ಸುಮಾರು 80 ಎಕರೆ ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಮರಗಿಡಗಳು ಹೊತ್ತಿ ಉರಿದು ಪಕ್ಷಿ ಸಂಕುಲ ಕಂಗಾಲಾದ ಘಟನೆ ಭಾನುವಾರ ಸಂಜೆ ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಸುರಿಗೇನಹಳ್ಳಿ ಗುಡ್ಡ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬೇಸಿಗೆ ಶುರುವಾದ ನಂತರದ ದಿನಗಳಲ್ಲಿ ಇದೇ ಅರಣ್ಯ ಪ್ರದೇಶಕ್ಕೆ ಮೂರು ಬಾರಿ ಬೆಂಕಿ ಸಂಭವಿಸಿದ್ದು ಯಾವುದೇ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಸುಮಾರು 100 ಎಕರೆ ಅರಣ್ಯ ಪ್ರದೇಶ ಹೊಂದಿರುವ ಸುರಿಗೇನಹಳ್ಳಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಗುಡ್ಡದ ರಂಗನಾಥಸ್ವಾಮಿ ದೇವಾಲಯ ಬೆಟ್ಟದ ತಪ್ಪಲಿನಲ್ಲಿರುವುದು ಒಂದೆಡೆಯಾದರೆ ಸುಂದರವಾದ ಹಸಿರು ವನಸಿರಿಯ ಜೊತೆಗೆ ಈ ದೇವಾಲಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ.

ಪ್ರಕೃತಿ ತಪ್ಪಲಿನ ಅರಣ್ಯ ಪ್ರದೇಶದ ಈ ಗುಡ್ಡ ಉಳಿಸುವ ಕೆಲಸ ಮಾಡಬೇಕಿದೆ. ಸಾವಿರಾರು ಪಕ್ಷಿ ಸಂಕುಲ ಬೀಡು ಬಿಟ್ಟ ಅರಣ್ಯದಲ್ಲಿ ಕಂಡ ಬೆಂಕಿ ಹಸಿ ಮರಗಿಡಗಳನ್ನು ಆಹುತಿ ಪಡೆದಿದೆ. ಗೂಡು ಕಟ್ಟಿ ತನ್ನ ಮರಿಗಳೊಟ್ಟಿಗೆ ಇದ್ದ ಹಕ್ಕಿಗಳ ಆಕ್ರಂದನ ಕೇಳುವರ್ಯಾರು ಎಂಬಂತೆ ಕಂಡು ಬಂತು. ಪ್ರವಾಸಿಗರನ್ನು ಸೆಳೆಯುವ ಅರಣ್ಯ ಗುಡ್ಡ ಉಳಿಸುವ ಕೆಲಸ ಅರಣ್ಯ ಇಲಾಖೆ ಮಾಡದಿರುವುದು ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

ಕಳೆದ 15 ದಿನಗಳ ಹಿಂದೆಯಷ್ಟೇ ಇದೇ ಅರಣ್ಯ ಪ್ರದೇಶದಲ್ಲಿರುವ ಗುಡ್ಡದ ರಂಗನಾಥಸ್ವಾಮಿ ದೇವಾಲಯಕ್ಕೆ ಕನ್ನ ಹಾಕಿದ್ದ ಘಟನೆ ಮೆರೆಯುವ ಮುನ್ನವೇ
ಸುಮಾರು 80 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿರುವುದು ಬೇಸರ ತಂದಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿ ಬೆಂಕಿ ನಂದಿಸಿದರು.