ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುತ್ತಿರುವ ಕ್ರಮವನ್ನು ವಿರೋಧಿಸುತ್ತಿರುವಲ್ಲಿ ಕೋಮು ದ್ವೇಷ ಅಜೆಂಡಾವೇ ಎದ್ದು ಕಾಣುತ್ತಿದೆ ಹೊರತು ವಾಸ್ತವಗಳಲ್ಲ
ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4ರಷ್ಟು ಮೀಸಲಾತಿಯನ್ನು ನೀಡುವ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ಪ್ರಕಟಿಸಿದ ಬಳಿಕ, ಪ್ರತಿಪಕ್ಷ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ”ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಇದು ಸಂವಿಧಾನ ಬಾಹಿರ ಮತ್ತು ಸರ್ಕಾರಿ ಜಿಹಾದ್” ಎನ್ನುವಂತಹ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಇಂತಹ ಅವಕಾಶ ನೀಡುವುದನ್ನು ಖಂಡಿಸಿ ಪ್ರತಿಭಟನೆಗಳಿಗೂ ಮುಂದಾಗಿದ್ದಾರೆ.
ಧರ್ಮಾಧಾರಿತವಾಗಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗುತ್ತಿದೆ ಎಂಬುದೇ ಅತ್ಯಂತ ಬಾಲಿಶ ಮತ್ತು ಸಂವಿಧಾನ ವಿರೋಧಿ ಆರೋಪವಾಗಿದೆ. ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗವೆಂದು ಪರಿಗಣಿಸಿ ಮೀಸಲಾತಿ ನೀಡಲಾಗಿದೆಯೇ ಹೊರತು ಅಲ್ಪಸಂಖ್ಯಾತರೆಂದು ಅಲ್ಲ. ಮುಸ್ಲಿಮರಿಗಷ್ಟೇ ಮೀಸಲಾತಿಯನ್ನು ನೀಡಿಲ್ಲ. ಜೈನರು, ಕ್ರಿಶ್ಚಿಯನ್ ಸಮುದಾಯಗಳೂ ಮೀಸಲಾತಿಯ ಪಟ್ಟಿಯೊಳಗೆ ಸೇರಿವೆ ಎಂಬುದನ್ನು ಗಮನಿಸಬೇಕು. ಮೀಸಲಾತಿ ಪಟ್ಟಿಯ ಪ್ರವರ್ಗ– 3ಬಿಯಲ್ಲಿ ಕ್ರೈಸ್ತರು ಮತ್ತು ಜೈನ ದಿಗಂಬರರು ಸ್ಥಾನ ಪಡೆದಿದ್ದಾರೆ. ಬೌದ್ಧಧರ್ಮಕ್ಕೆ ಮರಳುವ ದಲಿತ ಸಮುದಾಯದವರನ್ನು ಪರಿಶಿಷ್ಟರೆಂದೇ ಪರಿಗಣಿಸಲಾಗುತ್ತದೆ. ಇವುಗಳೆಲ್ಲವೂ ಸಂವಿಧಾನಬದ್ಧವಾಗಿ ನೀಡಲಾಗಿರುವ ಪ್ರಾತಿನಿಧ್ಯವೇ ಹೊರತು ಸಂವಿಧಾನ ವಿರೋಧಿಯಲ್ಲ.
ಮೈಸೂರು ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲೇ ಮುಸ್ಲಿಮರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲಾಯಿತು. ಅಂದು ಮಿಲ್ಲರ್ ಸಮಿತಿ ನೀಡಿದ ವರದಿಯು ಮುಸ್ಲಿಮರಿಗೂ ಪ್ರಾತಿನಿಧ್ಯದ ಅವಕಾಶ ಒದಗಿಸಿತು.
