ಆರ್ಎಸ್ಎಸ್ ಹೇಳಿದಂತೆ ಬಿಜೆಪಿ ಕೇಳುತ್ತದೆ. ನಾವು ಆರ್ಎಸ್ಎಸ್ನವರಿಗೆ ಹೆದರುವವರಲ್ಲ. ನಮ್ಮ ಪಕ್ಷ ಅವರನ್ನು ಎದುರಿಸಲು ಸಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಪ್ರತಿಪಕ್ಷದ ನಾಯಕರ ವಿರುದ್ಧ ಗುಡುಗಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡುತ್ತ, “ದಲಿತರ, ಹಿಂದುಳಿದವರ ಏಳಿಗೆ ಸಹಿಸದ ಬಿಜೆಪಿಗೆ ದಲಿತರು ದಲಿತರ ಕಾಲೋನಿಯಲ್ಲೇ ಇರಬೇಕು ಎನ್ನುವ ದುರುದ್ದೇಶವಿದೆ.1942 ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು ನೀವು. ನೀವು ಬ್ರಿಟಿಷರ ಏಜೆಂಟರು” ಎಂದು ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಸದಸ್ಯರು ಯಾವಾಗ ರಾಜೀನಾಮೆ ನೀಡುತ್ತಾರೆ?
ಚುನಾವಣೆಯ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಸೋಲಿಗೆ ಸಾವರ್ಕರ್ ಕಾರಣರಾದರು ಎಂದು ಸಾಬೀತುಪಡಿಸುವ ದಾಖಲೆಯನ್ನು ನಾವು ಹಾಜರುಪಡಿಸಿದರೆ ರಾಜೀನಾಮೆ ನೀಡುವುದಾಗಿ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಘೋಷಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಎದ್ದು ನಿಂತು, “ಜನವರಿ 18, 1952ರಂದು, ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಪರಿಚಯಸ್ಥರಿಗೆ ಪತ್ರ ಬರೆದು, ವಿನಾಯಕ ದಾಮೋದರ್ ಸಾವರ್ಕರ್ ತಮ್ಮ ಚುನಾವಣಾ ಸೋಲಿಗೆ ಹೇಗೆ ಪಾತ್ರ ವಹಿಸಿದ್ದಾರೆ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತಮ್ಮ ಪತ್ರದಲ್ಲಿ, ಡಾ. ಅಂಬೇಡ್ಕರ್ ಅವರು ಸಾವರ್ಕರ್ ತಮ್ಮ ಸೋಲಿಗೆ ಕಾರಣವೆಂದು ನಂಬಿದ ಅಂಶಗಳನ್ನು ವಿವರಿಸಿದರು, ಸಾವರ್ಕರ್ ಅವರ ಪ್ರಭಾವ ಮತ್ತು ರಾಜಕೀಯ ಕುಶಲತೆಯನ್ನು ತಮ್ಮ ಪತ್ರದಲ್ಲಿ ಎತ್ತಿ ತೋರಿಸಿದ್ದರು. ಆ ಪತ್ರ ಇಲ್ಲಿದೆ. ಬಿಜೆಪಿ ಸದಸ್ಯರು ಯಾವಾಗ ರಾಜೀನಾಮೆ ನೀಡುತ್ತಾರೆ” ಎಂದು ಸವಾಲು ಹಾಲಿದರು.
ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ: ಸಿ.ಎಂ
ದಲಿತ ಸಮುದಾಯಕ್ಕೆ ಗುಜರಾತ್ ಬಿಜೆಪಿ ಸರ್ಕಾರ 2.38% ರಷ್ಟು, ಮಹಾರಾಷ್ಟ್ರ 3.6% ಹಾಗೂ ಕೇಂದ್ರ ಸರ್ಕಾರ ಕೇವಲ 2.87% ಮಾತ್ರ ಹಣ ಬಜೆಟ್ ನಲ್ಲಿ ತೆಗೆದಿಟ್ಟಿದೆ. ಆದರೆ ಕಾಂಗ್ರೆಸ್ ಸರ್ಕಾರ ಶೇ.7.46 ರಷ್ಟು ಹಣ ಮೀಸಲಿಟ್ಟು ಖರ್ಚು ಮಾಡಿದೆ ಎಂದು ಸಿ.ಎಂ ವಿವರಿಸಿದರು.
