಸ್ಥಳಗಳಲ್ಲಿ ಪೊಲೀಸ್ ಚೆಕ್ಕಪೋಸ್ಟ್‌ಗಳನ್ನು ನಿಯೋಜಿಸಬೇಕಿತ್ತು. ಆ ಕೆಲಸ ಜಿಲ್ಲಾಡಳಿತ ಮಾಡಲಿಲ್ಲ. ಇದು ಜಿಲ್ಲಾಡಳಿತದ ಕಳಪೆ ಆಡಳಿತ” ಎನ್ನುತ್ತಾರೆ ಸ್ಥಳೀಯರು.

ಎಲ್ಲಾ ಸಮಸ್ಯೆಗೂ ಮಹಿಳೆಯನ್ನೇ ಗುರಿ ಮಾಡುವುದು ಸರಿಯೇ?

ಇಬ್ಬರು ಮಹಿಳೆಯರು ಜೊತೆಗೂಡಿ ಪುರುಷ ಸ್ನೇಹಿತರ ಜೊತೆ ಹೋದರೆ, ಪುರುಷ ಪರಮಾಧಿಕಾರದ ಕಣ್ಗಾವಲು ಹೆಚ್ಚಾಗಿರುತ್ತದೆ. ಒಬ್ಬ ಮಹಿಳೆ ಎಲ್ಲೇ ಹೋದರೂ ಸಮಯದ ಅವಧಿ ನಿಗದಿ ಮಾಡುವವರೂ ಕೂಡ ಪುರುಷರೇ.. ಹಾಗೂ ಪುರುಷ ಪರಮಾಧಿಕಾರವುಳ್ಳ ಮನಸ್ಸುಗಳು (ಪುರುಷ ಪರಮಾಧಿಕಾರದ ಮನಸ್ಥಿತಿವುಳ್ಳ ಮಹಿಳೆಯರೂ ಕೂಡಾ). ಆನೆಗೊಂದಿ, ಸಣಾಪುರ, ಬಸಾಪುರ ತಿಮಲಾಪುರ, ಮಲ್ಲಾಪುರ, ರಂಗಾಪುರ, ಹನಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಅತ್ಯಾಚಾರಕ್ಕೊಳಗಾದ ಹೋಮ್ ಸ್ಟೇ ಮಾಲಕಿ ಹಾಗೂ ಯುವತಿ ಮೇಲೆಯೇ ಆರೋಪ ಮಾಡುತ್ತಿರುವುದು ಕೇಳಿಬರುತ್ತಿದೆ. ರಾತ್ರಿ ಹೊತ್ತಲ್ಲೇ ಮಹಿಳೆಯರ ಮೇಲೆ ಅತ್ಯಾಚಾರ ಆಗುತ್ತಿವೆಯಾ? ಎನ್ನುವುದು ಮತ್ತೊಂದು ಪ್ರಶ್ನೆ..

ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಯಾವ ಸಮಯದಲ್ಲಿ?, ಒಂಟಿ ಮಹಿಳೆಯರು ಮನೆಯಲ್ಲಿ ಇರುವಾಗ ಅತ್ಯಾಚಾರ ಹಾಗೂ ಕೊಲೆ ಆಗುತ್ತಿರುವುದು ಯಾವ ಸಮಯ? 4 ರಿಂದ 8 ವರ್ಷದ ಮಕ್ಕಳನ್ನೂ ಬಿಡದೇ ಅತ್ಯಾಚಾರ ಮಾಡುವ ಸಮಯ ಯಾವುದು? ಅತ್ಯಾರಿಗಳಿಗೂ ಇಂತಿಷ್ಟೆ ಸಮಯದಲ್ಲಿ ಅತ್ಯಾಚಾರ ಮಾಡಿ, ಕೊಲೆ ಮಾಡುವ ನಿಯಮವಿದೆಯೇ? ಇದ್ದರೆ ರೂಪಿಸಿದವರಾರು? ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ. ಎಲ್ಲದಕ್ಕೂ ಮಹಿಳೆಯರೇ ಕಾರಣ ಎಂದು ಆರೋಪಿಸುವ ಮನಸ್ಥಿತಿ ಭಾರತೀಯರಲ್ಲಿ ಬಿಟ್ಟು ಬೇರೆ ರಾಷ್ಟ್ರದಲ್ಲಿ ಹೆಚ್ಚು ಕಾಣುವುದಿಲ್ಲ ಎಂಬುದು ಕಟು ಸತ್ಯ.

ಸಾಮಾಜಿಕ ಹೋರಾಟಗಾರರು ಏನಂತಾರೆ?

