ರಾಜ್ಯದ ಜನತೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಧಮ್ಮು, ತಾಕತ್ತಿಗೆ ಚುನಾವಣೆಲ್ಲಿ ಸರಿಯಾಗಿಯೇ ಉತ್ತರಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
“ಕಾಂಗ್ರೆಸ್ ಸಿಎಂಗೆ ಧಮ್ಮಿದ್ದರೆ, ತಾಕತ್ತಿದ್ದರೆ ಎಲ್ಲ ಕಡೆಯಿಂದ ಅಕ್ಕಿ ಶೇಖರಿಸಿ. ಕೆಂದ್ರದ 5 ಕೆಜಿ ಅಕ್ಕಿ ಜತೆ, 10 ಕೆಜಿ ಸೇರಿ ಪ್ರತಿಯೊಬ್ಬರಿಗೆ 15 ಕೆಜಿ ಅಕ್ಕಿ ಕೊಡಿ” ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಬಿಜೆಪಿ ವತಿಯಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿ ನಡೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಸವಾಲು ಹಾಕಿದ್ದರು. ಈ ವಿಚಾರವಾಗಿ ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು.
“ರಾಜ್ಯದ ಬಡವರಿಗೆ ಕೇಂದ್ರ ಬಿಜೆಪಿ ಸರ್ಕಾರ ಮೋಸ ಮಾಡಿದೆ. ಅಧಿಕಾರಕ್ಕೆ ಬರದಿದ್ದರೆ ಕೇಂದ್ರದ ಯೋಜನೆ ಸ್ಥಗಿತ ಮಾಡುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಚುನಾವಣೆಗೂ ಮುನ್ನ ರಾಜ್ಯದ ಜನರನ್ನು ಹೆದರಿಸಿದ್ದರು. ಈಗ ಅದನ್ನು ನಿಜ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅನ್ನಭಾಗ್ಯ ಯೋಜನೆ ಮೂಲಕ 10 ಕೆಜಿ ಅಕ್ಕಿ ಕೊಡಲು ನಾವು ಘೋಷಿಸಿದ್ದೇವೆ. ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ನಮಗೆ ದುಡ್ಡಿಗೆ ಕೊಡಿ ಎಂದು ಭಾರತೀಯ ಆಹಾರ ನಿಗಮವನ್ನು ಕೋರಿಕೊಂಡಿದ್ದೇವು. ಆದರೆ, ರಾಜಕೀಯ ದುರುದ್ದೇಶದಿಂದ ಅಕ್ಕಿ ನೀಡಲು ನಿರಾಕರಿಸಿದ್ದಾರೆ” ಎಂದು ದೂರಿದರು.