ಬಿಜೆಪಿ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯಡಿ 5 ವರ್ಷಗಳಲ್ಲಿ 35,464 ಕೋಟಿ ಅನುದಾನ ಹಂಚಿಕೆ ಮಾಡಿ 22,480 ಕೋಟಿ ವೆಚ್ಚ ಮಾಡಿದ್ದಾರೆ. ಈ ಕಾಯ್ದೆ ಬಂದದ್ದಕ್ಕೆ ಜನಸಂಖ್ಯೆ ಅನುಸಾರವಾಗಿ ಹಣ ವೆಚ್ಚ ಮಾಡಬೇಕು. 17.15% ಪ.ಜಾತಿ, ಪ.ವರ್ಗ 6.95% ಎರಡೂ ಸೇರಿ 24.1% ಇದ್ದಾರೆ. ಯೋಜನೆಯ ಹಣದಲ್ಲಿ 24.1 % ಕೂಡಲೇಬೇಕು. ಮೊದಲು ಅಷ್ಟು ಖರ್ಚು ಮಾಡುತ್ತಿರಲಿಲ್ಲ. ಒಂದು ವೇಳೆ ಹಣವನ್ನು ಖರ್ಚು ಮಾಡದೆ ಹೋದರೆ ಅಧಿಕಾರಿಯ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಈ ವರ್ಷ ಖರ್ಚು ಮಾಡಲು ಸಾಧ್ಯವಾಗದಿದ್ದರೆ ಮುಂದಿನ ವರ್ಷಕ್ಕೆ ಅದು ಸೇರಿಕೊಳ್ಳುತ್ತದೆ. 39,121 ಕೋಟಿ ಕಳೆದ ವರ್ಷ ಮೀಸಲಿಟ್ಟಿದ್ದು, ಈ ಸಾಲಿಗೆ 42,018 ಕೋಟಿ ಮೀಸಲಿಡಲಾಗಿದೆ. ಕಾಯ್ದೆಯನ್ನು ಸಂವಿಧಾನದ ಆಶಯಗಳನ್ನು ಈಡೇರಿಸಲೆಂದು ರೂಪಿಸಲಾಗಿದೆ” ಎಂದರು.
“ಕೇಂದ್ರ ಸರ್ಕಾರ ಇಂದಿನವರೆಗೆ ಎಸ್.ಸಿ. ಪಿ / ಟಿ ಎಸ್ ಪಿ ಕಾಯ್ದೆಯನ್ನು ಜಾರಿ ಮಾಡಿಲ್ಲ. ಕರ್ನಾಟಕ ಮಾದರಿಯಲ್ಲೇ ಕೇಂದ್ರ ಸರ್ಕಾರ ಎಸ್.ಸಿ. ಪಿ/ ಟಿ ಎಸ್ ಪಿ ಕಾಯ್ದೆ ಜಾರಿ ಮಾಡಲಿ ಎಂದು ಸರ್ವಾನುಮತದ ನಿರ್ಣಯ ಮಾಡೋಣ” ಎಂದು ಕರೆ ನೀಡಿದರು.
“2019-23 ಸಾಲಿನಲ್ಲಿ ಈವರೆಗೆ ಅದಿಕಾರದಲ್ಲಿದ್ದ ಬಿಜೆಪಿ ಡೀಮ್ಡ್ ವೆಚ್ಚದಲ್ಲಿ ಏಕೆ ವೆಚ್ಚ ಮಾಡಲಿಲ್ಲ? ದಲಿತ ಸಂಘಟನೆಗಳು ಮೊದಲಿನಿಂದಲೂ ಬೇಡಿಕೆ ಯಿಟ್ಟಿರುವಂತೆ ನಮ್ಮ ಅಧಿಕಾರಾವಧಿಯಲ್ಲಿ ಕಾಯ್ದೆಯಲ್ಲಿ 7ಡಿ ತೆಗೆದು ಹಾಕಲಾಯಿತು.
ಬಿಜೆಪಿಯವರು ಏಕೆ ತೆಗೆಯಲಿಲ್ಲ” ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು.
“ಇಡೀ ದೇಶದಲ್ಲಿ ಎಸ್ ಸಿ/ ಎಸ್ ಟಿ ಗಳ ಜನಸಂಖ್ಯೆ 2011ರ ಜನಗಣತಿ ಪ್ರಕಾರ ಶೇ.16.6 ಎಸ್.ಸಿ ಹಾಗೂ ಶೇ.8.6 ಎಸ್.ಟಿ ಇದ್ದು, ಎರಡೂ ಸೇರಿ ಒಟ್ಟು ಶೇ.27.2 ಇದ್ದಾರೆ. ಇವರ ಜನಸಂಖ್ಯೆಗನುಗುಣವಾಗಿ ಬಿಜೆಪಿ ಯವರು ಖರ್ಚು ಮಾಡಲಿಲ್ಲ. ಕೇವಲ ಶೇ.2.87 ಖರ್ಚು ಮಾಡಿದ್ದಾರೆ. ದೇಶದಲ್ಲಿ ಪರಿ.ಜಾ ಶೇ.16.6, ಪಂ.ವರ್ಗ ಶೇ.8.6 ಸೇರಿ ಒಟ್ಟು ಶೇ.25.2 ಇದ್ದು ಕೇವಲ ಶೇ.2.87 ವೆಚ್ಚ ಮಾಡಿದ್ದಾರೆ. 7ಡಿ ಬಗ್ಗೆ ಬಹಳ ದಿನಗಳಿಂದ ಒತ್ತಾಯವಿತ್ತು. ಆದ್ದರಿಂದ ಕಳೆದ ವರ್ಷ ತಿದ್ದುಪಡಿ ತಂದು ತೆಗೆದುಹಾಕಿದೆವು
7ಸಿ ತೆಗೆದುಹಾಕಿಲ್ಲ” ಎಂದರು