1960ರ ಸಮಯದಲ್ಲಿ ರಚಿಸಿದ ಡಾ.ನಾಗನಗೌಡ ಸಮಿತಿಯು ತೆಗೆದುಕೊಂಡ ನಿರ್ಧಾರ ಗಮನಾರ್ಹ. ”ಮುಸ್ಲಿಮರು ಮತ್ತು ಕ್ರೈಸ್ತರು ಜಾತಿ ಪದ್ಧತಿಗೆ ಮಾನ್ಯತೆ ನೀಡುವುದಿಲ್ಲ ಎಂಬ ಸಂಗತಿ ನಮಗೆ ತಿಳಿದಿದೆ. ಹಾಗಿದ್ದರೂ ಉಚ್ಚ ಮತ್ತು ನೀಚ ಎಂಬ ಪರಿಕಲ್ಪನೆಗಳು ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳಲ್ಲೂ ಇವೆ. ಹಾಗಾಗಿ ಸಮಿತಿ ಎಲ್ಲ ಮುಸ್ಲಿಮರನ್ನು ಹಿಂದುಳಿದವರೆಂದು ಪರಿಗಣಿಸದೆ, ಕೆಲವು ಪಂಗಡಗಳನ್ನು ಹಿಂದುಳಿದವರು ಎಂದು ಪರಿಗಣಿಸಿ ಪಟ್ಟಿಯಲ್ಲಿ ಸೇರಿಸಿದೆ” ಎನ್ನುತ್ತದೆ ಸಮಿತಿ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಭಾರತಕ್ಕೆ ಬೇಕಿರುವುದು ಬಣ್ಣಗಳ ಸಂಗಮ, ಸಂಘರ್ಷದ ಸಂಭ್ರಮವಲ್ಲ!
ದೇವರಾಜ ಅರಸು ಅವರ ನೇತೃತ್ವದ ಸರ್ಕಾರವು ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಿದಾಗ, ಅದನ್ನು ನ್ಯಾಯಾಂಗದಲ್ಲಿ ಪ್ರಶ್ನಿಸಲಾಯಿತು. ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ”ಮುಸ್ಲಿಮರು ಧಾರ್ಮಿಕ ಅಲ್ಪಸಂಖ್ಯಾತರು ಎಂದಮಾತ್ರಕ್ಕೆ ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ಹೊರಗೆ ಇಡಲು ಯಾವುದೇ ಆಧಾರವಿಲ್ಲ. ನಮ್ಮ ಅಭಿಪ್ರಾಯದಲ್ಲಿ ಮುಸ್ಲಿಂ ಸಮೂಹಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಿರುವ ಸರ್ಕಾರದ ನಿಲುವು ನಿರ್ದಿಷ್ಟವಾಗಿ ಸಮರ್ಥನೀಯ” ಎಂದು ಪ್ರತಿಪಾದಿಸಿತ್ತು.
1980ರಲ್ಲಿ ರಚಿತಗೊಂಡ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಆಯೋಗವು, ಮುಸ್ಲಿಮರ ವಾಸಸ್ಥಾನ, ಕಡುಬಡತನ, ಅತ್ಯಂತ ನಿಕೃಷ್ಟವಾಗಿ ಒಂದೆಡೆ ಬದುಕುವ ರೀತಿ- ಮೊದಲಾದ ಅಂಶಗಳನ್ನು ಅಧ್ಯಯನ ಮಾಡಿತ್ತು. ಚಿನ್ನಪ್ಪರೆಡ್ಡಿಯವರೇ ಮುಸ್ಲಿಮರ ವಾಸಸ್ಥಳಗಳಿಗೆ ಹೋಗಿ ಸ್ಥಿತಿಗತಿ ಪರಿಶೀಲಿಸಿದ್ದರು. ಕೊನೆಗೆ ಇಡೀ ಮುಸ್ಲಿಂ ಸಮೂಹವನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿವೆ ಎಂದು ಪರಿಗಣಿಸಿ ಮೀಸಲಾತಿ ಪಟ್ಟಿಯಲ್ಲಿ ಸೇರಿಸಿದರು. ಇದು ವಾಸ್ತವ. ಈಗ ಮುಸ್ಲಿಮರನ್ನು ಪ್ರವರ್ಗ- 2ಬಿಯಲ್ಲಿ ಸೇರಿಸಲಾಗಿದೆ. ಇಲ್ಲಿರುವ ಕೋಟಾ ಶೇ.4ರಷ್ಟು ಮಾತ್ರ. ಇದು ಕೂಡ ಸರಿಯಾದ ಪ್ರಾತಿನಿಧ್ಯವೂ ಅಲ್ಲ. ”ಮುಸ್ಲಿಮರಿಗೆ ಶೇ.6ರಷ್ಟಾದರೂ ಮೀಸಲಾತಿ ನೀಡುವುದು ನ್ಯಾಯೋಚಿತ” ಎಂದು ಬರೆಯುತ್ತಾರೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಕೆ.ಎನ್.ಲಿಂಗಪ್ಪ.
ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೇಂದ್ರದ ಕಾಯ್ದೆ ಒಪ್ಪದವರನ್ನು ಅನಾಗರಿಕರು ಎನ್ನುವುದು ಎಷ್ಟು ಸರಿ?
ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಸ್ಲಿಮರ ಮೀಸಲಾತಿಯನ್ನೇ ತೆಗೆದು ಹಾಕುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತ್ತು. ಇಂತಹ ನಡೆಯೇ ನಿಜವಾದ ಸಂವಿಧಾನ ವಿರೋಧಿ. ಮುಸ್ಲಿಮರ ಮೀಸಲಾತಿಯನ್ನು ಕಿತ್ತು, ಒಕ್ಕಲಿಗರಿಗೂ ಲಿಂಗಾಯತರಿಗೂ ಹಂಚುತ್ತೇವೆ ಎನ್ನುವ ನಿರ್ಧಾರವೇ ಸಮುದಾಯಗಳ ನಡುವೆ ಸಾಮರಸ್ಯ ಕದಡುವ ಪಿತೂರಿಯಾಗಿತ್ತು.
2025ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಂತೂ ಹಸಿಹಸಿ ಸುಳ್ಳುಗಳ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಎಲ್ಲ ಬಿಜೆಪಿ ನಾಯಕರು ಪ್ರಚಾರ ಮಾಡಿದರು. ಮುಸ್ಲಿಮರಿಗೆ ನೀಡಿರುವ ಮೀಸಲಾತಿ ಸಂವಿಧಾನ ವಿರೋಧಿ, ದಲಿತ ವಿರೋಧಿ ಎಂದು ಪ್ರಚಾರ ಮಾಡುತ್ತಾ, ದಲಿತರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಲಾಯಿತು. ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುತ್ತಿರುವ ಕ್ರಮವನ್ನು ವಿರೋಧಿಸುತ್ತಿರುವಲ್ಲಿಯೂ ಕೋಮು ದ್ವೇಷ ಅಜೆಂಡಾವೇ ಎದ್ದು ಕಾಣುತ್ತಿದೆ. ಮುಸ್ಲಿಮರಿಗೆ ಮೀಸಲಾತಿಯನ್ನು ನೀಡುವುದರಿಂದಾಗಿ ವಂಚಿತ ಸಮುದಾಯಗಳಿಗೆ ಕಿಂಚಿತ್ತೂ ಹಾನಿಯಾಗದು ಎಂಬುದು ವಾಸ್ತವ. ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಸ್ಥಿತಿಯನ್ನು ಪರಿಗಣಿಸಿ ಸಮುದಾಯಕ್ಕೆ ಮೀಸಲಾತಿಯನ್ನು ಹೆಚ್ಚಿಸುವ ಮತ್ತು ಗುತ್ತಿಗೆಯಲ್ಲಿ ಮೀಸಲಾತಿ ನೀಡುವಂತಹ ಮತ್ತಷ್ಟು ಉಪಕ್ರಮಗಳನ್ನು ತೆಗೆದುಕೊಳ್ಳುವ ಸಾಂವಿಧಾನಿಕ ಜವಾಬ್ದಾರಿ ಸರ್ಕಾರದ್ದಾಗಿದೆ. ಬಿಜೆಪಿಯವರ ಕೋಮು ಅಜೆಂಡಾಗಳಿಗೆ ಹೆದರಿ, ಸಾಂವಿಧಾನಿಕ ನಡೆಯನ್ನು ಸರ್ಕಾರ ಬದಲಿಸದಿರಲಿ.