“ಸಾವಿರಾರು ವರ್ಷಗಳಿಂದಲೂ ಮಹಿಳೆಯರ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಹಿಳೆಯರಿಗಾಗಿಯೇ ಚೌಕಟ್ಟುಗಳನ್ನು, ನಿಬಂಧನೆಗಳನ್ನು ವಿಧಿಸಿ ಶತಶತಮಾನಗಳಿಂದಲೂ ಹೆಣ್ಣಿನ ಸ್ವಾತಂತ್ರ್ಯ ಕಿತ್ತುಕೊಂಡಿದ್ದು ಈ ಪುರುಷ ಪರಮಾಧಿಕಾರ. ನಮಗಾಗಿಯೇ ಉಡುಗೆ-ತೊಡುಗೆಗಳನ್ನು ತಂದರು. ಇಂತಹ ಕೆಲಸಗಳನ್ನೇ ಮಾಡಬೇಕು ಎಂಬ ಕಾನೂನುಗಳನ್ನು ತಂದರು. ಹೆಣ್ಣು ಯಾವ ಜಾಗದಲ್ಲೂ ಸುರಕ್ಷಿತವಲ್ಲ. ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ ನಡೆದಿರುವ ಘಟನೆಗಳು ಸಾಕಷ್ಟು ಉದಾಹರಣೆಗಳು ಇವೆ. ಅಲ್ಲಿ ಹೋಗಿದ್ಯಾಕೆ, ಇಲ್ಲಿ ಹೋಗಿದ್ಯಾಕೆ ಎಂಬ ನಿಬಂಧನೆಗಳು ಹೆಣ್ಣಿಗೆ ಮಾತ್ರ ಯಾಕೆ? ಆದರೆ, ಗಂಡಸರಿಗೆ ಈ ನಿಯಮ, ನಿಬಂಧನೆಗಳು ಇಲ್ಲ ಯಾಕೆ?” ಎಂದು ಮಹಿಳಾಪರ ಸಾಮಾಜಿಕ ಹೋರಟಗಾರ್ತಿ ಶೈಲಜಾ ಹಿರೇಮಠ ಹೇಳಿದರು.

ಇದನ್ನೂ ಓದಿ: ಕೊಪ್ಪಳ | ವಿವಿಧ ಸಂಸ್ಕೃತಿ, ಧರ್ಮಗಳ ದೇಶದಲ್ಲಿ ಎಲ್ಲರೂ ಕೂಡಿ ಸಾಗಬೇಕಿದೆ: ಅಲ್ಲಮಪ್ರಭು ಬೆಟ್ಟದೂರು

ವಿವಿಧ ಸಂಸ್ಕೃತಿಯಿಂದಲೇ ವಿಶ್ವದ ಗಮನ ಸೆಳೆದಿರುವ ನಾಡಿನಲ್ಲಿ ಮಹಿಳೆಗೆ ರಕ್ಷಣೆ ಇಲ್ಲದೇ ಇರುವುದು ವಿಪರ್ಯಾಸ. ಈ ರೀತಿಯ ಘಟನೆಗಳು ಸಂಭವಿಸಿದಾಗ ಕಾನೂನು ಕಠಿಣ ಶಿಕ್ಷೆ ವಿಧಿಸಿದರೆ ಮುಂದಿನ ದಿನಗಳಲ್ಲಿ ಬದಲಾವಣೆ ತರಲು ಸಾಧ್ಯ. ಈ ಕಿಟಕಿಯಲ್ಲಿ ದೂರು.. ಆ ಕಿಟಕಿಯಲ್ಲಿ ಜಾಮೀನು ಎನ್ನುವಂತಾದರೆ ಪರಿಸ್ಥಿತಿ ಮತ್ತಷ್ಟು ಹೀನಾಯ ಸ್ಥಿತಿ ತಲುಪುವುದರಲ್ಲಿ ಸಂದೇಹವಿಲ್ಲ. ಸಾಕಷ್ಟು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒತ್ತು ನೀಡುವ ಸರ್ಕಾರ.. ಪ್ರವಾಸಿಗರನ್ನೂ ಗಮನದಲ್ಲಿಟ್ಟುಕೊಂಡು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಕರಣಗಳ ಸಂಖ್ಯೆ ಮಾತ್ರ ಏರುತ್ತಲೇ ಇದೆ ಆದರೆ ಶಿಕ್ಷೆ ಎಷ್ಟು ಮಂದಿಗೆ ಆಗಿದೆ ಎನ್ನುವುದು ಮುಖ್ಯ. ಕಠಿಣ ನಿಯಮಗಳನ್ನು ಜಾರಿ ಮಾಡದ ಹೊರತು ಅಪರಾಧಿಕ ಕೃತ್ಯಗಳನ್ನು ತಡೆಗಟ್ಟುವುದು ಅಸಾಧ್ಯ.

WhatsApp Image 2025 02 05 at 18.09.20 2
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X